ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಆರ್‌ಸಿಬಿ ವಿಜಯೋತ್ಸವ ಆಯೋಜನೆಗೆ ಸಂಬಂಧಿಸಿ ಎಲ್ಲಾ ಪತ್ರ ವ್ಯವಹಾರ (ಆಫ್‌ಲೈನ್/ಆನ್‌ಲೈನ್ ಕಮ್ಯೂನಿಕೇಷನ್) ದಾಖಲೆಗಳನ್ನು ಮುಖ್ಯ ಕಾರ್ಯದರ್ಶಿಗಳು ತಮ್ಮ ಸುಪರ್ದಿಯಲ್ಲಿ ಭದ್ರವಾಗಿ ಇಟ್ಟುಕೊಳ್ಳಬೇಕು ಎಂದು ಹೈಕೋರ್ಟ್ ಗುರುವಾರ ಸೂಚನೆ ನೀಡಿದೆ.ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಿಂದ 11 ಮಂದಿ ಸಾವಿಗೀಡಾದ ಪ್ರಕರಣ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ದುರಂತಕ್ಕೆ ಸಂಬಂಧಿಸಿದ ಆಫ್‌ಲೈನ್ ಮತ್ತು ಆನ್‌ಲೈನ್, ವಾಟ್ಸ್ ಆ್ಯಪ್ ಸಂದೇಶವೂ ಸೇರಿ ಎಲ್ಲಾ ಕಮ್ಯುನಿಕೇಷನ್ (ಎಲ್ಲಾ ಪತ್ರ ವ್ಯವಹಾರ/ಸಂವಹನಗಳನ್ನು) ಮುಖ್ಯ ಕಾರ್ಯದರ್ಶಿ ತಮ್ಮ ಸುಪರ್ದಿಗೆ ಪಡೆದುಕೊಳ್ಳಬೇಕು. ಯಾವ ನಿರ್ದಿಷ್ಟ ಅಂಶ ಅಧರಿಸಿ ವಿಚಾರಣೆ ನಡೆಸಲು ಜಿಲ್ಲಾಧಿಕಾರಿ ನೇತೃತ್ವದ ಮ್ಯಾಜಿಸ್ಟ್ರೀರಿಯಲ್ ಮತ್ತು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರ ಏಕಸದಸ್ಯ ವಿಚಾರಣಾ ಆಯೋಗಕ್ಕೆ ಸೂಚಿಸಲಾಗಿದೆ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಪೀಠ, ವಿಚಾರಣೆಯನ್ನು ಜೂ.17ಕ್ಕೆ ಮುಂದೂಡಿದೆ.ಇದಕ್ಕೂ ಮುನ್ನ ಅರ್ಜಿ ಹಿಂದಿನ ವಿಚಾರಣೆ ವೇಳೆ ಕಾಲ್ತುಳಿತ ಪ್ರಕರಣ ಸಂಬಂಧ ಹೈಕೋರ್ಟ್ ಕೇಳಿದ್ದ 9 ಪ್ರಶ್ನೆಗಳಿಗೆ ಉತ್ತರ ನೀಡಿ ರಾಜ್ಯ ಸರ್ಕಾರವು ಗುರುವಾರ ಸುಮಾರು 300 ಪುಟಗಳ ವಸ್ತುಸ್ಥಿತಿ ವರದಿ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದೆ.
ಈ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಘಟನೆಗೆ ಸಂಬಂಧಿಸಿದ ಎಲ್ಲಾ ಸತ್ಯಾಂಶಗಳನ್ನು ವಿವರಿಸಲಾಗಿದೆ. ಈವರೆಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಲಾಗಿದೆ. ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಸಂಭವಿಸದಂತೆ ಹೇಗೆ ತಡೆಯಬಹುದು ಎಂಬ ವಿಚಾರದಲ್ಲಿ ಸರ್ಕಾರ ಪಾರದರ್ಶಕ ನಡೆ ಹೊಂದಿದೆ. ವರದಿ ಪರಿಶೀಲಿಸಿದ ನಂತರ ಹೆಚ್ಚಿನ ವಿವರಣೆ ಅಗತ್ಯವಿದ್ದಲ್ಲಿ, ನ್ಯಾಯಾಲಯ ಕೇಳಬಹುದು. ನ್ಯಾಯಾಲಯ ಕೇಳುವ ವಿವರಣೆಯನ್ನು ಸರ್ಕಾರ ನೀಡಲಿದೆ. ಸರ್ಕಾರ ಯಾವ ವಿಷಯವನ್ನೂ ಗೌಪ್ಯವಾಗಿ ಇಡುವುದಿಲ್ಲ ಎಂದು ನ್ಯಾಯಪೀಠಕ್ಕೆ ವಾಗ್ದಾನ ನೀಡಿದರು.ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಪ್ರಕರಣ ಕುರಿತು ಮ್ಯಾಜಿಸ್ಟೀರಿಯಲ್ ಹಾಗೂ ನ್ಯಾಯಾಂಗ ಆಯೋಗದ ವಿಚಾರಣೆಗೆ ಆದೇಶಿಸಲು ನಿರ್ದಿಷ್ಟ ಕಾರಣಗಳೇನು? ಅವುಗಳ ಮುಂದೆ ಇರಿಸಿರುವ ಪ್ರಶ್ನೆಗಳೇನು? ಎರಡೂ ತನಿಖೆಯಲ್ಲಿ ಬೇರೆ ಬೇರೆ ಅಭಿಪ್ರಾಯ ನೀಡಿದರೆ ಸರ್ಕಾರ ಏನು ಮಾಡುತ್ತದೆ? ಜೂ.4ರ ಕಾರ್ಯಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಭದ್ರತೆಯಲ್ಲಿರಿಸಲಾಗಿದೆಯೇ? ಎಂದು ಪ್ರಶ್ನಿಸಿತಲ್ಲದೆ, ದಾಖಲೆಗಳಲ್ಲಿ ತಿದ್ದುಪಡಿ ಮಾಡುವುದನ್ನು ತಪ್ಪಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿತು.
ಜೊತೆಗೆ, ಈ ಎರಡೂ ವಿಚಾರಣೆಯಲ್ಲಿ ವಿಭಿನ್ನ ಅಭಿಪ್ರಾಯಗಳು ಕಂಡುಬಂದರೆ, ನ್ಯಾಯಾಲಯವು ಸರ್ಕಾರವನ್ನು ಸುಮ್ಮನೆ ಬಿಡುವುದಿಲ್ಲ. ನ್ಯಾಯಾಂಗ ತನಿಖೆ ವರದಿಗೆ ಹೈಕೋರ್ಟ್ ಬದ್ಧವಾಗಿರಬೇಕಿಲ್ಲ ಎಂದು ನ್ಯಾಯಪೀಠ ಇದೇ ವೇಳೆ ಕಟುವಾಗಿ ನುಡಿಯಿತು.ಅಡ್ವೋಕೇಟ್ ಜನರಲ್ ಉತ್ತರಿಸಿ, ಮ್ಯಾಜಿಸ್ಟೀರಿಯಲ್ ಮತ್ತು ನ್ಯಾಯಾಂಗ ಆಯೋಗವು ಪ್ರತ್ಯೇಕ ಅಂಶಗಳ ಬಗ್ಗೆ ವಿಚಾರಣೆ ನಡೆಸಲಿದೆ. ಅರ್ಜಿ ಸಂಬಂಧ ಹೈಕೋರ್ಟ್‌ನ ಎಲ್ಲಾ ನಿರ್ದೇಶನಗಳನ್ನು ಸರ್ಕಾರ ಪಾರದರ್ಶಕವಾಗಿ ಪಾಲಿಸಲಿದೆ. ಸಾರ್ವಜನಿಕರು ಸೇರುವ ಸಭೆ-ಸಮಾರಂಭಗಳ ನಿರ್ವಹಣೆಗೆ ಎಸ್‌ಒಪಿ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಅದನ್ನು ಪರಿಗಣಿಸಿದ ನ್ಯಾಯಪೀಠ, ಇಂದು ಸಲ್ಲಿಸಿರುವ ವಸ್ತುಸ್ಥಿತಿ ವರದಿಗೆ ಸಂಬಂಧಿಸಿದ ಇಂಗ್ಲಿಷ್ ಅನುವಾದದ ಪ್ರತಿಗಳನ್ನು ಎರಡು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿತು.ಈ ಮಧ್ಯೆ ಸರ್ಕಾರದ ವರದಿಯನ್ನು ಬಹಿರಂಗಪಡಿಸಬೇಕು. ಸಾರ್ವಜನಿಕ ಸಭೆ ಸಮಾರಂಭದಲ್ಲಿ ಜನ ಗುಂಪು ಸೇರುವ ವಿಚಾರದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಮಾರ್ಗಸೂಚಿ ರಚನೆ ಮಾಡಿ 2014ರಲ್ಲಿಯೇ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರವು ಆ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ಮಾರ್ಗಸೂಚಿ ಪಾಲನೆ ಕಡ್ಡಾಯಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ವಿಪತ್ತು ನಿರ್ವಹಣಾ ಸಮಿತಿ ರಚಿಸಿಲ್ಲ. ಈ ಕುರಿತು ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡಬೇಕು ಎನ್ನುವುದು ಸೇರಿ ಇನ್ನಿತರ ಮನವಿಗಳೊಂದಿಗೆ ಸಲ್ಲಿಸಿರುವ ಹಲವು ಮಧ್ಯಂತರ ಅರ್ಜಿಗಳ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಪೀಠ ಹೇಳಿದೆ.
;Resize=(128,128))
;Resize=(128,128))
;Resize=(128,128))