ಪ್ರಗತಿಯಲ್ಲಿದೆ ಕೇದಿಗೆರೆ ಸ್ಮಶಾನ ಒತ್ತುವರಿ ತೆರವು ಕಾರ್ಯ: ಪೂರ್ಣಿಮಾ

| Published : Jul 12 2025, 12:32 AM IST

ಪ್ರಗತಿಯಲ್ಲಿದೆ ಕೇದಿಗೆರೆ ಸ್ಮಶಾನ ಒತ್ತುವರಿ ತೆರವು ಕಾರ್ಯ: ಪೂರ್ಣಿಮಾ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ತಾಲೂಕಿನ ಕೇದಿಗೆರೆ ಗ್ರಾಮದ ಸ್ಮಶಾನ ಸರ್ವೇ ಕಾರ್ಯ ಸಂಪೂರ್ಣಗೊಂಡಿದ್ದು ಒತ್ತುವರಿ ತೆರವು ಕಾರ್ಯಗಳು ಪ್ರಗತಿಯಲ್ಲಿದೆ ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾಹಿತಿ ನೀಡಿದರು.

-ಪ.ಜಾತಿ ಕುಂದುಕೊರತೆ ಸಭೆಯಲ್ಲಿ ಕಂದಾಯ, ಪೊಲೀಸ್, ಅರಣ್ಯ ಇಲಾಖೆಗಳ ಸಮಸ್ಯೆಗಳ ಅನಾವರಣ

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಕೇದಿಗೆರೆ ಗ್ರಾಮದ ಸ್ಮಶಾನ ಸರ್ವೇ ಕಾರ್ಯ ಸಂಪೂರ್ಣಗೊಂಡಿದ್ದು ಒತ್ತುವರಿ ತೆರವು ಕಾರ್ಯಗಳು ಪ್ರಗತಿಯಲ್ಲಿದೆ ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾಹಿತಿ ನೀಡಿದರು.

ಶುಕ್ರವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕುಂದುಕೊರತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಿನ ಕೇದಿಗೆರೆ ಗ್ರಾಮದ ಸ್ಮಶಾನ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿದಾಗ ಪ್ರತಿಕ್ರಿಯಿಸಿದರು.ತಾಲೂಕಿನ ಅನೇಕ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಸ್ಮಶಾನದ ಸಮಸ್ಯೆ ಇದ್ದು ಇದರ ಬಗ್ಗೆ ಅನೇಕ ಬಾರಿ ವಿಷಯ ಪ್ರಸ್ತಾಪಿಸಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಡಿಎಸ್ ಎಸ್ ಮಂಜಪ್ಪ ಆರೋಪಿಸಿದರು. ಬೀರೂರು ಪುರಸಭೆ ವ್ಯಾಪ್ತಿಯಲ್ಲಿ ಕಳೆದ 30 ವರ್ಷಗಳಿಂದ ಪರಿಶಿಷ್ಟರಿಗೆ ಒಂದು ನಿವೇಶನ ನೀಡಿಲ್ಲ ಜಮೀನು ಖರೀದಿಸಿ ದಲಿತರಿಗೆ ನೀಡಬೇಕು ಎಂದು ಬೀರೂರು ಚಂದ್ರಶೇಖರ್ ಒತ್ತಾಯಿಸಿದರು. ತಹಸೀಲ್ದಾರ್ ಪುರಸಭೆ ಆಶ್ರಯ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.ಪುರಸಭೆಯಿಂದ ಡಿಡಿ ಮನೆ ಕುರಿತು ಮಾಹಿತಿ ನೀಡಿಲ್ಲ ಎಂಬ ಆರೋಪಕ್ಕೆ ಮುಖ್ಯಾಧಿಕಾರಿ ಈ ಯೋಜನೆ ಕೊಳಗೇರಿ ಅಭಿವೃದ್ಧಿ ಮಂಡಳಿಯವರು ಅನುಷ್ಠಾನಗೊಳಿಸುತ್ತಿದ್ದು ಪುರಸಭೆ ಈ ವಿಷಯದಲ್ಲಿ ಪ್ರವೇಶಿಸುವಂತಿಲ್ಲ ಎಂದರು.ಕೃಷಿ ಇಲಾಖೆಯಿಂದ ಪರಿಶಿಷ್ಟರಿಗೆ 3 ವರ್ಷಗಳಿಂದ ಟಾರ್ಪಾಲ್ ನೀಡುತ್ತಿಲ್ಲ ಎಂಬ ದೂರಿಗೆ ಕೃಷಿ ಅಧಿಕಾರಿ ಅಶೋಕ್ ಈವರೆಗೆ 246 ಪರಿಶಿಷ್ಟರಿಗೆ ಟಾರ್ಪಲ್ ವಿತರಿಸಿರುವ ಪಟ್ಟಿಯನ್ನು ಸಭೆ ಗಮನಕ್ಕೆ ತಂದರು.ಬಳ್ಳಿಗನೂರು ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಇ-ಸ್ವತ್ತು ವಿತರಣೆ ಸಮರ್ಪಕವಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ತಹಸೀಲ್ದಾರ್ ತಾಂತ್ರಿಕ ದೋಷದಿಂದ ಕೆಲವು ಫಲಾನುಭವಿಗಳಿಗೆ ಇ-ಸ್ವತ್ತು ಲಭ್ಯವಾಗಿಲ್ಲ ಪಂಚಾಯಿತಿಯಿಂದ ವಿತರಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.ಕಡೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನ ಹಾಗೂ ಮಲ್ಲೇಶ್ವರ ಗ್ರಾಮದ ಬಾಬು ಜಗಜೀವನ್‌ ರಾಂ ಭವನಗಳು ನಿರ್ಮಾ ಣವಾಗಿದ್ದು ಭವನ ನಿರ್ವಹಿಸಲು ಸಮಿತಿ ರಚಿಸಲಾಗಿದೆ. ಅದರೆ ಈವರೆಗೆ ಭವನಗಳ ನಿರ್ವಹಣೆ ಸಮಿತಿಗೆ ಹಸ್ತಾಂತರಿ ಸಲಾಗಿಲ್ಲ. ಪರಿಣಾಮವಾಗಿ ಇಲ್ಲಿ ಸಾಕಷ್ಟು ಕಾರ್ಯಕ್ರಮ ನಡೆದು ಹಣ ಸಂಗ್ರಹವಾಗಿದೆ. ಲೆಕ್ಕಪತ್ರ ಕೊಡುವವರು ಇಲ್ಲ. ಅಲ್ಲದೆ ಭವನಗಳಿಗೆ ಮುಸಾಫಿರ್ ಖಾನಾ ಹೆಸರಿನಲ್ಲಿಯೇ ದಾಖಲೆಗಳಿವೆ. ಕೂಡಲೆ ಸರ್ವೇ ನಡೆಸಿ ಸಮಿತಿಗೆ ವಹಿಸಿ ಕೊಡಲು ಒತ್ತಾಯಿಸಲಾಯಿತು.ಪೊಲೀಸ್ ಠಾಣೆಗಳಲ್ಲಿ ‘ದಲಿತದಿನ ‘ ಅಚರಣೆಗೆ ಸುತ್ತೋಲೆ ಇದ್ದು ಈವರೆಗೆ ಕಡೂರು ವ್ಯಾಪ್ತಿಯ ಯಾವ ಠಾಣೆಗಳಲ್ಲಿಯೂ ದಲಿತ ದಿನ ಆಚರಿಸಿದ ಉದಾಹರಣೆಗಳಿಲ್ಲ. ಹೀಗಾದರೆ ಪ್ರಯೋಜನ ಏನು ಎಂದು ಕುಂಕಾನಾಡು ಮಂಜುನಾಥ್ ಆರೋಪಿಸಿದರು. ಕಡೂರು ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲಿ ಪಟ್ಟಿ ತಯಾರಿಸಿ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ವೃತ್ತ ನಿರೀಕ್ಷಕ ಸಮಜಾಯಿಷಿ ನೀಡಿದರು.ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸುವುದಿಲ್ಲ ಎನ್ನುವ ಆರೋಪಕ್ಕೆ ನಾವು ಪ್ರಕರಣ ದಾಖಲಿಸಿದರೂ ಕ್ರಮ ವಹಿಸಲು ಮೇಲಾಧಿಕಾರಿಗಳ ನಿರ್ದೇಶನ ಬೇಕಾಗುತ್ತದೆ. ಪೊಲೀಸ್ ಇಲಾಖೆ ಯಾರ ವಿರುದ್ಧವೂ ಇಲ್ಲ, ಆಯ್ದ ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು. ಸಭೆಯಲ್ಲಿ ಕಂದಾಯ, ಸಾರಿಗೆ, ತಾಲೂಕು ಪಂಚಾಯಿತಿ, ಸರ್ವೇ ಇಲಾಖೆ ಕುರಿತು ಚರ್ಚೆ ನಡೆಯಿತು. ತಾಪಂ ಇಒ ಪ್ರವೀಣ್, ಸಮಾಜ ಕಲ್ಯಾಣಾಧಿಕಾರಿ ನಟರಾಜ್, ಕಡೂರು ವೃತ್ತ ನಿರೀಕ್ಷಕ ರಫೀಕ್, ತಾಲೂಕಿನ ವಿವಿಧ ಗ್ರಾಮಗಳ ಪರಿಶಿಷ್ಟ ಮುಖಂಡರು ಭಾಗವಹಿಸಿದ್ದರು.11ಕೆಕೆಡಿಯು2.ಕಡೂರು ತಾಲೂಕು ಎಸ್‍ಸಿ ಎಸ್‍ಟಿ ಕುಂದು ಕೊರತೆ ಸಭೆ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಇಒ ಪ್ರವೀಣ್, ಸಮಾಜಕಲ್ಯಾಣ ಅಧಿಕಾರಿ ನಟರಾಜ್, ಸಿಪಿಐ ರಫೀಕ್ ಇದ್ದರು.