ಕೆಸಿಸಿ ಬ್ಯಾಂಕಿನಿಂದ ಪ್ರತಿ ತಿಂಗಳು 10 ಸಾವಿರ ಖಾತೆ ತೆರೆಯುವ ಕಾರ್ಯ ಪ್ರಾರಂಭ

| Published : Jan 02 2024, 02:15 AM IST

ಸಾರಾಂಶ

ಹೊಸ ಬೆಳಕು ಯೋಜನೆಯಡಿಯಲ್ಲಿ ಕೆಸಿಸಿ ಬ್ಯಾಂಕಿನ ವ್ಯಾಪ್ತಿಗೆ ಬರುವ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿನ ಪ್ರತಿ ಗ್ರಾಮಗಳ ಮನೆಮನೆಗೆ ನಮ್ಮ ಬ್ಯಾಂಕಿನ ಸಿಬ್ಬಂದಿಯವರು ತೆರಳಿ ಖಾತೆಗಳನ್ನು ತೆರೆಯುವ ಕಾರ್ಯವನ್ನು ಮಾಡುತ್ತಿದ್ದು, ಪ್ರತಿ ತಿಂಗಳು 10 ಸಾವಿರ ಖಾತೆಗಳನ್ನು ತೆರೆಯಲಾಗುತ್ತದೆ ಎಂದು ಬ್ಯಾಂಕಿನ ಕ್ಯಾಲೆಂಡರ್‌ ಬಿಡುಗಡೆ ಸಮಾರಂಭದಲ್ಲಿ ಹೇಳಿದರು.

ಕೆಸಿಸಿ ಬ್ಯಾಂಕಿನ 2024ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ

ಮುಂಡರಗಿ: ಕೆಸಿಸಿ ಬ್ಯಾಂಕ್‌ನಲ್ಲಿ ಖಾತೆ ಇಲ್ಲದವರಿಗೆ ಹೊಸ ಬೆಳಕು ಯೋಜನೆಯಡಿಯಲ್ಲಿ ಬ್ಯಾಂಕಿನ ವ್ಯಾಪ್ತಿಗೆ ಬರುವ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿನ ಪ್ರತಿ ಗ್ರಾಮಗಳ ಮನೆಮನೆಗೆ ನಮ್ಮ ಬ್ಯಾಂಕಿನ ಸಿಬ್ಬಂದಿ ತೆರಳಿ ಖಾತೆಗಳನ್ನು ತೆರೆಯುವ ಕಾರ್ಯವನ್ನು ಮಾಡುತ್ತಿದ್ದು, ಪ್ರತಿ ತಿಂಗಳು 10 ಸಾವಿರ ಖಾತೆ ತೆರೆಯಲಾಗುತ್ತದೆ ಎಂದು ಕೆಸಿಸಿ ಬ್ಯಾಂಕಿನ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು.ಅವರು ಸೋಮವಾರ ಮುಂಡರಗಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರಿ ಯೂನಿಯನ್, ಸಹಕಾರ ಇಲಾಖೆ ಹಾಗೂ ಕೆಸಿಸಿ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಮುಂಡರಗಿ ತಾಲೂಕು ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗೆ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರ ಹಾಗೂ ಕೆಸಿಸಿ ಬ್ಯಾಂಕಿನ ನೂತನ 2024ರ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾಲ ವಿತರಣೆ, ಹೊಸ ಬೆಳಕು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರ ಸಂಘದಲ್ಲಿರುವ ಸಹಕಾರಿಗಳೊಂದಿಗೆ ಅಲ್ಲಿನ ಸೌಲಭ್ಯಗಳ ಕುರಿತು ಚರ್ಚಿಸಲಾಗುತ್ತಿದೆ. ಹಣಕಾಸಿನ ವ್ಯವಹಾರದಲ್ಲಿ ಉತ್ತಮವಾಗಿರುವ ಸಹಕಾರಿಗಳಿಂದ ಹಣ ಪಡೆದು ಅದನ್ನು ಠೇವಣಿ ರೂಪದಲ್ಲಿ ಸಂಗ್ರಹಿಸಿಕೊಂಡು ಯಾರು ಹಣಕಾಸಿನ ಪರಿಸ್ಥಿತಿಯಲ್ಲಿ ತೊಂದರೆಯಲ್ಲಿ ಇರುತ್ತಾರೆಯೋ ಅಂಥವರಿಗೆ ಅವರ ಅರ್ಜಿ ಪಡೆದುಕೊಳ್ಳುವ ಮೂಲಕ ಸಾಲ ಕೊಡುವ ಕೆಲಸ ಮಾಡಲಾಗುತ್ತಿದೆ. ಇಂದು ಒಂದೇ ದಿನದಲ್ಲಿ ನಮ್ಮ ಕೆಸಿಸಿ ಬ್ಯಾಂಕಿನ ವ್ಯಾಪ್ತಿಗೆ ಬರುವ 3 ಜಿಲ್ಲೆಗಳಲ್ಲಿ ಸುಮಾರು ₹24 ಕೋಟಿಗೂ ಅಧಿಕ ಮೊತ್ತದ ಸಾಲ ವಿತರಿಸಲಾಗಿದೆ. ಜ. 15ರ ನಂತರ ನನ್ನ ನಡೆ ಸಹಕಾರಿ ಸಂಘದ ಕಡೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರತಿ ತಿಂಗಳಿನ 2ನೇ ಹಾಗೂ 4ನೇ ಶನಿವಾರ ಸಹಕಾರಿ ಸಂಘಗಳಿಗೆ ತೆರಳಿ ಅಲ್ಲಿನ ಕುಂದು-ಕೊರತೆಗಳ ಕುರಿತು ಚರ್ಚಿಸಲಾಗುತ್ತಿದೆ ಎಂದರು.ಸಾನ್ನಿಧ್ಯವಹಿಸಿ ಕಾರ್ಯಕ್ರಮ ಉದ್ಘಾಟಿಸಿದ ಬಳಗಾನೂರಿನ ಶಿವಶಾಂತವೀರ ಶರಣರು ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ರೈತರನ್ನು ಸಂಘಟಿತರನ್ನಾಗಿ ಮಾಡುವುದು, ಮನುಷ್ಯ ತಾನು ಬೆಳೆಯುವುದರ ಜತೆಗೆ ಮತ್ತೊಬ್ಬರನ್ನು ಬೆಳೆಸುವ ಪ್ರಯತ್ನ ಮಾಡಿದಾಗ ಆ ವ್ಯಕ್ತಿ ದೊಡ್ಡವನಾಗುತ್ತಾನೆ‌. ಅಂತಹ ಉದ್ದೇಶವನ್ನು ಇಟ್ಟುಕೊಂಡಿರುವಂತಹ ಪವಿತ್ರ ಕ್ಷೇತ್ರ ಯಾವುದಾದರೂ ಇದ್ದರೆ ಅದು ಸಹಕಾರಿ ಕ್ಷೇತ್ರ ಎಂದರೆ ತಪ್ಪಾಗಲಿಕ್ಕಿಲ್ಲ. ಕೆಸಿಸಿ ಬ್ಯಾಂಕ್ ಬಡವರಿರಲಿ, ನಿರ್ಗತಿಕರಿರಲಿ, ಮಧ್ಯಮ ವರ್ಗದವರಿರಲಿ ಅವರನ್ನು ಗುರುತಿಸಿ ಅಂಥವರ ಬಾಳಿಗೆ ಬೆಳಕಾಗುವಂತಹ ಕಾರ್ಯವನ್ನು ಮಾಡುತ್ತಾ ಬಂದಿದೆ. ನಿಜವಾಗಿಯೂ ಇಂತಹ ಸಂಸ್ಥೆಗಳು ಬೆಳೆಯಬೇಕು. ಆದ್ದರಿಂದ ಕಷ್ಟದಲ್ಲಿರುವ ಅನೇಕರಿಗೆ ಸಹಾಯ, ಸಹಕಾರ ಮಾಡಲು ಅನುಕೂಲವಾಗುತ್ತದೆ. ಶಿವಕುಮಾರಗೌಡ ಎರಡನೇ ಬಾರಿಗೆ ಅಧ್ಯಕ್ಷರಾಗಿದ್ದು, ಅವರ ಅವಧಿಯಲ್ಲಿ ಬ್ಯಾಂಕು ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದುವಂತಾಗಲಿ ಎಂದರು.ಯಾವುದೇ ಸಂಸ್ಥೆಯಾದರೂ ಪರರಿಗೆ ಉಪಕಾರಿ-ಸಹಕಾರಿಯಾಗುವ ಹಾಗೆ ಬೆಳೆಸುವ ಪ್ರಯತ್ನ ಮಾಡಬೇಕು. ಧಾರವಾಡದ ಕೆಸಿಸಿ ಬ್ಯಾಂಕ್ ಹೊಸ ವರ್ಷ ಆರಂಭಕ್ಕೆ ಹೊಸ ಬೆಳಕು ಎಂಬ ಹೊಸ ಯೋಜನೆ ಜಾರಿ ಮಾಡಿದೆ. ಈ ಯೋಜನೆ ಮೂಲಕ ಹೊಸ ಸಾಲ ವಿತರಣೆ, ಹೊಸ ಠೇವಣಿ ಸಂಗ್ರಹಣೆ, ಹೊಸ ಶೇರು ಸಂಗ್ರಹಣೆ, ಹೊಸ ಸ್ವಸಹಾಯ ಗುಂಪುಗಳ ರಚನೆ ಇತ್ಯಾದಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಕಂಡು ಸಂತಸವಾಗಿದೆ ಎಂದರು. ತಾಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ಗೌರವಿಸಲಾಯಿತು. ಬ್ಯಾಂಕಿನ ಕ್ಯೂಆರ್ ಕೋರ್ಡ್ ಉದ್ಘಾಟಿಸಲಾಯಿತು. ಅನೇಕ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಿಸಲಾಯಿತು. ಮುಂಡರಗಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹಾಲಪ್ಪ ಕಬ್ಬೇರಹಳ್ಳಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಸ್. ಪಾಟೀಲ, ಉಪಾಧ್ಯಕ್ಷ ಪುಲಕೇಶಗೌಡ ಪಾಟೀಲ, ನಾರಾಯಣಪ್ಪ ಇಲ್ಲೂರು, ಎಚ್.ಎಸ್. ಪಾಣಿಗಟ್ಟಿ, ಸಿದ್ದನಗೌಡ ಪಾಟೀಲ, ತಿಪ್ಪಣ್ಣ ಭಜಮ್ಮನವರ, ಎಚ್.ಎ. ಬಂಡೆಣ್ಣವರ ಉಪಸ್ಥಿತರಿದ್ದರು. ಚಂದ್ರಶೇಖರ ಕರಿಯಪ್ಪನವರ ಕಾರ್ಯಕ್ರಮ ನಿರೂಪಿಸಿದರು. ರವಿ ಕಲ್ಲನಗೌಡರ ವಂದಿಸಿದರು.