ಸಾರಾಂಶ
ಕನ್ನಡಪ್ರಭ ವಾರ್ತೆ ಕಲಾದಗಿ
ನ್ಯಾಯ ಸಿಗುವವರೆಗೂ ರೈತರು ನಿತ್ಯ ನಿರಂತರ ಹೋರಾಟ ಮಾಡಬೇಕು. ಮತ್ತೊಬ್ಬರ ಒಳಿತಿಗಾಗಿ ತಮ್ಮೆಲ್ಲ ತ್ಯಾಗ ಮಾಡಿದ ಸಂತ್ರಸ್ತ ರೈತರ ಹೋರಾಟಕ್ಕೆ ಶಿವಾಚಾರ್ಯ ಮಹಾಸ್ವಾಮಿಗಳ ಬೆಂಬಲ ಆಶೀರ್ವಾದ ಸದಾ ಇರಲಿದೆ ಎಂದು ಕಲಾದಗಿ ಶ್ರೀ ಗಂಗಾಧರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.ಭಾರತೀಯ ಕಿಸಾನ್ ಸಂಘ, ಬಾಗಲಕೋಟೆ ತಾಲೂಕು ಘಟಕದಿಂದ ಹಮ್ಮಿಕೊಂಡ ಕೆಲಕಾಲ ರಾಜ್ಯ ಹೆದ್ದಾರಿ ರಸ್ತೆ ತಡೆ ಹಾಗೂ ಸಂತ್ರಸ್ತರ ಬೇಡಿಕೆ ಈಡೇರಿಕೆಗಾಗಿ ಉಪತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಪತ್ರ ಸಲ್ಲಿಸುವ ಶಾಂತಿಯುತ ಪ್ರತಿಭಟನೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ರೈತ ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರಗಳು ಬೆನ್ನೆಲುಬುಗಳು ತಮ್ಮ ಹಕ್ಕಿಗಾಗಿ ಬೀದಿಗೆ ಬರುವಂತೆ ಮಾಡಿವೆ ಎಂದರೆ ಸರ್ಕಾರಕ್ಕೆ ರೈತರ ಸಂಕಷ್ಟ ನೋವು ಅರ್ಥವಾಗುತ್ತಿಲ್ಲ. ಯಾವುದೇ ಸರ್ಕಾರಗಳು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ತಾರತಮ್ಯ ಮಾಡದೇ ನೀರಾವರಿ ಯೋಜನೆಗಳನ್ನು ಸಮಗ್ರವಾಗಿ ಪೂರ್ಣಗೊಳಿಸಿ ರೈತರ ಏಳಿಗೆಗೆ ಬದ್ಧವಾಗಿರಬೇಕು ಎಂದು ಆಗ್ರಹಿಸಿದರು.
ಆರು ದಶಕಗಳು ಕಳೆಯುತ್ತಿದ್ದರೂ ಕೃ.ಮೇ.ಯೋ ಪೂರ್ಣಗೊಂಡಿಲ್ಲವೆಂದರೆ ಸರ್ಕಾರದ ನಿರ್ಲಕ್ಷ್ಯ ದೋರಣೆ ಸರಿ, ಈಗಿನ ಸರ್ಕಾರ ಶೀಘ್ರ 3ನೇ ಹಂತದ ಯೋಜನೆಗೆ ಅನುದಾನ ಮೀಸಲಿಟ್ಟು ಪೂರ್ಣಪ್ರಮಾಣ ಅನುಷ್ಠಾನಗೊಳಿಸಬೇಕು. ಭೂಸ್ವಾಧೀನಗೊಳ್ಳಲಿರುವ ರೈತರ ನೀರಾವರಿ ಭೂಮಿಗೆ ₹50 ಲಕ್ಷ, ಖುಷ್ಕಿ ಭೂಮಿಗೆ ₹40 ಲಕ್ಷ ಪರಿಹಾರ ನೀಡಬೇಕು ಸಂತ್ರಸ್ತರ ವಿವಿಧ ಬೇಡಿಕೆ ಈಡೇರಿಸಲು ಸರ್ಕಾರ ಅಗತ್ಯ ಕ್ರಮ ವಹಿಸಲಿ ಎಂದರು.ಚಿಕ್ಕಶಂಸಿ ರೈತ ಅಶೋಕ ಪಾಟೀಲ ಮಾತನಾಡಿ, ಸರ್ಕಾರ ಯೋಜನೆಯನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಿದಿದ್ದಲ್ಲ ನಮ್ಮೆಲ್ಲರ ಹೋರಾಟ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟವಾಗಿ ಬಸವ ಕರ್ನಾಟಕ ನಾಮಕರಣಗೊಳಿಸಿ, ಉತ್ತರ ಕರ್ನಾಟಕ ಅಭಿವೃದ್ಧಿಗೆ ಮುನ್ನಡಿ ಇಡಬೇಕಾಗುವುದು ಅನಿವಾರ್ಯವಾಗಲಿದೆ ಎಂದರು. ಹನಮಂತ ಅರಕೇರಿ, ನಿಂಗಪ್ಪ ಅರಕೇರಿ, ಶ್ರೀಧರ ವಾಘ, ಭಾ.ಕಿ.ಸಂ ಜಿಲ್ಲಾದ್ಯಕ್ಷ ವಿರೂಪಾಕ್ಷಯ್ಯ ಹಿರೇಮಠ ಮಾತನಾಡಿದರು. ಉಪತಹಸೀಲ್ದಾರ್ ಆರ್.ಆರ್.ಕುಲಕರ್ಣಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ಭಾ.ಕಿ.ಸಂ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ಶಿರಬೂರ, ಬಾಗಲಕೋಟೆ ತಾಲೂಕು ಅಧ್ಯಕ್ಷ ಚಂದ್ರಶೇಖರ ಹಡಪದ, ಬಸುವರಾಜ ಪುಂಡಿಕಟಗಿ, ಸುಭ್ರಾಯಗೌಡ, ರಾಜು ಪೂಜಾರಿ, ಸುರೇಶ ಅರಕೇರಿ, ಆನಂದ ವಾಘ್, ವಿಠ್ಠಲಪ್ಪ ಮುಧೋಳ, ಗೋಪಾಲ ಪಾಟೀಲ, ಮಂಜುನಾಥ ತುಂಬರಮಟ್ಟಿ, ರಮೇಶ ಶಿವನಿಚ್ಚಿ, ಬಸೀರಸಾಬ ಸೌದಾಗಾರ, ಮೋದಿನಸಾಬ ರೋಣ ಇನ್ನಿತರರು ಇದ್ದರು.