ಕವಿವಿ ನೂತನ ಕುಲಪತಿ ನೇಮಕಕ್ಕೆ ಮಧ್ಯಂತರ ತಡೆ

| Published : Jul 09 2025, 12:25 AM IST

ಸಾರಾಂಶ

ಅರ್ಹತೆ, ನ್ಯಾಯ ಹಾಗೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ವಿಶ್ವವಿದ್ಯಾಲಯದ ಕುಲಪತಿ ನೇಮಕವಾಗಿಲ್ಲ. ನೇಮಕದ ವೇಳೆ ಕೆಲವು ಮಾನದಂಡಗಳನ್ನು ಪರಿಗಣಿಸಿಲ್ಲ ಎಂಬುದು ಕರಿದುರಗನವರ ಅವರ ಆಕ್ಷೇಪ.

ಧಾರವಾಡ: ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ರಾಜ್ಯ ಸರ್ಕಾರ ನೂತನ ಕುಲಪತಿಗಳನ್ನು ನೇಮಿಸಿ ಒಂದೇ ದಿನದಲ್ಲಿ ನೇಮಕ‌ ವಿಚಾರ ನ್ಯಾಯಾಲಯದ ಮೆಟ್ಟಿಲು ಏರಿದೆ. ಕವಿವಿ ಕುಲಪತಿಗಳ ನೇಮಕ‌ ಪ್ರಕ್ರಿಯೆ ಸರಿಯಾಗಿಲ್ಲ ಎಂದು ಕವಿವಿ ಹಿರಿಯ ಪ್ರಾಧ್ಯಾಪಕರಾದ ಡಾ. ಮಹಾದೇವಪ್ಪ ಕರಿದುರಗನವರ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ರಿಟ್‌ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್ ಪೀಠವು ಈ ವಿಚಾರವಾಗಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಂತೆ ಸೋಮವಾರ ಮಧ್ಯಂತರ ಆದೇಶ ನೀಡಿ ವಿಚಾರಣೆಯನ್ನು ಜು. 23ಕ್ಕೆ ಮುಂದೂಡಿದೆ.

ಕವಿವಿ ಕುಲಪತಿ ಹುದ್ದೆಯು ಕಳೆದ 10 ತಿಂಗಳಿಂದ ಖಾಲಿ ಇತ್ತು. 2 ದಿನಗಳ ಹಿಂದಷ್ಟೇ ಮಂಗಳೂ‌ರು‌ ವಿವಿ ಹಿರಿಯ ಪ್ರಾಧ್ಯಾಪಕ‌ ಡಾ. ಎ.ಎಂ. ಖಾನ್ ಅವರನ್ನು ಕಾಯಂ ಕುಲಪತಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಅದರಂತೆ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರಾದರೂ ನ್ಯಾಯಾಲಯದ ಆದೇಶದಂತೆ ಕಾನೂನು ತೊಡಕು ಎದುರಾಗಿದೆ.

ಅರ್ಹತೆ, ನ್ಯಾಯ ಹಾಗೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ವಿಶ್ವವಿದ್ಯಾಲಯದ ಕುಲಪತಿ ನೇಮಕವಾಗಿಲ್ಲ. ನೇಮಕದ ವೇಳೆ ಕೆಲವು ಮಾನದಂಡಗಳನ್ನು ಪರಿಗಣಿಸಿಲ್ಲ ಎಂಬುದು ಕರಿದುರಗನವರ ಅವರ ಆಕ್ಷೇಪ. ಈ ಬಗ್ಗೆ ಸಲ್ಲಿಕೆ ಆಗಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪಸಿಂಗ್ ಅವರಿದ್ದ ಪೀಠವು ರಾಜ್ಯಪಾಲರ ಪ್ರತಿನಿಧಿ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಕರ್ನಾಟಕ ವಿವಿ ಪ್ರತಿನಿಧಿಯಾಗಿ ಕುಲಸಚಿವ ಹಾಗೂ ಕುಲಪತಿ ಡಾ. ಖಾನ್ ಅವರಿಗೆ ನೋಟಿಸ್ ಜಾರಿಗೊಳಿಸಿ ಕುಲಪತಿ ನೇಮಕಕ್ಕೆ ಸಂಬಂಧಿಸಿ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಆದೇಶ ನೀಡಿದೆ. ಅರ್ಜಿ‌ ಸಲ್ಲಿಸಿದ ಕರಿದುರಗನವರ ಅವರೂ ಕುಲಪತಿ‌‌ ಹುದ್ದೆ ಆಕಾಂಕ್ಷಿ ಆಗಿದ್ದು, ನ್ಯಾಯಾಲಯ ಮೆಟ್ಟಿಲು ಏರಲು ಪ್ರಮುಖ ಕಾರಣವಾಗಿದೆ.