ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ರಾಜ್ಯ ಸರ್ಕಾರ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ (ಕೆಸಿಸಿಡಿಸಿ)ಕ್ಕೆ 250 ಕೋಟಿ ರು. ಅನುದಾನ ನೀಡಿದ್ದು, ಈ ಮೂಲಕ ವಿವಿಧ ಸಾಲ ಯೋಜನೆಗಳು, ಸಹಾಯಧನ ಹಾಗೂ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ ಎಂದು ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಹೇಳಿದರು.ಸೋಮವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಿಗಮದ ಯೋಜನೆಗಳ ಭಿತ್ತಿಪತ್ರವನ್ನು ಬಿಡುಗಡೆ ಮಾಡಿ ವಿವರಗಳನ್ನು ನೀಡಿದರು.ಸಿದ್ದರಾಮಯ್ಯ ಸರ್ಕಾರವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಧ್ಯೇಯದಿಂದ ಕ್ರಿಶ್ಚಿಯನ್ ಸಮುದಾಯದ ಸಾಮಾಜಿಕ ಹಾಗೂ ಆರ್ಥಿಕ ಹಿತಕ್ಕಾಗಿ ಮತ್ತು ಅವರ ಸಂಸ್ಥೆಗಳ ಬಲವರ್ಧನೆಗಾಗಿ ಈ ನಿಗಮವನ್ನು ಸ್ಥಾಪಿಸಿದ್ದಾರೆ. ನಿಗಮದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಅಧಿಕೃತ ವೆಬ್ ಪೋರ್ಟಲ್‌ನ್ನು ಅ.17ರಂದು ಬೆಂಗಳೂರಿನ ಶೇಷಾದ್ರಿಪುರದ ಕೆಎಂಡಿಸಿ ಭವನದಲ್ಲಿ ಬಿಡುಗಡೆ ಮಾಡಲಾಗಿದೆ. ಕ್ರೈಸ್ತರು ಈ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದರು.ನಿಗಮದ ಮೂಲಕ ಅರಿವು ವಿದ್ಯಾಭ್ಯಾಸ ಸಾಲ (ಸಿಇಓ - ನೀಟ್ ಪರೀಕ್ಷೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 50 ಸಾವಿರದಿಂದ 5 ಲಕ್ಷ ರು.), ವಿದೇಶಿ ವಿದ್ಯಾಭ್ಯಾಸ ಸಾಲ (ವಿದೇಶಿ ವಿವಿಗಳಲ್ಲಿ ಶಿಕ್ಷಣಕ್ಕೆ 20 ಲಕ್ಷ ರು.) ಸ್ವಾಲಂಬಿ ಸಾರಥಿ ಯೋಜನೆ (ಟ್ಯಾಕ್ಸಿ/ಸರಕು ವಾಹನ/ಆಟೋ ರಿಕ್ಷಾ ಖರೀದಿಗೆ 75 ಸಾವಿರ - 3 ಲಕ್ಷ ರು.), ಶ್ರಮಶಕ್ತಿ ಯೋಜನೆ (ಸಣ್ಣ ವ್ಯಾಪಾರ/ವಿಸ್ತರಣೆಗೆ 25 ಸಾವಿರ ಸಾಲ + 25 ಸಾವಿರ ರು. ಸಹಾಯಧನ), ಶ್ರಮಶಕ್ತಿ ಮಹಿಳಾ ಯೋಜನೆ (ವಿಧವೆಯರು/ವಿಚ್ಛೇದಿತರ/ವಿವಾಹವಾಗದ ಮಹಿಳೆಯರಿಗೆ 25 ಸಾವಿರ ರು. ಸಾಲ + 25 ಸಾವಿರ ರು. ಸಹಾಯಧನ) ನೀಡಲಾಗುವುದು.ಅಲ್ಲದೇ ವೃತ್ತಿ ಪ್ರೋತ್ಸಾಹ ಯೋಜನೆ (ಸಣ್ಣ ವ್ಯಾಪಾರ/ಚಿಲ್ಲರೆ ಮಾರಾಟ/ರಿಪೇರಿ ಸೇವೆ ಪ್ರಾರಂಭಿಸಲು 50 ಸಾವಿರ ರು. ಸಾಲ + 50 ಸಾವಿರ ರು. ಸಹಾಯಧನ), ಗಂಗಾ ಕಲ್ಯಾಣ ಯೋಜನೆ (ಬೋರ್ವೆಲ್ ತೋಡಲು, ಪಂಪ್ಸೆಟ್ ಅಳವಡಿಸಲು, ವಿದ್ಯುತ್ ಸಂಪರ್ಕ ಕಲ್ಪಿಸಲು 3 - 4 ಲಕ್ಷ ರು.ಗಳ ವರೆಗೆ ಸಹಾಯಧನ), ನೇರ ವ್ಯವಹಾರ ಸಾಲ (ವ್ಯಾಪಾರ/ವಾಣಿಜ್ಯ ಚಟುವಟಿಕೆಗೆ 20 ಲಕ್ಷ ರು.ಗಳವರೆಗೆ ಸಾಲ), ಮಹಿಳಾ ಸ್ವಸಹಾಯ ಸಂಘ ಯೋಜನೆ (ಸ್ವಉದ್ಯೋಗ ಕೈಗೊಳ್ಳಲು ಶೇ.50 ಸಹಾಯಧನದಲ್ಲಿ 2 ಲಕ್ಷ ರು. ಸಾಲ), ಸಮುದಾಯ ಆಧಾರಿತ ಕೌಶಲ್ಯಾಭಿವೃದ್ಧಿ ತರಬೇತಿಗೆ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಸಾಲ ನೀಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ನಾಯಕರಾದ ವೆರೋನಿಕಾ ಕರ್ನೆಲಿಯೋ, ರೋಶನಿ ಒಲಿವರ್, ವಿನೋದ್ ಕ್ರಾಸ್ಟೋ, ಸದಾನಂದ ಕಾಂಚನ್, ಶರ್ಫುದ್ದೀನ್, ಚಾರ್ಲ್ಸ್ ಅಂಬ್ಲರ್, ಗ್ಲಾಡ್ಸನ್ ಉಪಸ್ಥಿತರಿದ್ದರು.