ಬಾಲಭವನಕ್ಕೆ ಶೀಘ್ರವೇ ಕಾಯಕಲ್ಪ: ಎಂ.ಸಿ.ಪ್ರಕಾಶ್

| Published : Nov 11 2024, 12:56 AM IST

ಬಾಲಭವನಕ್ಕೆ ಶೀಘ್ರವೇ ಕಾಯಕಲ್ಪ: ಎಂ.ಸಿ.ಪ್ರಕಾಶ್
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ ಮಾತನಾಡಿ, ಮಕ್ಕಳು ದೇಶದ ಸಂಪತ್ತು. ಅಂತಹ ಮಕ್ಕಳಿಗೆ ದೈಹಿಕ, ಮಾನಸಿಕ, ಸಾಂಸ್ಕೃತಿಕವಾಗಿ ಪ್ರತಿಭಾನ್ವಿತರನ್ನಾಗಿ ಮಾಡಲು ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಕ್ಕಳ ಚಟುವಟಿಕೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಬಾಲಭವನದ ಮೂಲ ಸೌಲಭ್ಯಗಳಿಗೆ ಶೀಘ್ರ ಕಾಯಕಲ್ಪ ನೀಡಲಾಗುವುದು ಎಂದು ನಗರಸಭಾಧ್ಯಕ್ಷ ಎಂ.ಸಿ. ಪ್ರಕಾಶ್ (ನಾಗೇಶ್) ಭರವಸೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸಮಿತಿ ಇವರ ವತಿಯಿಂದ ನಡೆದ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಹಿಂದೆಲ್ಲಾ ಯಾವುದೇ ಸ್ಪರ್ಧೆ, ಚಟುವಟಿಕೆ ಮಾಡಲು ಉದ್ಯಾನಗಳನ್ನೇ ಆಶ್ರಯಿಸಬೇಕಿತ್ತು. ಇದೀಗ ಬಾಲಭವನ ಇದೆ. ಒಳ್ಳೆಯ ಚಟುವಟಿಕೆಗಳು ನಡೆಯುತ್ತಿವೆ. ಇದಕ್ಕೆ ಅಗತ್ಯವಾದ ಮೂಲಭೂತ ಸೌಲಭ್ಯಗಳ ಕೊರತೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ನಮ್ಮ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಮುಂದಿನ ವಾರದೊಳಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ ಮಾತನಾಡಿ, ಮಕ್ಕಳು ದೇಶದ ಸಂಪತ್ತು. ಅಂತಹ ಮಕ್ಕಳಿಗೆ ದೈಹಿಕ, ಮಾನಸಿಕ, ಸಾಂಸ್ಕೃತಿಕವಾಗಿ ಪ್ರತಿಭಾನ್ವಿತರನ್ನಾಗಿ ಮಾಡಲು ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳು ಕರಗದ ಸಂಪತ್ತು. ವಿದ್ಯಾವಂತರಾಗಿ ಸಮಾಜದ ಅಭಿವೃದ್ಧಿಗೆ ತೊಡಗಿಸಿಕೊಳ್ಳುವಂತಹ ವ್ಯಕ್ತಿಗಳಾದರೆ ಅದು ಖಂಡಿತ ಕರಗಿಸಲಾಗದ ಆಸ್ತಿಯಾಗುತ್ತದೆ. ಮಕ್ಕಳ ಅಭಿವೃದ್ಧಿಗಾಗಿ ಕಲಾ ಪುರಸ್ಕಾರ ಸೇರಿ ಬೇರೆ ಬೇರೆ ಚಟುವಟಿಕೆಗಳಿಗೆ ತರಬೇತಿ ನೀಡಲಾಗುತ್ತಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದನ್ನು ಸಾಬೀತುಪಡಿಸಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ನಗರಭೆ ಉಪಾಧ್ಯಕ್ಷ ಎಂ.ಪಿ. ಅರುಣ್‌ಕುಮಾರ್, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಕೋಮಲ್‌ಕುಮಾರ್, ಜಿಲ್ಲಾ ಬಾಲಭವನ ಮೇಲ್ವಿಚಾರಕಿ ಕೋಮಲ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.