ಕಾಯಕತತ್ವ ಪಾಲಿಸಿ ಬಸವ ಜಯಂತಿ ಆಚರಿಸಿ: ಶ್ರೀಚಂದ್ರಶೇಖರ ಸ್ವಾಮೀಜಿ

| Published : May 15 2024, 01:31 AM IST

ಕಾಯಕತತ್ವ ಪಾಲಿಸಿ ಬಸವ ಜಯಂತಿ ಆಚರಿಸಿ: ಶ್ರೀಚಂದ್ರಶೇಖರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಯಕವೇ ಕೈಲಾಸ ಎಂದು ದುಡಿಮೆ ಮಹತ್ವವನ್ನು ಅಣ್ಣನವರು ಸಾರಿದ್ದಾರೆ. ಇಂದಿನ ಯುವಜನತೆ ಯಾವುದೇ ಕೆಲಸವನ್ನು ಮೇಲು-ಕೀಳೆಂದು ನೋಡದೆ ದುಡಿಯುವ ಮೂಲಕ ತಮ್ಮ ಬದುಕು ಹಸನಾಗಿಸಿಕೊಳ್ಳಬೇಕು. ದುಡಿದು ತಿನ್ನುವುದು ಪ್ರಸಾದ ದುಡಿಯದೆ ತಿನ್ನುವುದು ಕೂಳು ಎಂಬ ಸಿದ್ದಗಂಗಾಶ್ರೀಗಳ ವಾಣಿಯನ್ನು ಅರಿತಾಗ ಮಾತ್ರ ಸಾರ್ಥಕ ಬದುಕು ನಡೆಸಲು ಸಾಧ್ಯ.

ಕನ್ನಡಪ್ರಭ ವಾರ್ತೆ ಮದ್ದೂರು

ವಿಶ್ವಗುರು ಬಸವಣ್ಣನವರ ಕಾಯಕ, ದಾಸೋಹ ತತ್ವದಂತೆ ಪ್ರತಿಯೊಬ್ಬರೂ ಸೋಮಾರಿಗಳಾಗದೆ ಕಾಯಕವನ್ನೇ ಜೀವನದ ಗುರಿಯನ್ನಾಗಿಸಿಕೊಂಡು ದೇಶದ ಅಭಿವೃದ್ಧಿಗೆ ಮುನ್ನಡೆಯಬೇಕು ಎಂದು ಬಿ.ಜಿ.ಪುರ ಹೊರಮಠದ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರ ಸ್ವಾಮೀಜಿ ಸಲಹೆ ನೀಡಿದರು.

ತಾಲೂಕಿನ ಎಸ್.ಐ.ಹೊನ್ನಲಗೆರೆಯ ಸಂಸ್ಕೃತಿ ಭವನದಲ್ಲಿ ಶರಣರ ಸಂಘಟನಾ ವೇದಿಕೆ ಹಾಗೂ ಹಿಂದೂ ದೇವಾಲಯಗಳ ಅರ್ಚಕರ ಸಂಘದಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ನಾಯಕ ಬಸವೇಶ್ವರ ಜಯಂತ್ಯುತ್ಸವ ಹಾಗೂ ಸಿದ್ದಗಂಗಾಶ್ರೀ ಜನ್ಮ ದಿನಾಚರಣೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

ಹನ್ನೆರಡನೇ ಶತಮಾನದಲ್ಲೇ ವಿಶ್ವಕ್ಕೆ ದುಡಿಮೆಯ ಮಹತ್ವವನ್ನು ಸಾರಿದ ಬಸವಣ್ಣನವರು ಪ್ರತಿಯೊಬ್ಬರ ಏಳ್ಗೆ ಕಾಯಕದಿಂದ ಮಾತ್ರ ಸಾಧ್ಯ ಎಂಬುದನ್ನು ತಮ್ಮ ವಚನಸಾರದಲ್ಲಿ ತಿಳಿಸಿದ್ದಾರೆ. ಬಸವಣ್ಣನವರು ದುಡಿಯುವ ವರ್ಗದ ಪರವಾಗಿ ನಿಂತು ಮೌಢ್ಯವನ್ನು ವಿರೋಧಿಸಿ ಸಮಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ಮಹಾಮಾನವತಾವಾದಿ ಎಂದರು.

ಕಾಯಕವೇ ಕೈಲಾಸ ಎಂದು ದುಡಿಮೆ ಮಹತ್ವವನ್ನು ಅಣ್ಣನವರು ಸಾರಿದ್ದಾರೆ. ಇಂದಿನ ಯುವಜನತೆ ಯಾವುದೇ ಕೆಲಸವನ್ನು ಮೇಲು-ಕೀಳೆಂದು ನೋಡದೆ ದುಡಿಯುವ ಮೂಲಕ ತಮ್ಮ ಬದುಕು ಹಸನಾಗಿಸಿಕೊಳ್ಳಬೇಕು. ದುಡಿದು ತಿನ್ನುವುದು ಪ್ರಸಾದ ದುಡಿಯದೆ ತಿನ್ನುವುದು ಕೂಳು ಎಂಬ ಸಿದ್ದಗಂಗಾಶ್ರೀಗಳ ವಾಣಿಯನ್ನು ಅರಿತಾಗ ಮಾತ್ರ ಸಾರ್ಥಕ ಬದುಕು ನಡೆಸಲು ಸಾಧ್ಯ ಎಂದರು.

ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಮಾತನಾಡಿ, ಸಿಎಂ ಸಿದ್ದರಾಮಯ್ಯನವರು ಬಸವಣ್ಣನವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಬೇಕೆಂಬ ಆದೇಶ ಪಾಲನೆಯಾಗಬೇಕಿದೆ. ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯವಹಿಸಿರುವುದು ಖಂಡನೀಯ. ಪೊಲೀಸ್ ಠಾಣೆ, ಆಸ್ಪತ್ರೆಗಳು, ಶಾಲಾ-ಕಾಲೇಜುಗಳು ಸೇರಿದಂತೆ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಅಣ್ಣನವರ ಭಾವಚಿತ್ರ ಹಾಕಿ ಬಸವ ಜಯಂತಿ ಆಚರಿಸಬೇಕೆಂದು ಆಗ್ರಹಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ವೀರಶೈವ ಲಿಂಗಾಯತರು ಬಸವಣ್ಣನವರ ತತ್ವಗಳನ್ನು ಪಾಲಿಸುವ ಮೂಲಕ ಇತರೆ ಸಮಾಜಕ್ಕೆ ಮಾದರಿಯಾಗಬೇಕು. ವಿಶೇಷವಾಗಿ ಯುವಜನತೆ ಶರಣರ ಆದರ್ಶಗಳನ್ನು ಅರ್ಥೈಸಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು.

ಎಸ್.ಐ.ಹೊನ್ನಲಗೆರೆ ಶಿವಕ್ಷೇತ್ರ ಮಠದ ಪೀಠಾಧ್ಯಕ್ಷ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾಂಗ್ರೆಸ್ ಮುಖಂಡ ಹೆಬ್ಬಣಿ ಬಬ್ರುವಾಹನ ಮಾತನಾಡಿದರು. ಇದೇ ಸಂದರ್ಭದಲ್ಲಿ ಉತ್ತಮ ಸಮಾಜ ಸೇವಾ ಪ್ರಶಸ್ತಿಯನ್ನು ಸಮಾಜ ಸೇವಕ ಎಂ.ಆರ್.ಮಂಜುನಾಥ್, ಡಿ.ಸುನೀಲ್, ನಿಜಗುಣಬಿದರಹಳ್ಳಿ, ಆರ್.ಪ್ರಭುಸ್ವಾಮಿ ಅವರಿಗೆ ನೀಡಿ ಗೌರವಿಸಲಾಯಿತು. ಶರಣರ ಸಂಘಟನೆ ವೇದಿಕೆ ಅಧ್ಯಕ್ಷ ಕಾಡುಕೊತ್ತನಹಳ್ಳಿ ನಂದೀಶ್ ಅಧ್ಯಕ್ಷತೆ ವಹಿಸಿದ್ದರು. ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಮಹಿಳಾಧ್ಯಕ್ಷೆ ಕವಿತಾ ಶ್ರೀಕಂಠಸ್ವಾಮಿ ನಿರೂಪಿಸಿ ವಂದಿಸಿದರು. ಅರ್ಚಕರ ಸಂಘದ ಅಧ್ಯಕ್ಷ ಶಿವಲಿಂಗಯ್ಯ ಮೆಣಸಗೆರೆ, ಮಿಮ್ಸ್ ನಿರ್ದೇಶಕ ಡಾ.ನರಸಿಂಹಮೂರ್ತಿ, ಡಾ.ಮನೋಹರ್, ಚಂದಗಾಲು ಅರುಣ್‌ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.