ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬ್ಯಾಂಕಿನಲ್ಲಿ ಸಂಶಯಾಸ್ಪದ ಹಣದ ವ್ಯವಹಾರಗಳು ಕಂಡುಬಂದಲ್ಲಿ ತಕ್ಷಣವೇ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಬ್ಯಾಂಕ್ ಪ್ರತಿನಿಧಿಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಜರುಗಿದ ವಿವಿಧ ಬ್ಯಾಂಕರ್ಸ್ ಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಶಯಾಸ್ಪದ ರೀತಿಯಲ್ಲಿ ಬ್ಯಾಂಕ್ ಖಾತೆಯಿಂದ ₹ 1 ಲಕ್ಷಕ್ಕಿಂತ ಅಧಿಕ ಮೊತ್ತವನ್ನು ಠೇವಣಿ ಮಾಡುವುದಾಗಲಿ ಅಥವಾ ಹಣ ಪಡೆಯುವುದಾಗಲಿ, ಬೇರೆ ಬೇರೆ ಜಿಲ್ಲೆಯಲ್ಲಿನ, ವಿಧಾನಸಭಾ ವ್ಯಾಪ್ತಿಯಲ್ಲಿ ವ್ಯಕ್ತಿಗಳ ಖಾತೆಗೆ ಅಸಾಮಾನ್ಯ ರೀತಿಯಲ್ಲಿ ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡುತ್ತಿರುವ ವ್ಯವಹಾರಗಳ ಬಗ್ಗೆ ನಿಗಾ ವಹಿಸಬೇಕು. ಸಂಶಯಾಸ್ಪದ ಹಣದ ವ್ಯವಹಾರ ಕಂಡುಬಂದಲ್ಲಿ ತಕ್ಷಣ ಜಿಲ್ಲಾ ಚುನಾವಣಾಧಿಕಾರಿಗಳಿಗೆ ತಿಳಿಸಲು ಸೂಚಿಸಿದರು.
ಬ್ಯಾಂಕ್‌ಗಳಿಂದ ನೈಜವಾದ ಹಣದ ಸಾಗಣೆ ಮಾಡುವಾಗ ಅನುಸರಿಸಬೇಕಾದ ಪ್ರಮಾಣಬದ್ಧ ಕಾರ್ಯನಿರ್ವಹಣೆ ವಿಧಾನದ ಬಗ್ಗೆ ತಿಳಿಸಿದ ಜಿಲ್ಲಾಧಿಕಾರಿಗಳು ಮಾದರಿ ನೀತಿಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಇಂಡಿಯನ್ ಬ್ಯಾಂಕರ್ಸ್ ಅಸೋಸಿಯೇಶನ್ ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಯಾವುದೇ ಸಂದರ್ಭದಲ್ಲಿ ಬ್ಯಾಂಕಿನ ಹಣ ಸಾಗಣೆ ವಾಹನಗಳು ಹೊರಗುತ್ತಿಗೆ ಸಂಸ್ಥೆಯ ವಾಹನಗಳಾಗಲಿ, ಕಂಪನಿ ವಾಹನಗಳಾಗಲಿ ಕೇವಲ ಬ್ಯಾಂಕ್ ಹಣವನ್ನು ಮಾತ್ರ ಸಾಗಣೆ ಮಾಡುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಹಣ ಸಾಗಣೆ ಮಾಡುವಾಗ ವಾಹನಗಳು ಯಾವ ಬ್ಯಾಂಕಿನಿಂದ ಹಣ ಪಡೆದುಕೊಂಡಿದ್ದರ ಕುರಿತು ಮತ್ತು ಎಟಿಎಂಗಳಿಗೆ ಭರಣೆ ಮಾಡಲು ಹೊರಟಿರುವ ಬಗ್ಗೆ ಸಂಬಂಧಿಸಿದ ಬ್ಯಾಂಕಿನಿಂದ ಪ್ರಮಾಣ ಪತ್ರ, ದಾಖಲೆ ಹೊಂದಿರಬೇಕು. ಹೊರಗುತ್ತಿಗೆ ಸಂಸ್ಥೆಗಳ, ಕಂಪನಿಗಳ ಹಣ ಸಾಗಣೆ ವಾಹನಗಳ ತಪಾಸಣೆ ಮಾಡುವಾಗ ಸಹಕರಿಸಬೇಕು. ಹಣ ಸಾಗಣೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ನಡೆಸಬೇಕು. ವಾಹನ ಚಾಲಕರು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಅಲ್ಲದೆ, ಹಣ ಸಾಗಣೆ ಮಾಡುವಾಗ ಹಣದ ಭೌತಿಕ ಪರಿಶೀಲನೆಯನ್ನು ಪ್ಲೈಯಿಂಗ್ ಸ್ಕ್ವಾಡ್ ಗಳಿಗೆ ಮಾಹಿತಿ ತಿಳಿಸಬೇಕು ಎಂದು ಸೂಚನೆ ನೀಡಿದರು.
ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ ಮಾತನಾಡಿ, ₹ 10 ಲಕ್ಷಕ್ಕೂ ಅಧಿಕ ಮೊತ್ತದ ಹಣವನ್ನು ಡಿಪಾಸಿಟ್ ಮಾಡುವುದಾಗಲಿ ಅಥವಾ ಹಿಂಪಡೆದುಕೊಂಡ ವ್ಯವಹಾರಗಳು ಕಂಡುಬಂದಲ್ಲಿ ತಕ್ಷಣ ಆದಾಯ ತೆರಿಗೆ ಇಲಾಖೆಗಳ ನೋಡಲ್ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಬೇಕು. ಇದು ಸಹಕಾರಿ ಪತ್ತಿನ ಸಂಘಗಳಿಗೂ ಅನ್ವಯ ಆಗಲಿದ್ದು, ಚುನಾವಣೆ ಆಯೋಗ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾವಹಿಸಿ ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಹಾಗೂ ಖರ್ಚುವೆಚ್ಚದ ನೋಡಲ್ ಅಧಿಕಾರಿ ಸಿದ್ದರಾಮ ಉಕ್ಕಲಿ, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಶೈಲಜಾ, ಸಹಕಾರ ಸಂಘಗಳ ಉಪನಿಬಂಧಕ ಎಂ.ಬಿ. ಪೂಜಾರ ಸೇರಿದಂತೆ ವಿವಿಧ ಬ್ಯಾಂಕ್ ಪ್ರತಿನಿಧಿಗಳು ಉಪಸ್ಥಿತರಿದ್ದರು.