ಅನಧಿಕೃತ ರೆಸಾರ್ಟ್‌ ಮೇಲೆ ನಿಗಾವಹಿಸಿ: ತಹಸೀಲ್ದಾರ್ ನಾಗರಾಜ್

| Published : Mar 18 2025, 12:30 AM IST

ಅನಧಿಕೃತ ರೆಸಾರ್ಟ್‌ ಮೇಲೆ ನಿಗಾವಹಿಸಿ: ತಹಸೀಲ್ದಾರ್ ನಾಗರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಸಾಣಾಪುರ ಬಳಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ನಡೆದಿರುವ ಗ್ಯಾಂಗ್‌ರೇಪ್‌ ಘಟನೆಯಿಂದ ತಲೆ ತಗ್ಗಿಸುವಂತಾಗಿದೆ. ಕೂಡಲೆ ಅಧಿಕಾರಿಗಳು ನೊಂದಾಯಿತ ರೆಸಾರ್ಟ್ ಮತ್ತು ಹೋಂ ಸ್ಟೇಗಳ ದಾಖಲೆ ಪರಿಶೀಲಿಸಬೇಕು. ಅನಧಿಕೃತವಾಗಿ ನಡೆಸುತ್ತಿರುವವರ ಮೇಲೆ ಕ್ರಮಕೈಗೊಳ್ಳಬೇಕು.

ಗಂಗಾವತಿ:

ತಾಲೂಕಿನಲ್ಲಿ ಅನಧಿಕೃತವಾಗಿರುವ ರೆಸಾರ್ಟ್ ಮತ್ತು ಹೋಂ ಸ್ಟೇಗಳ ಮೇಲೆ ನಿಗಾವಹಿಸುವಂತೆ ತಹಸೀಲ್ದಾರ್ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇಲ್ಲಿನ ತಹಸೀಲ್ದಾರ್‌ ಕಚೇರಿಯಲ್ಲಿ ಜರುಗಿದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಣಾಪುರ ಬಳಿ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ನಡೆದಿರುವ ಗ್ಯಾಂಗ್‌ರೇಪ್‌ ಘಟನೆಯಿಂದ ತಲೆ ತಗ್ಗಿಸುವಂತಾಗಿದೆ. ಕೂಡಲೆ ಅಧಿಕಾರಿಗಳು ನೊಂದಾಯಿತ ರೆಸಾರ್ಟ್ ಮತ್ತು ಹೋಂ ಸ್ಟೇಗಳ ದಾಖಲೆ ಪರಿಶೀಲಿಸಬೇಕು. ಅನಧಿಕೃತವಾಗಿ ನಡೆಸುತ್ತಿರುವವರ ಮೇಲೆ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.

ದಾಖಲೆ ನೀಡುವವರಿಗೂ ಮುಚ್ಚಿ:

ಸಾಣಾಪುರ, ಹನುಮನಹಳ್ಳಿ, ಜಂಗ್ಲಿ, ಋಷುಮುಖ ಪರ್ವತ ಸೇರಿದಂತೆ ವಿವಿಧ ಐತಿಹಾಸಿಕ ಸ್ಥಳಗಳಲ್ಲಿರುವ ಅನಧಿಕೃತ ರೆಸಾರ್ಟ್‌ಗಳನ್ನು ಮುಚ್ಚಿಸಬೇಕೆಂದು ತಹಸೀಲ್ದಾರ್‌ ನಾಗರಾಜ್ ಆದೇಶಿಸಿದರು. ಅಧಿಕೃತವಾಗಿದ್ದರೆ ಕಚೇರಿಗೆ ದಾಖಲೆ ಸಲ್ಲಿಸಿ ಪರವಾನಗಿ ಪಡೆಯಬೇಕು. ಒಂದು ವೇಳೆ ಅನಧಿಕೃತವಾಗಿ ರೆಸಾರ್ಟ್ ಮತ್ತು ಹೋಂ ಸ್ಟೇಗಳಿದ್ದರೆ ಮುಚ್ಚಿಸಿ ಕ್ರಮಕೈಗೊಳ್ಳಬೇಕು ಎಂದರು.

ಈಗಾಗಲೇ ಪ್ರವಾಸೋದ್ಯಮ ಇಲಾಖೆ, ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಆದರೂ ಆಕ್ರಮವಾಗಿ ರೆಸಾರ್ಟ್‌ಗಳನ್ನು ಮುಂದುವರಿಸಿಕೊಂಡಿದ್ದಾರೆಂಬ ಮಾಹಿತಿ ಬಂದಿದೆ. ಕೂಡಲೆ ಕ್ರಮಕೈಗೊಳ್ಳಬೇಕು, ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ಅರಣ್ಯ ಇಲಾಖೆಯ ಅಧಿಕಾರಿ ಸುಭಾಶ್ಚಂದ್ರ ನಾಯಕ, ಸಿಪಿಐ ರಂಗಪ್ಪ, ಅಬಕಾರಿ ಇಲಾಖೆಯ ಅಧಿಕಾರಿ ಶಕುಂತಲಾ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.