ಸಾರಾಂಶ
ವಿದ್ಯಾರ್ಥಿಗಳಿಗೆ 4ರಿಂದ 20 ವಾರಗಳ ವೃತ್ತಿ ತರಬೇತಿ, ಇಲ್ಲಿನ ಔದ್ಯೋಗಿಕ ವಾತಾವಾರಣದ ಜ್ಞಾನ ಮತ್ತು ಅವರ ಉದ್ಯೋಗಾವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಒಪ್ಪಂದ ಸಹಕಾರಿಯಾಗಲಿದೆ.
ಧಾರವಾಡ:
ಇಲ್ಲಿಯ ಕರ್ನಾಟಕ ಕಲಾ ಕಾಲೇಜಿನ ಸ್ನಾತಕ-ಸ್ನಾತಕೋತ್ತರ ಪ್ರವಾಸೋದ್ಯಮ ಅಧ್ಯಯನ ವಿಭಾಗವು ಭಾರತದ ಪ್ರತಿಷ್ಠಿತ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಚೆನ್ನೈ ವೃತ್ತ) ದೊಂದಿಗೆ ಶೈಕ್ಷಣಿಕ ಚಟುವಟಕೆಗಳಿಗೆ ಸಹಾಯಕವಾಗಲು ಮತ್ತು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹುಬ್ಬಳ್ಳಿಯ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಜತೆ ಒಪ್ಪಂದಕ್ಕೆ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಸಹಿ ಹಾಕಲಾಯಿತು.ಈ ಮೂಲಕ ವಿದ್ಯಾರ್ಥಿಗಳಿಗೆ 4ರಿಂದ 20 ವಾರಗಳ ವೃತ್ತಿ ತರಬೇತಿ, ಇಲ್ಲಿನ ಔದ್ಯೋಗಿಕ ವಾತಾವಾರಣದ ಜ್ಞಾನ ಮತ್ತು ಅವರ ಉದ್ಯೋಗಾವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಒಪ್ಪಂದ ಸಹಕಾರಿಯಾಗಲಿದ್ದು ಈ ಒಪ್ಪಂದವು 5 ವರ್ಷ ವರೆಗೆ ಒಳಪಟ್ಟಿದೆ ಎಂದು ಪ್ರವಾಸೋದ್ಯಮ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಕಿವುಡನವರ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ ಕುಮಾರ ಮಾತನಾಡಿ, ಈ ಒಪ್ಪಂದದಿಂದ ಪ್ರವಾಸೋದ್ಯಮ ಓದಿದ ಮತ್ತು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಮಾನಯಾನ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗವಕಾಶಗಳಿವೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದರು.ಇದೇ ವೇಳೆ ಹುಬ್ಬಳ್ಳಿಯ ಭಾರತ ವಿಮಾನ ನಿಲ್ದಾಣದ ಪ್ರಾಧಿಕಾರದ ಮ್ಯಾನೇಜರ್ ಪ್ರತಾಪ್ ಮಾತನಾಡಿ, ಕಡಿಮೆ ಶುಲ್ಕದಲ್ಲಿ ಪ್ರವಾಸೋದ್ಯಮ ಪದವಿ ಮತ್ತು ಸ್ನಾತಕೋತ್ತರ ಪದವಿ ಹಾಗೂ ಹೋಟೆಲ್ ಪದವಿ ಪೂರೈಸಿದ ವಿದ್ಯಾರ್ಥಿಗಳು ಈಗಾಗಲೇ ಇಲ್ಲಿ ಉದ್ಯೋಗಾವಕಾಶ ಗಿಟ್ಟಿಸಿಕೊಂಡಿದ್ದಾರೆ. ಇಂತಹ ಅವಕಾಶಗಳು ಅಪರೂಪವೆಂದು ಮತ್ತು ಅಧ್ಯಾಪಕರು ಈ ನಿಟ್ಟಿನಲ್ಲಿ ಮಕ್ಕಳಿಗೆ ಉದ್ಯೋಗವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಈ ವೇಳೆ ಅಧ್ಯಾಪಕಿ ಡಾ. ಸುಷ್ಮಾ ಮಳಿಗಿ ಮತ್ತು ಏರ್‌ಪೋರ್ಟ್ ಸಿಬ್ಬಂದಿ ಭಾಗಿಯಾಗಿದ್ದರು.