ಯುವಜನತೆ ಮಾದಕ ವಸ್ತುಗಳಿಂದ ದೂರ ಇರಲಿ: ಎಡಿಸಿ ಅನುರಾಧ

| Published : Aug 05 2024, 12:35 AM IST

ಯುವಜನತೆ ಮಾದಕ ವಸ್ತುಗಳಿಂದ ದೂರ ಇರಲಿ: ಎಡಿಸಿ ಅನುರಾಧ
Share this Article
  • FB
  • TW
  • Linkdin
  • Email

ಸಾರಾಂಶ

ಅಜ್ಞಾನದ ಕಾರಣದಿಂದಲು ಸಹ ಬಹುತೇಕರು ಒಂದಿಲ್ಲೊಂದು ದುಶ್ಚಟಕ್ಕೆ ಒಳಗಾಗಿರುತ್ತಾರೆ.

ಹೊಸಪೇಟೆ: ಮದ್ಯಪಾನ, ಮಾದಕವಸ್ತು, ತಂಬಾಕು ವಸ್ತುಗಳ ಸೇವನೆಯು ಆರೋಗ್ಯಕ್ಕೆ ಹಾನಿಕರವಾಗಿದೆ. ಇದನ್ನರಿತು ವಿದ್ಯಾರ್ಥಿ ಯುವಜನರು ಸೇರಿದಂತೆ ಪ್ರತಿಯೊಬ್ಬರು ವ್ಯಸನಮುಕ್ತರಾಗಿ ಮುನ್ನುಗ್ಗಬೇಕು ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಹೇಳಿದರು.

ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸಹಯೋಗದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ನಡೆದ ವ್ಯಸನ ಮುಕ್ತ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಜ್ಞಾನದ ಕಾರಣದಿಂದಲು ಸಹ ಬಹುತೇಕರು ಒಂದಿಲ್ಲೊಂದು ದುಶ್ಚಟಕ್ಕೆ ಒಳಗಾಗಿರುತ್ತಾರೆ. ಜೀವಕ್ಕೆ ಹಾನಿ ಎಂದು ಗೊತ್ತಿದ್ದು ಬಹುತೇಕರು ಕೆಟ್ಟ ಚಟಗಳಿಗೆ ಬಲಿಯಾಗುತ್ತಾರೆ. ಇದರಿಂದ ವ್ಯಕ್ತಿಯೊಬ್ಬರಷ್ಟೇ ಅಲ್ಲ ಇಡೀ ಕುಟುಂಬದ ಸ್ವಾಸ್ಥ್ಯ ಹಾಳಾಗುವುದು, ವಿಪರ್ಯಾಸದ ಸಂಗತಿಯಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರ ಆರೋಗ್ಯವು ಸಹ ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ವಯಸ್ಸಿನ ಮೀತಿಯಿಲ್ಲದೇ ದುಶ್ಚಟಗಳಿಗೆ ದಾಸರಾಗುವುದನ್ನು ತಡೆಯುವ ಕೆಲಸವು ನಿರಂತರವಾಗಿ ನಡೆಯಬೇಕು. ದುರಾಭ್ಯಾಸವಿದ್ದಲ್ಲಿ ವಿದ್ಯೆಯು ಸಹ ತಲೆಗೆ ಹತ್ತುವುದಿಲ್ಲ. ಇದನ್ನು ವಿದ್ಯಾರ್ಥಿ ಯುವಜನರು ಅರಿಯಬೇಕು. ನಾನು ಈ ದಿನದಿಂದ ಯಾವುದೇ ದುಶ್ಚಟ ಮಾಡಲಾರೆ ಎಂದು ಸಂಕಲ್ಪ ಮಾಡುವ ಮನೋಭಾವ ಬೆಳೆಸಿಕೊಂಡಲ್ಲಿ ಉತ್ತಮ ಆರೋಗ್ಯ ಮತ್ತು ನೆಮ್ಮದಿ ಸಾಧ್ಯವಾಗಲಿದೆ ಎಂದರು.

ವಿಶೇಷ ಉಪನ್ಯಾಸಕರಾಗಿ ಹಿಟ್ನಾಳ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಸವರಾಜ ಟಿ.ಎಚ್. ಮಾತನಾಡಿ, ದೇಶದ ಶ್ರೇಯೋಭಿವೃದ್ಧಿ ಎಂದರೆ ಅದು ಪ್ರಜೆಗಳ ಆರೋಗ್ಯ ಆಗಿರುತ್ತದೆ. ಅನ್ನ, ಆಶ್ರಯ, ಶಿಕ್ಷಣ ಮತ್ತು ಆರೋಗ್ಯ ಕೊಡುವುದು ಸಹ ಸರ್ಕಾರದ ಆದ್ಯತೆಯ ಕಾರ್ಯವಾಗಿರುವುದರ ಹಿಂದಿನ ಸಮಾಜಹಿತದ ಉದ್ದೇಶವನ್ನು ಅರಿಯಬೇಕು ಎಂದರು.

ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಪ್ರಾಸ್ತಾವಿಕ ಮಾತನಾಡಿ, ಡಾ.ಮಹಾಂತ ಶಿವಯೋಗಿಗಳು ವ್ಯಸನಮುಕ್ತ ಆಂದೋಲನದ ಹರಿಕಾರರಾಗಿದ್ದಾರೆ. ಶ್ರೀಗಳ ಜನ್ಮದಿನದ ನಿಮಿತ್ತ ರಾಜ್ಯ ಸರ್ಕಾರವು ಪ್ರತಿ ವರ್ಷ ಆಗಸ್ಟ್ 1ನ್ನು ವ್ಯಸನ ಮುಕ್ತ ದಿನವನ್ನಾಗಿ ಆಚರಿಸುತ್ತಿದೆ. ವಿದ್ಯಾರ್ಥಿ ಯುವಜನರು ದುಶ್ಚಟಗಳಿಂದ ದೂರವಾಗಿ ಆರೋಗ್ಯಕರ ಜೀವನ ನಡೆಸುವ ಸಂಕಲ್ಪ ಮಾಡಿ, ಶ್ರೀಗಳು ಹೇಳಿದ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು.

ಶಾಲಾ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಮಂಜುನಾಥ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಸಮಾರಂಭದಲ್ಲಿ ಎಸಿ ವಿವೇಕಾನಂದ ಪಿ., ಎಎಸ್ಪಿ ಸಲೀಂ ಪಾಷಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರಪ್ಪ ಕೆ.ಬಿ., ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆಯ ಅಧಿಕಾರಿ ಅವಿನಾಶ ಗೋಟಖಿಂಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ. ದೊಡ್ಡಮನಿ ಮತ್ತಿತರರಿದ್ದರು.

ಶಿಕ್ಷಕರಾದ ಕೆ.ಎಂ. ತಾಯಪ್ಪ, ಡಿ.ಎಸ್.ರತೀಶ್, ಅಬ್ದುಲ್ ಕಲಾಂ, ಶಶಿರೇಖಾ, ಲತಾ ಕುಮಾರಿ ಹಾಗೂ ಟಿ.ಬಿ.ಡ್ಯಾಂ ಸರ್ಕಾರಿ ಪ್ರೌಢಶಾಲೆ, ವಾಲ್ಮೀಕಿ ಪ್ರೌಢಶಾಲೆ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ಮತ್ತು ವಸತಿ ನಿಲಯದ ವಿದ್ಯಾರ್ಥಿಗಳು ಇದ್ದರು. ಶಿಕ್ಷಕಿ ಪದ್ಮಜಾ ಹಾಗೂ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು.