ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅನೇಕ ಕಡೆ ಫಾಸ್ಟ್ ಫುಡ್ ಮತ್ತು ಜಂಕ್‍ಫುಡ್‍ಗಳಲ್ಲಿ ಟೇಸ್ಟಿಂಗ್ ಪೌಡರ್ ಬಳಸಲಾಗುತ್ತಿದ್ದು, ಇವುಗಳ ಸೇವನೆಯಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಅದ್ದರಿಂದ ಜಂಕ್‍ಫುಡ್‍ಗಳಿಂದ ಮಕ್ಕಳನ್ನು ದೂರವಿಡಬೇಕು ಎಂದು ಡಯಟ್‍ನ ಹಿರಿಯ ಉಪನ್ಯಾಸಕ ಡಾ. ಹರಿಪ್ರಸಾದ್ ಸಲಹೆ ನೀಡಿದರು.ಓಟಿ ರಸ್ತೆಯಲ್ಲಿರುವ ಮೌಂಟೇನ್ ಇನ್ನೋವೆಟಿವ್ ಸ್ಕೂಲ್ ವತಿಯಿಂದ ಶುಕ್ರವಾರ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿ, ಒಂದು ಮಾಹಿತಿಯ ಪ್ರಕಾರ ಶಿವಮೊಗ್ಗದಲ್ಲಿ 20 ವರ್ಷದ ಹಿಂದೆ ಅಜಿನೊಮೊಟೊ ಎಂಬ ಟೇಸ್ಟಿಂಗ್ ಪೌಡರ್ ದಿನವೊಂದಕ್ಕೆ ಅರ್ಧ ಕೆಜಿ ಮಾರಾಟವಾಗುತಿತ್ತು. ಆದರೀಗ ಒಂದೂವರೆ ಕ್ವಿಂಟಾಲ್ ಮಾರಾಟವಾಗುತ್ತಿದೆ. ಟೇಸ್ಟಿಂಗ್ ಪೌಡರ್ ಬೆರೆಸಿ ತಯಾರಿಸುವ ಆಹಾರ ಸೇವನೆಯಿಂದ ವಿಷಕಾರಿ ಅಂಶ ಮಕ್ಕಳ ಹೊಟ್ಟೆ ಸೇರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪ್ರೋಟೀನ್, ವಿಟಮಿನ್‍ನಿಂದ ಕೂಡಿದ ಸತ್ವಭರಿತ ಪೌಷ್ಠಿಕಾಂಶ ಆಹಾರ ನೀಡಬೇಕು. ಸೊಪ್ಪು, ತರಕಾರಿಗಳನ್ನು ಸೇವಿಸುವಂತೆ ಪ್ರೇರೇಪಿಸಬೇಕು. ಮಕ್ಕಳು ಸೊಪ್ಪ- ತರಕಾರಿ ತಿನ್ನಲು ಹಿಂದೇಟು ಹಾಕುತ್ತಾರೆ. ಆದ್ದರಿಂದ ಸೊಪ್ಪು, ತರಕಾರಿಯನ್ನು ರುಬ್ಬಿ ದೋಸೆ, ಇಡ್ಲಿ ಹಿಟ್ಟು, ರಾಗಿ, ಜೋಳ, ಗೋಧಿ ಸೇರಿದಂತೆ ಮತ್ತಿತರೆ ಧಾನ್ಯಗಳ ಹಿಟ್ಟಿನಲ್ಲಿ ಬೆರೆಸಿ ಸೇವಿಸುವಂತೆ ಮಾಡಬೇಕು. ಮಕ್ಕಳನ್ನು ಟಿವಿ ನೋಡುತ್ತಾ ಊಟ ಮಾಡುವ ಆಭ್ಯಾಸದಿಂದ ದೂರವಿಡಬೇಕೆಂದರು.
ಸೃಜನಶೀಲತೆಯು ಜೀವನ ಕೌಶಲ್ಯವಾಗಿದ್ದು, ಯಶಸ್ಸನ್ನು ಸಾಧಿಸಲು ಪ್ರೇರೇಪಿಸುತ್ತದೆ. ಆದ್ದರಿಂದ ಶಿಕ್ಷಕರು ಮತ್ತು ಪೋಷಕರು ಮಕ್ಕಳನ್ನು ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಬೇಕೆಂದು ಹೇಳಿದರು.ಸೃಜನಾತ್ಮಕ ಚಿಂತನೆಯ ಕೌಶಲ್ಯ ಹೊಂದಿರುವ ಮಗು ರೂಢಿಗಳನ್ನು ಪ್ರಶ್ನಿಸಲು, ವಿಮರ್ಶಾತ್ಮಕವಾಗಿ ಯೋಚಿಸಲು ಮತ್ತು ಸಮಸ್ಯೆ ಪರಿಹರಿಸುವ ಅಸಾಂಪ್ರದಾಯಿಕ ವಿಧಾನಗಳನ್ನು ಅನ್ವೇಷಿಸಲು ಕಲಿಯುತ್ತದೆ. ಹಾಗೆ ಮಾಡುವ ಮೂಲಕ ಮಕ್ಕಳು ಆತ್ಮವಿಶ್ವಾಸ ಮತ್ತು ಸ್ವಾತಂತ್ರ್ಯದ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತಾರೆ ಎಂದರು.
ಬಟ್ಟೆ ಕೊಳೆಯಾಗುತ್ತದೆ ಎಂಬ ಕಾರಣಕ್ಕೆ ಮಣ್ಣಿನ ಆಟಗಳಿಂದ ಮಕ್ಕಳನ್ನು ದೂರವಿಡಬಾರದು. ಲಗೋರಿ, ಚಿನ್ನಿದಾಂಡು, ಮರಕೋತಿ, ಕುಂಟಾಪಿಲ್ಲೆ, ಹಗ್ಗಜಗ್ಗಾಟ, ಕಣ್ಣಾಮುಚ್ಚಾಲೆ, ಚೌಕಮಣಿ ಸೇರಿದಂತೆ ಮತ್ತಿತರೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಅವರನ್ನು ಪ್ರೇರೇಪಿಸಬೇಕು. ಕ್ರೀಡೆಗಳಿಂದ ಸಾಮಾಜಿಕ ಸಂಬಂಧ ಬೆಳೆಯುತ್ತದೆ ಎಂದು ಹೇಳಿದರು.ವೇದಿಕೆಯಲ್ಲಿ ಎಂಐಇಎಸ್‍ನ ಕಾರ್ಯದರ್ಶಿ ಶಿಲ್ಪಶ್ರೀ, ಪ್ರಾಂಶುಪಾಲೆ ಶಿಲ್ಪ ಅರವಿಂದ್ ಉಪಸ್ಥಿತರಿದ್ದರು. ಶೈಕ್ಷಣಿಕ ನಿರ್ದೇಶಕ ಟಿ.ಎಸ್. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.