ಕೆಸಿ, ಎಚ್ಎನ್‌ ವ್ಯಾಲಿ 3ನೇ ಹಂತದ ಶುದ್ಧೀಕರಣ ಅನಗತ್ಯ

| Published : Apr 22 2025, 01:45 AM IST

ಸಾರಾಂಶ

ಬಯಲು ಸೀಮೆ ಜಿಲ್ಲೆಗಳ ಅಂತರ್ಜಲ ಮರುಪೂರಣ ಮಾಡಲು ಮಾತ್ರ ಈ ಯೋಜನೆಯ ನೀರನ್ನು ಬಳಸಬಹುದು ಎಂದು ಸರ್ಕಾರ ಸಣ್ಣ ನೀರಾವರಿ ಇಲಾಖೆ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರೂ, ಈ ನೀರಿನಿಂದ ಬೆಳೆಯುವ ಬೆಳೆಗಳನ್ನು ಬಳಸಿದರೆ ಅಪಾಯವಾಗುತ್ತಿದೆ ಎಂದು ಪದೇ ಪದೇ ಅಪಪ್ರಚಾರ ಮಾಡಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕೇವಲ ಅಂತರ್ಜಲ ಮರುಪೂರಣಕ್ಕೆ ಬಳಕೆಯಾಗುವ ಎಚ್.ಎನ್. ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣ ಮಾಡುವ ಪ್ರಮೇಯವಿಲ್ಲ. ಈ ಪ್ರಕ್ರಿಯೆ ಮಾತನಾಡಿಷ್ಟು ಸುಲಭ ಅಲ್ಲ. ಶುದ್ಧೀಕರಣ ಮಾಡಿದರೂ ಕುಡಿಯಲು ಸಾಧ್ಯವಿಲ್ಲ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.ನಗರ ಹೊರವಲಯದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ತ್ರೈ ಮಾಸಿಕ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು,ಅಂತರ್ಜಲ ಮರುಪೂರಣ ಉದ್ದೇಶ

ಬಯಲು ಸೀಮೆ ಜಿಲ್ಲೆಗಳ ಅಂತರ್ಜಲ ಮರುಪೂರಣ ಮಾಡಲು ಮಾತ್ರ ಈ ಯೋಜನೆಯ ನೀರನ್ನು ಬಳಸಬಹುದು ಎಂದು ಸರ್ಕಾರ ಸಣ್ಣ ನೀರಾವರಿ ಇಲಾಖೆ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರೂ, ಈ ನೀರಿನಿಂದ ಬೆಳೆಯುವ ಬೆಳೆಗಳನ್ನು ಬಳಸಿದರೆ ಅಪಾಯವಾಗುತ್ತಿದೆ ಎಂದು ಪದೇ ಪದೇ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.

ಬೆಳೆಗಳಿಗಾಗಲಿ, ಕುಡಿಯಲಾಗಲಿ ಬಳಸುವಂತಿಲ್ಲ ಎಂದು ನಾಮಫಲಕ ಹಾಕಿದ್ದರೂ ಅಕ್ರಮವಾಗಿ ಬಳಸಿಕೊಂಡು ಆರೋಪ ಮಾಡುವುದು ಸರಿಯಲ್ಲ. ಒಂದು ವೇಳೆ ಈ ನೀರಿನಿಂದ ಅಡ್ಡಪರಿಣಾಮಗಳಾಗಿದ್ದರೆ ಮಾಹಿತಿ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ, ಜನರ ಅಭಿಪ್ರಾಯಕ್ಕೆ ಸಹಮತವಿದೆ ಎಂದರು.ಕೃಷಿಹೊಂಡ ಸುತ್ತ ಬೇಲಿ ಹಾಕಿ

ಜಿಲ್ಲೆಯಲ್ಲಿ ಕೃಷಿಹೊಂಡ,ಕೆರೆ, ಕುಂಟೆ ಬಾವಿ,ಹಳ್ಳಗಳಲ್ಲಿ ಮುಳುಗಿ ಸಾಯುವವರ ಸಂಖ್ಯೆ ಹೆಚ್ಚಿದ್ದು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹಾರ ಕೊಡಿಸಲು ಮುಂದಾಗಿರುವಂತೆ ಕೃಷಿಹೊಂಡಗಳ ಸುತ್ತ ಬೇಲಿ ಹಾಕಲು ಸೂಚನೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಹೇಳಲಾಗಿದೆ.ಕೃಷಿಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಮಾಹಿತಿ ನೀಡಿದರೆ ಪರಿಹಾರ ಕೊಡಿಸಲು ಮುಂದಾಗಿದ್ದೇನೆ ಎಂದರು.

ಬೆಳೆವಿಮೆ ಅನ್ಯಾಯದ ಬಗ್ಗೆ ಮಾಹಿತಿ ಪಡೆದಿದ್ದು, ತಪ್ಪುಗ್ರಹಿಕೆಯಿಂದ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲಾಗುವುದು ಎಂದರು.20 ಸಾವಿರ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ವಿಚಾರದಲ್ಲಿ ಸುಪ್ರಿಂಕೋರ್ಟ್ ಮಾರ್ಗಸೂಚಿಗಳನ್ನು ನೀಡಿದೆ. ಅದರಂತೆ ಸಮಿತಿ ಪರಿಶೀಲನೆ ಮಾಡಿ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದರು.

25ರಂದು ರೈತರ ಸಭೆಡೀಪ್‌ಟೆಕ್ ಪಾರ್ಕ್ ಗೊಂದಲ ನಿವಾರಿಸಲು ಏಪ್ರಿಲ್ 25ರಂದು ರೈತರ ಸಭೆಯನ್ನು ಜಂಗಮಕೋಟೆ ಜ್ಞಾನಜ್ಯೋತಿ ಶಾಲೆಯಲ್ಲಿ ಕರೆಯಲಾಗಿದೆ. ಶೇ.70ರಷ್ಟು ರೈತರು ಪಹಣಿ ತಂದು ಸ್ವಯಂ ಪ್ರೇರಿತವಾಗಿ ಬಂದು ಭೂಮಿ ಕೊಡುತ್ತೇನೆ ಎಂದರೆ ಜಂಗಮಕೋಟೆಯಲ್ಲಿಯೇ ಪ್ರಾರಂಭವಾಗಲಿದೆ. ಶೇ.70ಕ್ಕಿಂತ ಹೆಚ್ಚು ಮಂದಿ ವಿರೋಧ ವ್ಯಕ್ತಪಡಿಸಿದರೆ ಈ ಭಾಗದಲ್ಲಿ ಕೈಗಾರಿಕೆ ಮಾಡುವುದಿಲ್ಲ ಎಂದರು.

ಸರ್ಕಾರಿ ಹೂ ಮಾರುಕಟ್ಟೆಹೈಟೆಕ್ ಹೂವಿನ ಮಾರುಕಟ್ಟೆಯನ್ನು ಸರ್ಕಾರದ ಉಸ್ತುವಾರಿಯಲ್ಲಿಯೇ ಪ್ರಾರಂಭಿಸಲಾಗುವುದು. ಖಾಸಗಿ ಸಹಭಾಗಿತ್ವದಲ್ಲಿ ಮಾಡುವುದರಿಂದ ಆಗುವ ಅಪಾಯಗಳ ಬಗ್ಗೆ ಚಿಂತನೆ ಮಾಡಲಾಗಿದ್ದು ಸರ್ಕಾರಿ ಖಾಸಗಿ ಸಹಭಾಗಿತ್ವವನ್ನು ಬಿಟ್ಟು ಸರಕಾರವೇ 150ಕೋಟಿ ವೆಚ್ಚದಲ್ಲಿ ಹೂವಿನ ಮಾರುಕಟ್ಟೆ ನಿರ್ಮಾಣ ಮಾಡಲಿದೆ. ಆಯವ್ಯಯದಲ್ಲಿ ಈ ಬಗ್ಗೆ ಪ್ರಸ್ತಾಪ ಆಗಿರುವುದರಿಂದ ಮಾಡಿಯೇ ತೀರುತ್ತೇನೆ ಎಂದರು.