ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಪ್ರಥಮ ಘಟ್ಟವಾಗಿದ್ದು ದಿಟ್ಟತನದಿಂದ ಎದುರಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಜಿಲ್ಲಾ ಕೆಡಿಪಿ ಸದಸ್ಯೆ ಬಿ.ಎಂ ಸೌಮ್ಯ ಆನಂದ್ ಹೇಳಿದರು.ಜೂನಿಯರ್ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರಾರಂಭವಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಕೆಡಿಪಿ ಸದಸ್ಯರಾದ ಸೌಮ್ಯ ಆನಂದ್ ಮಾತನಾಡಿ, ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವರೇ ಹೆಚ್ಚು ಆದರೆ ಸರ್ಕಾರಿ ಶಾಲೆಯಲ್ಲಿ ಓದಿದ ಸಾಕಷ್ಟು ವಿದ್ಯಾರ್ಥಿಗಳು ಉತ್ತಮ ಹುದ್ದೆಯಲ್ಲಿದ್ದಾರೆ ಎಂಬುದನ್ನು ಮರೆಯಬಾರದು. ಗಮನವಿಟ್ಟು ಓದಿದರೆ ಮಾತ್ರ ಯಶಸ್ಸು ನಿಮ್ಮದಾಗುತ್ತದೆ. ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಅತ್ಯಂತ ಶ್ರದ್ಧೆಯಿಂದ ಓದಬೇಕು ಹಾಗೂ ಕಠಿಣ ಶ್ರಮ ಪಡಬೇಕು. ನೀವುಗಳು ಉತ್ತಮ ಫಲಿತಾಂಶದ ಜೊತೆಗೆ ಶಾಲೆಗೆ ಹಾಗೂ ನಿಮ್ಮ ಪೋಷಕರಿಗೆ ಕೀರ್ತಿ ತರಲು ಸಾಧ್ಯ. ನಿಮಗೆ ಪಠ್ಯದ ಬಗ್ಗೆ ಯಾವುದೇ ಬಗ್ಗೆ ಸಂದೇಹವಿದ್ದರೂ ಪ್ರಾಧ್ಯಾಪಕರ ಜೊತೆ ಚರ್ಚಿಸಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ವಿದ್ಯಾರ್ಥಿಗಳ ಭವಿಷ್ಯದಲ್ಲಿ ಮಹತ್ವದ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿಗಳು ಯಾವುದೇ ಭಯ ಆತಂಕವಿಲ್ಲದೆ ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆಯಿರಿ. ಆಗ ನೀವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಬರೆಯುವ ವಿದ್ಯಾರ್ಥಿಗಳ ಕೊಠಡಿಗಳಿಗೆ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ರೊಬೋಟಿಕ್ ತಂತ್ರಜ್ಞಾನ ಇದ್ದು ಅಲ್ಲಿ ಯಾವ ವಿದ್ಯಾರ್ಥಿಗಳ ಚಲನವಲನ ಗೊತ್ತಾಗುತ್ತೆ. ನಮ್ಮಲ್ಲೂ ಆ ವ್ಯವಸ್ಥೆ ಇದ್ದು ಇಲ್ಲಿಂದಲೂ ಅದನ್ನು ಗಮಸುತ್ತಿರುತ್ತಾರೆ. ತಾಲೂಕು ಮಟ್ಟದಲ್ಲಿ ಆ ಒಂದು ತಂಡ ಇಲ್ಲಿ ಕೂಡ ಇಲ್ಲಿ ಬಂದಿದೆ. ಹಿಂದೆ ಕೇವಲ ೫೦ % ಬಂದರೆ ಸಾಕು ಅಂತ ಇತ್ತು. ಆದರೆ ಈಗ ಪ್ರತಿಶತ ೧೦೦% ಫಲಿತಾಂಶ ಬರಬೇಕು. ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಬೆಳೆಯಬೇಕು ಅನ್ನುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಪಾಲನೆ ಮಾಡುತ್ತಿದ್ದು, ವಿದ್ಯಾರ್ಥಿಗಳು ಯಾವುದೇ ಅಳುಕು ಭಯ ಇಲ್ಲದೆ ಪರೀಕ್ಷೆ ಬರೆಯಬಹುದಾಗಿದೆ. ಹಾಗಾಗಿ ಎಲ್ಲರೂ ಚನ್ನಾಗಿ ಬರೆದು ಉತ್ತಮ ಅಂಕಪಡೆದು ಶಾಲೆಗೆ ತಂದೆತಾಯಿ ಹಾಗೂ ತಾಲೂಕಿಗೆ ಒಳ್ಳೆಯ ಹೆಸರು ತರಬೇಕು ಎಂದರು.ಈ ವೇಳೆ ವಿದ್ಯಾರ್ಥಿಗಳಿಗೆ ಕೆಡಿಪಿ ಸದಸ್ಯೆ ಸೌಮ್ಯ ಆನಂದ್ ಪೆನ್ನು ಹಾಗೂ ಸಿಹಿ ಹಂಚಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಪಪ್ರಾಂಶುಪಾಲ ಚಂದ್ರಶೇಖರಪ್ಪ, ಶಿಕ್ಷಕರಾದ ರಾಧಿಕ, ಸಣ್ಣ ಸೂರಮ್ಮ, ತಮ್ಮಣ್ಣಗೌಡ, ಜಗದೀಶ್ , ಕೋಮಲ, ಉದಯಭಟ್ ಹಾಜರಿದ್ದರು.