ಕನ್ನಡಪ್ರಭ ವಾರ್ತೆ ಮಡಿಕೇರಿ
ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅವರ ನೇತೃತ್ವದಲ್ಲಿ ಅನುಭವ ಮಂಟಪದಲ್ಲಿ ಹಲವು ಕಾಯಕ ಶರಣರು ವರ್ಣ ವ್ಯವಸ್ಥೆ, ಜಾತಿ ಪದ್ಧತಿ, ಮೌಢ್ಯ ವಿರುದ್ಧ, ಅಜ್ಞಾನ ಹಾಗೂ ಕಂದಾಚಾರಗಳನ್ನು ಹೋಗಲಾಡಿಸಿ ಸರ್ವರಿಗೂ ಸಮಾನತೆ ತರಲು ಶ್ರಮಿಸಿದ್ದಾರೆ ಎಂದು ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಭಾಷಾ ಶಿಕ್ಷಕಿ ಹೇಮಲತಾ ಬಿ.ಬಿ. ಅವರು ಹೇಳಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ‘ಕಾಯಕ ಶರಣರ ಜಯಂತಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಡೊಹಾರ್ ಕಕ್ಕಯ್ಯ, ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಉರಿಲಿಂಗ ಪೆದ್ದಿ ಹಾಗೂ ಸಮಗಾರ ಹರಳಯ್ಯ ಅವರು ವೃತ್ತಿಯ ಮೂಲಕ ಸಮಾಜದಲ್ಲಿ ಕಾಯಕವೇ ಕೈಲಾಸ ಎಂಬುದನ್ನು ಸಾರಿದ್ದಾರೆ ಎಂದು ಹೇಳಿದರು.ಮಾದರ ಧೂಳಯ್ಯ ಅವರು ಬಸವ ಕಲ್ಯಾಣದ ಕಾಯಕ ಯೋಗಿಯಾಗಿದ್ದರು. ಕಾಯಕ ನಿಷ್ಠೆ ಮತ್ತು ಆತ್ಮಜ್ಞಾನದಿಂದ ಮಹಾಜ್ಞಾನಿಯಾಗಿ ಬೆಳೆದವರು. ಬೀದರ್ ಜಿಲ್ಲೆಯ ಬಸವಕಲ್ಯಾಣ ಇವರ ಜನ್ಮ ಸ್ಥಳ ಮತ್ತು ಕರ್ಮ ಭೂಮಿಯಾಗಿತ್ತು. ಧೂಳೇಶ್ವರ ನಿಮ್ಮ ಶರಣರ ಪಾದಕ್ಕೆ ನಮೋ ನಮೋ ಎಂದು ಜ್ಞಾನ ಮೋಕ್ಷ, ಭಕ್ತಿಯ ಶ್ರೇಷ್ಠತೆ ಎಂದು ಸಾರಿದ್ದಾರೆ ಎಂದರು.
ಮತ್ತೊಬ್ಬ ಶರಣರು ಉರಿಲಿಂಗ ಪೆದ್ದಿ ಅವರು ವಚನಕಾರ ಮತ್ತು ಕ್ರಾಂತಿಕಾರಿ ಶರಣರಾಗಿದ್ದರು. ಮಂಗಳ ಲಿಂಗ ಅಂಗದ ಮೇಲೆ ಇದ್ದು, ಅನ್ಯ ಲಿಂಗಿಗಳ ನೆರವನ ನಿಮ್ಮ ಭಕ್ತನು ಉರಿಲಿಂಗ ಪೆದ್ದಿ ವಿಶ್ವೇಶ್ವರ ಎಂದು ತಿಳಿಸಿದ್ದಾರೆ ಎಂದು ಅವರು ನುಡಿದರು.
ಮತ್ತೊಬ್ಬ ಶರಣರಾದ ಸಮಗಾರ ಹರಳಯ್ಯ ಅವರು ಹನ್ನೇರಡನೇ ಶತಮಾನದ ಬಸವಣ್ಣನವರ ಸಮಕಾಲೀನ ವಚನಕಾರರಾಗಿದ್ದು, ಪಾದರಕ್ಷೆ ಚಮ್ಮವಗೆ ತಯಾರಿಸುವ ಕಾಯಕದ ಮೂಲಕ ಗುರುಲಿಂಗ ಜಂಗಮ ಸೇವೆ ಮಾಡಿದ ಇವರು ಸಾಮಾಜಿಕ ಸಮಾನತೆಗೆ ಹೋರಾಡಿದ್ದ ಹರಳಯ್ಯ ಅವರು ಅನುಭವ ಮಂಟಪದಲ್ಲಿ ಒಬ್ಬರಾಗಿದ್ದರು ಎಂದು ತಿಳಿಸಿದರು.
ಕಲ್ಯಾಣ ಕ್ರಾಂತಿಗೆ ಕಾರಣರಾದ ಹರಳಯ್ಯನವರ ಮಗ ಶೀಲವಂತ ಮತ್ತು ಉನ್ನತ ಸಮಾಜದ ಮಧುವರಸ ಮಗಳ ಮದುವೆಯು ಬಸವಣ್ಣನವರ ಸಮಾನತೆಯ ತತ್ವದಂತೆ ನಡೆಯಿತು. ಇದು ಕಲ್ಯಾಣದಲ್ಲಿ ನಡೆದ ಜಾತಿ, ವರ್ಣ ರಹಿತ ಸಮಾಜದ ಪ್ರಯತ್ನವಾಗಿತ್ತು ಎಂದು ಹೇಮಲತಾ ಅವರು ವಿವರಿಸಿದರು.ಶರಣರ ಮಗಳನ್ನು ಶರಣರ ಮಗನಿಗೆ ಕೊಡುವುದು ತಪ್ಪಿಲ್ಲ ಎಂದು ಬಸವಣ್ಣನವರು ನುಡಿದಿದ್ದರು. ಅಂತರ ಜಾತಿ ವಿವಾಹವನ್ನು ಬಸವಣ್ಣ ಅವರು ಪ್ರೋತ್ಸಾಹಿಸಿದ್ದರು,
ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನೆರೆಮನೆಯ ದುಃಖಕ್ಕೆ ಅಳುವವರಾ ಮೆಚ್ಚ ಕೂಡಲಸಂಗಮ ದೇವಾ... ಪರಿವರ್ತನೆ, ಬದಲಾವಣೆ ನಮ್ಮಿಂದ ಪ್ರಾರಂಭ ಆಗಬೇಕು ಎಂದು ವಚನಕಾರರು ಸಾರಿದ್ದಾರೆ ಎಂದರು.ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಅಬ್ದುಲ್ ನಜೀಜ್ ಅವರು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ, ಮಣಜೂರು ಮಂಜುನಾಥ್, ವನಿತಾ, ಇತರರು ಇದ್ದರು.
