ಮಕ್ಕಳಿಗೆ ಶಿಕ್ಷಣ ನೀಡುವುದರ ಜತೆಗೆ ಸಂಸ್ಕೃತಿ, ಸಂಸ್ಕಾರವನ್ನು ತಿಳಿಸಿಕೊಡುವ ಜವಾಬ್ದಾರಿ ಪಾಲಕರದ್ದು.
ಪರಾಭವ ಸಂವತ್ಸರದ ಯುಗಾದಿ ಉತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ
ಕನ್ನಡಪ್ರಭ ವಾರ್ತೆ ಸಿದ್ದಾಪುರಮಕ್ಕಳಿಗೆ ಶಿಕ್ಷಣ ನೀಡುವುದರ ಜತೆಗೆ ಸಂಸ್ಕೃತಿ, ಸಂಸ್ಕಾರವನ್ನು ತಿಳಿಸಿಕೊಡುವ ಜವಾಬ್ದಾರಿ ಪಾಲಕರದ್ದು. ಸಾಮಾಜಿಕ ಜಾಲತಾಣದ ಬಳಕೆಯಿಂದ ದೂರ ಇರಿಸುವದರ ಜೊತೆಗೆ ಮಕ್ಕಳಿಗೆ ಓದುವ ಹವ್ಯಾಸವನ್ನು ರೂಢಿಸಬೇಕು ಎಂದು ಶ್ರೀಮನ್ನೆಲೆಮಾವಿನ ಮಠದ ಮಾಧವಾನಂದ ಭಾರತಿ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಹಾರ್ಸಿಕಟ್ಟಾ ಯುಗಾದಿ ಉತ್ಸವ ಸಮಿತಿಯಿಂದ ಪರಾಭವ ಸಂವತ್ಸರದ ಯುಗಾದಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.ಇಂದು ಧಾರ್ಮಿಕ ಭಾವನೆ ಕಡಿಮೆ ಆಗುತ್ತಿದ್ದು, ಧರ್ಮದ ಆಚರಣೆ ಆಗುತಿಲ್ಲ. ಪ್ರತಿಯೊಬ್ಬರೂ ಅಹಂಕಾರವನ್ನು ಬಿಟ್ಟು ಸತ್ಸಂಗದಲ್ಲಿ ತೊಡಗಿಸಿಕೊಳ್ಳಬೇಕು. ಅಹಂಕಾರ ಜ್ಞಾನದ ಕೊರತೆಯನ್ನು ತೋರಿಸುತ್ತದೆ. ಹಬ್ಬದ ಆಚರಣೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವಂತಿದ್ದು ಎಲ್ಲರಿಗೂ ಮಾದರಿ ಆಗಿರಬೇಕು ಎಂದರು.ಸಾನ್ನಿಧ್ಯ ವಹಿಸಿದ್ದ ಶಿರಳಗಿಯ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಆಚರಿಸಬೇಕೆ ಹೊರತು ಪಾಶ್ಚಾತ್ಯ ಸಂಸ್ಕೃತಿಯನ್ನಲ್ಲ. ವಿಕೃತಿ ನಾಶ ಆಗಬೇಕು. ಪಾಶ್ಚಾತ್ಯ ಜೀವನವೇ ಇಂದು ಎಲ್ಲ ಕಡೆ ಕಂಡುಬರುತ್ತಿದೆ. ಜೀವನ ಶೈಲಿ ಬದಲಾಗಬೇಕು. ಇಂದಿನ ಶಿಕ್ಷಣದಲ್ಲಿ ಸನಾತನ ಶಿಕ್ಷಣ ಕಾಣದಂತಾಗಿದೆ. ಮನೆಗಳಲ್ಲಿ ಧರ್ಮಾಚರಣೆ ಕಣ್ಮರೆಯಾಗುತ್ತಿದೆ. ಮಕ್ಕಳಿಗೆ ಸರಿಯಾದ ದಾರಿಯನ್ನು ತೋರಿಸಬೇಕಾದ ಪಾಲಕರು ಜಾಗೃತರಾಗಬೇಕಾಗಿದೆ. ಸತ್ಸಂಗ, ಚಿಂತನೆ ಪ್ರತಿಮನೆಯಲ್ಲಿ ನಡೆಯಬೇಕು. ನಿತ್ಯ ಭಗವಂತನ ನಾಮಸ್ಮರಣೆ ಮಾಡಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.ರಾಮಾಯಣ, ಮಹಾಭಾರತ, ಭಗವದ್ಗೀತೆಯನ್ನು ಮಕ್ಕಳಿಗೆ ತಿಳಿಸಬೇಕು. ಇದು ಜೀವನಕ್ಕೆ ಆಧಾರ. ನಮ್ಮ ಸನಾತನ ಧರ್ಮ ಶ್ರೇಷ್ಠವಾಗಿದ್ದು ಅದನ್ನು ತಿಳಿದುಕೊಳ್ಳಬೇಕು. ಆಧುನಿಕತೆ ಹಾಗೂ ವೈಜ್ಞಾನಿಕತೆ ನೆಪದಲ್ಲಿ ಸಂಸ್ಕೃತಿ ಮರೆಯಾಗುತ್ತಿದೆ. ಉತ್ತಮ ಪರಿಸರವನ್ನು ಕಾಪಾಡಿಕೊಳ್ಳುವುದು ಮುಖ್ಯ. ಪ್ರಕೃತಿಯನ್ನು ಅಪವಿತ್ರಮಾಡಿದರೆ ನಮಗೆ ಆಪತ್ತು. ಪ್ಲಾಸ್ಟಿಕ್ ಮುಕ್ತ ಪರಿಸರ ನಮ್ಮದಾಗಬೇಕು. ಸ್ವಚ್ಛ ಪರಿಸರ ನಮ್ಮದಾಗಬೇಕು ಎಂದು ಶ್ರೀಗಳು ಹೇಳಿದರು.ಶರಧಿ ಹಾಗೂ ಧಾರಿಣಿ ಭಗವದ್ಗೀತೆ ಪಠಿಸಿದರು. ವಿಕ್ರಮ ಹೆಗಡೆ ಸಿದ್ದವನ ವೇದಘೋಷ ಮಾಡಿದರು. ವಿನಾಯಕ ಹೆಗಡೆ ಪೆಟೇಸರ ಪ್ರಾಸ್ತಾವಿಕ ಮಾತನಾಡಿದರು. ಎಲ್.ಜಿ. ಹೆಗಡೆ ದಂಪತಿ ಹಾಗೂ ಮಂಜುನಾಥ ಗೌಡ ದಂಪತಿ ಶ್ರಿಗಳಿಗೆ ಫಲ ಸಮರ್ಪಿಸಿದರು. ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು. ಯುಗಾದಿ ಉತ್ಸವ ಸಮಿತಿ ಪದಾಧಿಕಾರಿಗಳು ಸಹಕರಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಹಾರ್ಸಿಕಟ್ಟಾದಿಂದ ವಾಜಗದ್ದೆಯವರೆಗೆ ಬೈಕ್‌ರ್‍ಯಾಲಿ, ವಾಜಗದ್ದೆ ದುರ್ಗಾವಿನಾಯಕ ದೇವರ ದರ್ಶನ, ಅಘನಾಶಿನಿಯ ಉಪಹೊಳೆ ವಾಜಗದ್ದೆ ಹೊಳೆಗೆ ಪೂಜೆ ಸಲ್ಲಿಸಲಾಯಿತು.