ಲೋಕದಿಂದ ಕುಟುಂಬ ದೂರವಿಡಿ: ಧನ್‌ಕರ್‌

| Published : Jan 12 2025, 01:16 AM IST

ಸಾರಾಂಶ

ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ಕುಟುಂಬದವರನ್ನು ಅರ್ಹತೆ ಇಲ್ಲದಿದ್ದರೂ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ನೇಮಿಸುತ್ತಿದ್ದಾರೆ. ಈ ರೀತಿಯ ಸ್ವಜನ ಪಕ್ಷಪಾತದಿಂದಾಗಿ ಲೋಕಸೇವಾ ಆಯೋಗಗಳ ವಿಶ್ವಾಸಾರ್ಹತೆ ಕುಸಿಯುವಂತಾಗಿದೆ. ಈ ಅಪವಾದದಿಂದ ಆಯೋಗಗಳು ಹೊರಬರಲು ಕಾನೂನು ಬಿಗಿಗೊಳಿಸಬೇಕಿದೆ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ಕುಟುಂಬದವರನ್ನು ಅರ್ಹತೆ ಇಲ್ಲದಿದ್ದರೂ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ನೇಮಿಸುತ್ತಿದ್ದಾರೆ. ಈ ರೀತಿಯ ಸ್ವಜನ ಪಕ್ಷಪಾತದಿಂದಾಗಿ ಲೋಕಸೇವಾ ಆಯೋಗಗಳ ವಿಶ್ವಾಸಾರ್ಹತೆ ಕುಸಿಯುವಂತಾಗಿದೆ. ಈ ಅಪವಾದದಿಂದ ಆಯೋಗಗಳು ಹೊರಬರಲು ಕಾನೂನು ಬಿಗಿಗೊಳಿಸಬೇಕಿದೆ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಹೇಳಿದರು.

ರಾಜ್ಯ ಲೋಕಸೇವಾ ಆಯೋಗ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ‘25ನೇ ರಾಜ್ಯ ಲೋಕಸೇವಾ ಆಯೋಗಗಳ ಅಧ್ಯಕ್ಷರ ಸಮ್ಮೇಳನ’ ಉದ್ಘಾಟಿಸಿ ಮಾತನಾಡಿ, ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ಕುಟುಂಬದವರನ್ನು ಅರ್ಹತೆಯಿಲ್ಲದಿದ್ದರೂ ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಜತೆಗೆ ನಿವೃತ್ತರಾದ ನಂತರವೂ ಅಧಿಕಾರಿಗಳನ್ನು ಲೋಕಸೇವಾ ಆಯೋಗಗಳಲ್ಲಿ ಮುಂದುವರಿಸುವುದನ್ನು ತಡೆಯಬೇಕು ಎಂದು ತಿಳಿಸಿದರು.

ಲೋಕಸೇವಾ ಆಯೋಗಗಳನ್ನು ಸಮರ್ಪಕ ಮತ್ತು ಸದೃಢಗೊಳಿಸುವುದು ರಾಜಕೀಯ ನಾಯಕತ್ವದ ಮೇಲಿದೆ. ಹೀಗಾಗಿ ರಾಜಕೀಯ ನಾಯಕತ್ವವು ಪಕ್ಷಪಾತದ ನಿಲುವುಗಳನ್ನು ಮೀರಿ ಲೋಕಸೇವಾ ಆಯೋಗಗಳು ಕೆಲಸ ಮಾಡುವಂತೆ ಒತ್ತು ನೀಡಬೇಕು. ವೈಯಕ್ತಿಕ ಹಿತಾಸಕ್ತಿಗಳಿಗಿಂತ ಸಂಸ್ಥೆಯನ್ನು ಬೆಳೆಸಲು ಎಲ್ಲರೂ ಮುಂದಾಗಬೇಕು ಎಂದರು.

ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನ ಎಲ್ಲ ಕ್ಷೇತ್ರಗಳಲ್ಲೂ ಅಪಾಯವನ್ನುಂಟು ಮಾಡುತ್ತಿದೆ. ಹೀಗಾಗಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿ, ಅದರಿಂದಾಗುವ ನಷ್ಟ ಅರಿತು ಲೋಕಸೇವಾ ಆಯೋಗಗಳು ಪರೀಕ್ಷೆ ನಡೆಸಬೇಕು. ದೇಶದ ಆಡಳಿತದಲ್ಲಿ ಉತ್ತಮ ಮತ್ತು ಪ್ರತಿಭಾನ್ವಿತ ಪ್ರತಿಭೆಗಳು ಸೇರ್ಪಡೆಯಾಗುವಂತೆ ಕೆಲಸ ಮಾಡಬೇಕು. 2047ರ ವಿಕಸಿತ ಭಾರತದ ಪರಿಕಲ್ಪನೆಗೆ ಈಗಿನಿಂದಲೇ ನಾಂದಿ ಹಾಡಬೇಕು ಎಂದರು.

ಘಾತಕ ಶಕ್ತಿ ಎದುರಿಸಬೇಕು: ದೇಶ ಮತ್ತು ರಾಜ್ಯಕ್ಕೆ ಉತ್ತಮ ಅಧಿಕಾರಿಗಳನ್ನು ಕೊಡುಗೆಯಾಗಿ ನೀಡುವ ಲೋಕಸೇವಾ ಆಯೋಗಗಳು ನಡೆಸುವ ಪರೀಕ್ಷೆಗಳನ್ನು ಹಾಳು ಮಾಡುವಂಥ ಘಾತಕ ಶಕ್ತಿಗಳನ್ನು ಎದುರಿಸಲು ಸೂಕ್ತ ಕಾರ್ಯತಂತ್ರ ರೂಪಿಸಬೇಕು. ದೇಶದಲ್ಲಿ ಏಕತೆಯ ಹಾದಿ ಸ್ಪಷ್ಟವಾಗಿದ್ದು, ಈಗಾಗಲೇ ಜಿಎಸ್‌ಟಿ ಮೂಲಕ ಏಕರೂಪ ತೆರಿಗೆ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಅದರ ಜತೆಗೆ ಒಂದು ರಾಷ್ಟ್ರ-ಒಂದು ಚುನಾವಣೆ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಅದೇ ರೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಮ್ಮತದಿಂದ ಏಕೀಕೃತ ನೇಮಕಾತಿ ಪ್ರಾಧಿಕಾರ ರಚನೆಯತ್ತಲೂ ಗಮನಹರಿಸಬೇಕಿದೆ ಎಂದು ಜಗದೀಪ್‌ ಧನಕರ್‌ ತಿಳಿಸಿದರು.

ಲೋಕಸೇವಾ ಆಯೋಗಗಳ ಮೂಲಕ ಆಡಳಿತಕ್ಕೆ ಸೇರ್ಪಡೆಯಾಗುವ ಅಧಿಕಾರಿಗಳ ಬಡ್ತಿ ಪ್ರಕ್ರಿಯೆ ಏಕರೂಪ, ವಸ್ತು ನಿಷ್ಠ ಮತ್ತು ಪಾರದರ್ಶಕತೆಯಿಂದ ಕೂಡಿರಬೇಕು. ಅದಕ್ಕೂ ಮುಖ್ಯವಾಗಿ ಆಯೋಗವು ಅಭ್ಯರ್ಥಿಗಳಿಗೆ ತರಬೇತಿ ಸೇರಿ ಮತ್ತಿತರ ಪ್ರಕ್ರಿಯೆ ಮೂಲಕ ಸಾಮರ್ಥ್ಯ ವೃದ್ಧಿಯತ್ತ ಹೆಚ್ಚಿನ ಗಮನಹರಿಸಬೇಕು. ಅಲ್ಲದೆ, ಸಮ್ಮೇಳನದ ಮೂಲಕ ಲೋಕಸೇವಾ ಆಯೋಗಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡುವುದಕ್ಕೆ ಅಗತ್ಯವಿರುವ ಕಾನೂನು ತಿದ್ದುಪಡಿ ಬಗ್ಗೆಯೂ ಚರ್ಚೆಗಳು ನಡೆಯಬೇಕು ಎಂದು ಸಲಹೆ ನೀಡಿದರು.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದರು.