ನಮ್ಮ ಜಾಗದ ಸುತ್ತಲಿನ ವಾತಾವರಣ ಸ್ವಚ್ಛತೆಯಿಂದ ಶುದ್ಧವಾಗಿಟ್ಟುಕೊಳ್ಳಬೇಕು

ಕುಷ್ಟಗಿ: ಸ್ವಂತ ಮನೆಯಂತೆ ಸುತ್ತಮುತ್ತಲಿನ ಜಾಗಗಳಾದ ಉದ್ಯಾನ,ರಸ್ತೆ ಸ್ವಚ್ಛವಾಗಿಟ್ಟುಕೊಳ್ಳುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ ಹೇಳಿದರು.

ಪಟ್ಟಣದ ವಾರ್ಡ್‌ ನಂ. 6ರಲ್ಲಿನ ವಿದ್ಯಾನಗರದ ಉದ್ಯಾನವನದಲ್ಲಿ ತಾಲೂಕು ಕಾನೂನೂ ಸೇವಾ ಸಮಿತಿ, ವಕೀಲರ ಸಂಘ, ಪುರಸಭೆ ಕಾರ್ಯಾಲಯದ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಜಾಗದ ಸುತ್ತಲಿನ ವಾತಾವರಣ ಸ್ವಚ್ಛತೆಯಿಂದ ಶುದ್ಧವಾಗಿಟ್ಟುಕೊಳ್ಳಬೇಕು, ಅಂದಾಗ ನಮ್ಮ ಮನೆಯಲ್ಲಿನ ಕುಟುಂಬಸ್ಥರು ಆರೋಗ್ಯವಂತರಾಗಿರಲು ಸಾಧ್ಯವಾಗಲಿದೆ ಎಂದರು.

ಸರ್ಕಾರಿ ಜಾಗವೆಂದು ಕಡೆಗಣಿಸದೆ ನಮ್ಮ ಆರೋಗ್ಯ ಸುಧಾರಣೆಗಾದರೂ ಸುತ್ತಮುತ್ತಲಿನ ಜಾಗ ಸ್ವಚ್ಚತೆಯಿಂದ ಇಟ್ಟುಕೊಳ್ಳುವದರ ಜತೆಗೆ ಈ ಉದ್ಯಾನವನ ಅಭಿವೃದ್ಧಿಗಾಗಿ ಕೈ ಜೋಡಿಸಬೇಕು. ಈಗಾಗಲೆ ಪುರಸಭೆಯವರಿಗೆ ತಿಳಿಸಲಾಗಿದೆ. ಎಲ್ಲ ಜಾಗ ಪೌರ ಕಾರ್ಮಿಕರು ಬಂದು ಸ್ವಚ್ಛ ಮಾಡುವದು ಆಗುವುದಿಲ್ಲ ಅವರೊಂದಿಗೆ ನಿವಾಸಿಗಳು ಕೈ ಜೋಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌವಲಗಿ ಮಾತನಾಡಿ, ನಮ್ಮ ಮನಸ್ಸಿನಂತೆ ಸುತ್ತಮುತ್ತಲಿನ ಜಾಗ ಸ್ವಚ್ಛವಾಗಿಟ್ಟುಕೊಳ್ಳಬೇಕು ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಇಲ್ಲದಿದ್ದರೆ ಕ್ರಿಮಿಕೀಟಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡಿ ಮನುಷ್ಯನ ಸ್ವಾಸ್ಥ್ಯ ಹಾಳು ಮಾಡುತ್ತವೆ. ಸುಂದರ ಪರಿಸರದಿಂದ ವ್ಯಕ್ತಿಯ ಆರೋಗ್ಯ ಜತೆಗೆ ಸಕಾರಾತ್ಮಕ ಆಲೋಚನೆ ಬೆಳೆಯಲು ಸಾಧ್ಯ ಎಂದರು.

ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ಮಾತನಾಡಿ, ರಸ್ತೆ ಬದಿ, ಮನೆ ಅಕ್ಕಪಕ್ಕದಲ್ಲಿ ಕಸ ಬಿಸಾಡುವುದು ಆರೋಗ್ಯಕ್ಕೆ,ನಿಸರ್ಗಕ್ಕೆ ಕೆಡಕನ್ನು ಉಂಟುಮಾಡುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಿ ಹಸಿ ಕಸ ಹಾಗೂ ಒಣ ಕಸ ವಿಂಗಡಿಸಬೇಕು ಕಸ ಸಂಗ್ರಹಣ ವಾಹನದಲ್ಲಿ ಹಾಕಬೇಕು. ಸರ್ಕಾರ ನೈರ್ಮಲ್ಯ ಕಾಪಾಡಲು ಸಾಕಷ್ಟು ಶ್ರಮಿಸುತ್ತಿದೆ ಜನರ ಸದೃಢ ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡುತ್ತಿದೆ ನಾವು ಸಹ ಸ್ವಚ್ಚತೆಗೆ ಆದ್ಯತೆ ನೀಡಿ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಬೇಕು ಎಂದರು. ಮುಂದಿನ ದಿನಗಳಲ್ಲಿ ಇಂದು ಸ್ವಚ್ಚತೆ ಕೈಗೊಂಡಿರುವ ಉದ್ಯಾನವನ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಚ್.ಆರ್.ನಾಯಕ್, ಸಹಾಯಕ ಸರ್ಕಾರಿ ಅಭಿಯೋಜಕಿ ಇಂದಿರಾ ಸುಹಾಸಿನಿ, ಆರೋಗ್ಯ ನಿರೀಕ್ಷಕ ಪ್ರಾಣೇಶ, ಎಂ.ಶಪಿ ಹೇರೂರ್, ಎನ್.ಆರ್.ಸೂಡಿ, ಪಂಪಾಪತಿ, ನ್ಯಾಯಾಂಗ ಇಲಾಖೆ ಸಿಬ್ಬಂದಿ ಸುನೀಲ ಮಠದ ಮತ್ತು ಆಕಾಶ ಸಂಗನಾಳ ಸೇರಿದಂತೆ ವಿದ್ಯಾನಗರದ ಸ್ಥಳೀಯ ನಿವಾಸಿಗಳು ಮತ್ತು ಪುರಸಭೆಯ ಪೌರಕಾರ್ಮಿಕರು ಇತರರು ಇದ್ದರು.