ಬಡತನ ಬದಿಗಿಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸಿ: ಹಸನಸಾಬ ದೋಟಿಹಾಳ

| Published : Jun 26 2024, 12:38 AM IST

ಬಡತನ ಬದಿಗಿಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸಿ: ಹಸನಸಾಬ ದೋಟಿಹಾಳ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಇರುವಂತಹ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳ ಶಿಕ್ಷಣಕ್ಕೆ ಬಡತನ ಎಂಬ ಪಿಡುಗು ಅಡ್ಡ ಬರಬಾರದು.

ಶಾಲಾ ದಾಖಲಾತಿ ಆಂದೋಲನದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಬಡತನ ಬದಿಗೊತ್ತಿ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಕಾಡಾ (ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷ ಹಸನಸಾಬ ದೋಟಿಹಾಳ ಅಭಿಪ್ರಾಯಪಟ್ಟರು.

ತಾಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2024-25ನೇ ಸಾಲಿನ ಶಾಲಾ ದಾಖಲಾತಿ ಆಂದೋಲನದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದಲ್ಲಿ ಇರುವಂತಹ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳ ಶಿಕ್ಷಣಕ್ಕೆ ಬಡತನ ಎಂಬ ಪಿಡುಗು ಅಡ್ಡ ಬರಬಾರದು. ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಸಮರ್ಪಕವಾದ ಶಿಕ್ಷಣವನ್ನು ಕೊಡಿಸುವ ಮೂಲಕ ಮಕ್ಕಳ ಉಜ್ವಲವಾದ ಭವಿಷ್ಯ ಕಟ್ಟಿಕೊಳ್ಳುವಂತೆ ಮಾಡಬೇಕು ಎಂದರು.

ಸರ್ಕಾರವು ಮಕ್ಕಳು ಶಿಕ್ಷಣವಂತರಾಗಬೇಕು ಎಂಬ ದೃಷ್ಟಿಯಿಂದ ಶಾಲೆಯಲ್ಲಿ ಉಚಿತ ಶಿಕ್ಷಣ, ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ, ಹಾಲು, ಮೊಟ್ಟೆ, ರಾಗಿ ಮಾಲ್ಟ್ ಸೇರಿದಂತೆ ಅನೇಕ ಸವಲತ್ತು ಕೊಡುತ್ತಿದ್ದು, ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡುವ ಮೂಲಕ ಮಕ್ಕಳ ಭವಿಷ್ಯವನ್ನು ಸುಂದರವಾಗಿಸುವಲ್ಲಿ ಮುಖ್ಯಪಾತ್ರ ವಹಿಸಬೇಕು. ಶಿಕ್ಷಕರಾದವರು ಮಕ್ಕಳಿಗೆ ಸರಿಯಾಗಿ ಬೋಧನೆ ಮಾಡಬೇಕು ಎಂದು ಹೇಳಿದರು.

ಬಿಇಒ ಸುರೇಂದ್ರ ಕಾಂಬಳೆ ಮಾತನಾಡಿ, ಪಾಲಕರು ಹಾಗೂ ಪೋಷಕರಾದವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಾತಿ ಮಾಡಬೇಕು. ಮಕ್ಕಳಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನ ಉಚಿತವಾಗಿ ನೀಡುತ್ತಿದೆ. ಎಲ್ಲರೂ ಮಕ್ಕಳಿಗೆ ಆಸ್ತಿ ಮಾಡುವ ಬದಲಿಗೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ಮಕ್ಕಳನ್ನೆ ದೇಶಕ್ಕೆ ಆಸ್ತಿಯನ್ನಾಗಿ ನೀಡಬೇಕು ಎಂದರು.

ಗ್ರಾಮದ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ದಾಖಲಾತಿ ಆಂದೋಲನದ ಜಾಗೃತಿ ಜಾಥಾದ ಮೆರವಣಿಗೆ ಮಾಡಲಾಯಿತು. ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ ಹಾಗೂ ಬಿಇಒ ಸುರೇಂದ್ರ ಕಾಂಬಳೆ ಮಕ್ಕಳಿಗೆ ಅಕ್ಕಿಯಲ್ಲಿ ಅಕ್ಷರ ಬರೆಸುವ ಮೂಲಕ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಾಥಾದಲ್ಲಿ ಮಕ್ಕಳು ವಿವಿಧ ವೇಷಭೂಷಣ ತೊಟ್ಟಿದ್ದರು. ಮಹಿಳೆಯರು ಕುಂಭ ಕಳಶ ಹಿಡಿದು ಸಾಗಿದರು. ಮಕ್ಕಳು ದಾರಿಯುದ್ದಕ್ಕೂ ನೃತ್ಯ ಮಾಡಿ ಘೋಷವಾಕ್ಯ ಹೇಳುತ್ತಾ ಶಿಕ್ಷಣದ ಕುರಿತು ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಎಚ್‌ಡಿಎಂಸಿ ಅಧ್ಯಕ್ಷ ಪರಸಪ್ಪ ಸರೂರು, ಮುಖ್ಯ ಶಿಕ್ಷಕ ಸಿದ್ರಾಮಪ್ಪ ಅಮರಾವತಿ, ಸಿಆರ್‌ಪಿ ಈರಣ್ಣ ಕರಡಕಲ್, ಪ್ರೌಢಶಾಲೆ ಉಪಪ್ರಾಚಾರ್ಯ ಡಿ. ಸುರೇಶ, ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣಾ ಪಾಟೀಲ, ಗೌಸುಸಾಬ ಕೊಣ್ಣೂರು, ರಾಜೇಸಾಬ ಯಲಬುರ್ಗಿ, ಲಾಡಸಾಬ ಕೊಳ್ಳಿ, ರುಕುಮುದ್ದೀನಸಾಬ ನೀಲಗಾರ, ಬಾಲಾಜಿ ಭೋವಿ, ಶ್ರೀನಿವಾಸ ಕಂಟ್ಲಿ, ರಾಮನಗೌಡ ಬಿಜ್ಜಲ, ಕೇಶಪ್ಪ ನೀಲಿ ಸೇರಿದಂತೆ ಅನೇಕ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು ಹಾಗೂ ಗ್ರಾಮಸ್ಥರು ಇದ್ದರು.

24ಕೆಎಸಟಿ2: ಕುಷ್ಟಗಿ ತಾಲೂಕಿನ ದೋಟಿಹಾಳ ಶಾಲೆಯಲ್ಲಿ ನಡೆದ ದಾಖಲಾತಿ ಆಂದೋಲನದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ ಮಕ್ಕಳಿಗೆ ಅಕ್ಕಿಯಲ್ಲಿ ಅಕ್ಷರ ಬರೆಸುವ ಮೂಲಕ ಚಾಲನೆ ನೀಡಿದರು.