ಸಾರಾಂಶ
ಇಲಾಖೆಯ ಏಳ್ಗೆಗೆ ಶ್ರಮಿಸಿ ನಿವೃತ್ತರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನದಲ್ಲಿ ಹೆಸ್ಕಾಂನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಶ್ರಮಿಸುವುದಾಗಿ ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ್ ಖಾದ್ರಿ ಹೇಳಿದ್ದಾರೆ.
ಹುಬ್ಬಳ್ಳಿ:
ಕೆಇಬಿ ಪಿಂಚಣಿದಾರರ ವಿವಿಧ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ್ ಖಾದ್ರಿ ಹೇಳಿದರು.ಇಲ್ಲಿನ ಗೋಪನಕೊಪ್ಪದಲ್ಲಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಸಭಾಭವನದಲ್ಲಿ ಬುಧವಾರ ನಡೆದ 80 ವರ್ಷ ಪೂರೈಸಿದ ಕೆಇಬಿ ಪಿಂಚಣಿದಾರರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಲಾಖೆಯ ಏಳ್ಗೆಗೆ ಶ್ರಮಿಸಿ ನಿವೃತ್ತರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನದಲ್ಲಿ ಹೆಸ್ಕಾಂನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಶ್ರಮಿಸುವುದಾಗಿ ಭರವಸೆ ನೀಡಿದರು.ಹೆಸ್ಕಾಂನ ತಾಂತ್ರಿಕ ನಿರ್ದೇಶಕ ಎಸ್. ಜಗದೀಶ್ ಮಾತನಾಡಿ, ಹೆಸ್ಕಾಂನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಜತೆ ಚರ್ಚಿಸಿ ಆದ್ಯತೆಯ ಅನುಸಾರ ಕೆಇಬಿ ಪಿಂಚಣಿದಾರರ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ 80 ವರ್ಷ ಪೂರೈಸಿದ ಕೆಇಬಿ ಪಿಂಚಣಿದಾರರನ್ನು ಸನ್ಮಾನಿಸಲಾಯಿತು. ಈ ವೇಳೆ ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್, ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಸ್.ಡಿ. ಉಕ್ಕಲಿ, ಕೆಇಬಿ ಪಿಂಚಣಿದಾರರ ಸಂಘದ ರಾಜ್ಯಾಧ್ಯಕ್ಷ ಬಿ.ಪಿ. ಕುಮಾರಸ್ವಾಮಿ, ಉಪಾಧ್ಯಕ್ಷ ಕೆ. ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿ ಬೋರೆಗೌಡ, ಸಹಕಾರ್ಯದರ್ಶಿ ಶಾಮರಾವ್ ಸೇರಿದಂತೆ ಹಲವರಿದ್ದರು.