ಸಾರಾಂಶ
ಕನ್ನಡಪ್ರಭ ವಾರ್ತೆ ಗುಬ್ಬಿ
ಸತ್ಯ ಜ್ಞಾನ, ಸದ್ಗುಣ, ಸತ್ಸಂಗ, ಸದ್ವಿಚಾರ, ಸದಾಚಾರದಿಂದ ನಮ್ಮನ್ನು ರಕ್ಷಾ ಬಂಧನ ಬಂಧಿಸಿಕೊಳ್ಳುತ್ತದೆ ಎಂದು ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ತಿಳಿಸಿದರು.ಪಟ್ಟಣದ ಗುರುಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಗುಬ್ಬಿ ಸೇವಾ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ರಕ್ಷಾ ಬಂಧನದ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸತ್ಯ ತತ್ವ ಜೀವನದಲ್ಲಿ ಜಾಗೃತಗೊಳಿಸಲು ಭಾರತೀಯರಾದ ನಾವು ವರ್ಷ ವರ್ಷವೂ ಹಬ್ಬ ಮಾಡುತ್ತಾ ಬರುತ್ತಿದ್ದೇವೆ. ನಾವೆಲ್ಲರೂ ದೇಶ ರಕ್ಷಣೆಗಾಗಿ ಮನೆ ಕಟ್ಟಿಕೊಂಡವು, ಕಲ್ಲು ಮುಳ್ಳಲ್ಲಿ ನಡೆಯುವಾಗ ಪಾದರಕ್ಷಣೆಗಾಗಿ ಪಾದರಕ್ಷೆ ಹಾಕಿಕೊಂಡೆವು. ಚಳಿಗಾಲದಲ್ಲಿ ಚಳಿಯಿಂದ ರಕ್ಷಣೆ ಪಡೆಯಲು ಸ್ವೆಟರ್, ರಾಜ ವೈರಿಗಳಿಂದ ರಕ್ಷಣೆ ಪಡೆಯಲು ಕೋಟೆ ಕಟ್ಟಿಕೊಂಡರು. ಹೊಲದಲ್ಲಿ ಬೆಳೆದ ಸಸ್ಯಗಳನ್ನು ದನ ಕರುಗಳಿಂದ ರಕ್ಷಣೆಗೆ ಬೆಲೆ ಹಾಕಿಕೊಂಡು ಹಾಗೆ ಆತ್ಮವನ್ನು ದುರ್ಗಣಗಳಿಂದ, ದುಶ್ಚಟದಿಂದ ದುಸ್ಸಂಗದಿಂದ, ದುಷ್ಕರ್ಮದಿಂದ, ದುರಾಸೆಯಿಂದ ದುರಾಲೋಚನೆಯಿಂದ, ದುರಹಂಕಾರದಿಂದ ರಕ್ಷಿಸಲು ರಕ್ಷಾ ಬಂಧನ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಪ್ರತಿಯೊಬ್ಬರೂ ಆತ್ಮ ಜ್ಯೋತಿಗಳು ಒಬ್ಬ ಪರಮಾತ್ಮನ ಮಕ್ಕಳು ನಾವು ಸೋದರ ಸೋದರಿಯರು ಎಂದರು. ಬಿಇಒ ಎಂ.ಎಸ್.ನಟರಾಜು ಮಾತನಾಡಿ, ಧ್ಯಾನ ಮಾಡುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ದಿನದಲ್ಲಿ ಒಂದು ಬಾರಿ ಧ್ಯಾನ ಮಾಡಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಯತೀಶ್, ಯೋಗ ಶಿಕ್ಷಣ ಮಂದಿರದ ಸಂಚಾಲಕ ಮಹದೇವಯ್ಯ, ಸಂದೀಶ್, ತೇಜಸ್ವಿ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಹೋಟೇಲ್ ಮಾಲೀಕರ ಸಂಘದ ಅಧ್ಯಕ್ಷ ಕಾಂತರಾಜು ಮತ್ತಿತರರು ಇದ್ದರು.