ಪಟ್ಟಣದ ಕೃಷ್ಣಾ ಭಾಗ್ಯ ಜಲ ನಿಗಮದ ನೂರಾರು ಎಕರೆ ಪ್ರದೇಶದ ಆಸ್ತಿಯನ್ನು ಖಾಸಗಿಯವರು ಅತಿಕ್ರಮಣ ನಡೆಸುತ್ತಿದ್ದರೂ ಅಧಿಕಾರಿಗಳು ತಮ್ಮ ಇಲಾಖೆಯ ನೂರಾರು ಕೋಟಿ ರು. ಬೆಲೆ ಬಾಳುವ ಆಸ್ತಿಯನ್ನು ವಶಪಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದೆ.

ವಿಜಯ ಪುರೋಹಿತ

ಕನ್ನಡಪ್ರಭ ವಾರ್ತೆ ಕೆಂಭಾವಿ

ಪಟ್ಟಣದ ಕೃಷ್ಣಾ ಭಾಗ್ಯ ಜಲ ನಿಗಮದ ನೂರಾರು ಎಕರೆ ಪ್ರದೇಶದ ಆಸ್ತಿಯನ್ನು ಖಾಸಗಿಯವರು ಅತಿಕ್ರಮಣ ನಡೆಸುತ್ತಿದ್ದರೂ ಅಧಿಕಾರಿಗಳು ತಮ್ಮ ಇಲಾಖೆಯ ನೂರಾರು ಕೋಟಿ ರು. ಬೆಲೆ ಬಾಳುವ ಆಸ್ತಿಯನ್ನು ವಶಪಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದೆ.

ಸುಮಾರು 1979ರಲ್ಲಿ ಈ ಭಾಗದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಎಂಬ ಹೆಸರಿನಿಂದ ಪ್ರಾರಂಭವಾದ ಈ ಬೃಹತ್ ನೀರಾವರಿ ಯೋಜನೆ ರೈತರ ಪ್ರಮುಖ ನೀರಾವರಿ ಯೋಜನೆಯಲ್ಲಿ ಒಂದಾಯಿತು. ಕಾಲ ಬದಲಾದಂತೆ ಈ ಇಲಾಖೆ ಕೃಷ್ಣಾ ಭಾಗ್ಯ ಜಲ ನಿಗಮ (ಕೆ.ಬಿ.ಜೆ.ಎನ್.ಎಲ್) ಎಂದು ಮರು ನಾಮಕರಣಗೊಂಡು ಪಟ್ಟಣದ ಎರಡು ಪ್ರಮುಖ ಪ್ರದೇಶಗಳನ್ನು ಗುರುತಿಸಿ ವಸಾಹತು ಸ್ಥಾಪನೆ ಮಾಡಿತು. ಇದೀಗ ಎರಡೂ ವಸಾಹತು ಪ್ರದೇಶಗಳೂ ಗರಿಷ್ಠ ಮಟ್ಟದಲ್ಲಿ ಖಾಸಗಿಯವರ ಪಾಲಾಗಿದ್ದು, ಕಾಲುವೆಯ ಪಕ್ಕದಲ್ಲಿರುವ ನೂರಾರು ಎಕರೆ ಭುಪ್ರದೇಶವೂ ಸಹಿತ ಖಾಸಗಿ ವ್ಯಕ್ತಿಗಳ ಪಾಲಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ ಎಂಬ ಅನುಮಾನದ ಮಾತುಗಳು ಜನರಿಂದ ಕೇಳಿ ಬರುತ್ತಿದ್ದವು.

ಇದಕ್ಕೆ ಹೌದು ಎನ್ನುವಂತೆ ಸೆ.5 ಶನಿವಾರ ಸುರಪುರ ತಾಲೂಕಾ ಕೇಂದ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ನೇತೃತ್ವದಲ್ಲಿ ನಡೆದ ಪ್ರಜಾಸೇವಾ ಎಂಬ ಹೆಸರಿನ ಜನ ಸಂಪರ್ಕ ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಎಚ್. ಆರ್. ಬಡಿಗೇರ ಅವರು ಈ ಕುರಿತು ಸಚಿವರಿಗೆ ಮನವಿ ಸಲ್ಲಿಸಿದ್ದು ಈ ಮನವಿಯಲ್ಲಿನ ಪ್ರಮುಖ ಅಂಶಗಳು ಕೋಟಿಗಟ್ಟಲೆ ಬೆಲೆಬಾಳುವ ಸರ್ಕಾರಿ ಆಸ್ತಿ ಖಾಸಗಿಯವರ ಪಾಲಾಗುತ್ತಿವೆ ಎಂಬ ಜನತೆಯ ಅನುಮಾನಕ್ಕೆ ಮತ್ತಷ್ಟು ಸಾಕ್ಷಿ ಒದಗಿಸಿದೆ.

ಮನವಿಯಲ್ಲಿ ಏನಿದೆ ?: ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಕೆಯಾದ ಪ್ರಮುಖ ಮನವಿಯಲ್ಲಿ ಪಟ್ಟಣದಲ್ಲಿ ಕೆ.ಬಿ.ಜೆ.ಎನ್.ಎಲ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಒಳಪಟ್ಟ ಸುಮಾರು 1100 ಎಕರೆ ಸರ್ಕಾರಿ ಜಮೀನು ಲಭ್ಯವಿದ್ದರೂ ಅದನ್ನು ಸರ್ಕಾರಿ ಕಟ್ಟಡಗಳಿಗೆ ಬಳಸದೆ ಖಾಸಗಿಯವರಿಗೆ ಅನಧಿಕೃತವಾಗಿ ಪರಭಾರೆ ಮಾಡಿದ್ದಾರೆ. ಇದರಲ್ಲಿ ವಿಶೇಷವಾಗಿ ನೀರಾವರಿ ಮತ್ತು ಕಂದಾಯ ಇಲಾಖೆಯ ಜಮೀನುಗಳು ಬಳಕೆಯಾಗಿವೆ. ಇದಲ್ಲದೆ ಕೃಷ್ಣಾ ಕಾಲುವೆಯ ಅಕ್ಕಪಕ್ಕದಲ್ಲಿನ ಸ್ಥಳಗಳಲ್ಲಿ ಈಗಾಗಲೆ ಅನಧಿಕೃತವಾಗಿ ಮುರುಮ್ ಕ್ವಾರಿ ನಿರ್ಮಿಸುವುದರ ಮೂಲಕ ಖಾಸಗಿ ವ್ಯಕ್ತಿಗಳು ತಮ್ಮ ಹಿಡಿತ ಸಾಧಿಸಿದ್ದಾರೆ.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಪಟ್ಟಣದ ಜನತೆಯ ಹಿತದೃಷ್ಟಿಯಿಂದ ಅತಿಕ್ರಮಣವಾದ ಜಾಗವನ್ನು ತಮ್ಮ ಸುಪರ್ದಿಗೆ ಪಡೆದು ಇಲ್ಲಿ ಅವಶ್ಯವಿರುವ ಮಹಿಳಾ ವಸತಿ ನಿಲಯ, ಕ್ರೀಡಾಂಗಣ, ಪುರಸಭೆ ಕಾರ್ಯಾಲಯ, ವಿವಿಧ ಸರ್ಕಾರಿ ಕಚೇರಿಗಳ ಕಟ್ಟಡಗಳು ಹಾಗೂ ವಸತಿ ಹೀನರಿಗೆ ನಿವೇಶನ ಒದಗಿಸುವ ಕಾರ್ಯ ಮಾಡಬೇಕು ಎಂದು ಬಡಿಗೇರ ಮನವಿ ಮಡಿದ್ದಾರೆ.

ಕೆಬಿಜೆಎನ್‌ಎಲ್ ವ್ಯಾಪ್ತಿಗೆ ಒಳಪಡುವ ಸರ್ವೆ ನಂ.4 ಸೇರಿದಂತೆ ಎರಡು ಪ್ರಮುಖ ಇಲಾಖೆಯ 100 ಕೋಟಿ ರುಪಾಯಿಗಳ ಬೆಲೆ ಬಾಳುವ ಆಸ್ತಿಗಳು ಖಾಸಗಿಯವರ ಪಾಲಾಗುತ್ತಿದ್ದು ಸರ್ಕಾರ ಇದನ್ನು ಸರ್ವೆ ಮಾಡಿಸಿ ತಮ್ಮ ವಶಕ್ಕೆ ಪಡೆಯಬೇಕು. ಪಟ್ಟಣದಲ್ಲಿ ಅವಶ್ಯವಿರುವ ಮಹಿಳಾ ವಸತಿ ನಿಲಯ ಸೇರಿದಂತೆ ಹಲವು ಕಟ್ಟಡಗಳಿಗೆ ಈ ಜಾಗವನ್ನು ಒದಗಿಸಿ ಜನತೆಗೆ ಅನುಕೂಲ ಕಲ್ಪಿಸಬೇಕು ಎಂದು ರೈತ ಸಂಘ ರಾಜ್ಯ ಕಾರ್ಯದರ್ಶಿ ಎಚ್. ಆರ್. ಬಡಿಗೇರ ಹೇಳಿದರು.

ಈ ಪ್ರಮುಖ ಅಂಶಗಳನ್ನು ನೋಡಿದಾಗ ಬೆಲೆಬಾಳುವ ಸರ್ಕಾರಿ ಆಸ್ತಿ ಉಳ್ಳವರ ಪಾಲಾಗುತ್ತಿದ್ದು ಈಗಾಗಲೆ ಕೃಷ್ಣಾ ಕಾಲುವೆಯ ಪಕ್ಕದಲ್ಲಿ ಗೂಡಂಗಡಿಗಳು, ಮಾಂಸದಂಗಡಿಗಳು ತಲೆ ಎತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕಾಲುವೆಯಂಚಿನ ಎಲ್ಲ ಜಾಗವೂ ಖಾಸಗಿಯವರ ಪಾಲಾಗುವ ಭೀತಿ ಎದುರಾಗಿದೆ. ಸರ್ಕಾರಿ ಆಸ್ತಿ ಮತ್ತೊಬ್ಬರ ಪಾಲಾಗುವ ಮೊದಲೆ ಸರ್ಕಾರ ಎಚ್ಚೆತ್ತು ಬೆಲೆಬಾಳುವ ಆಸ್ತಿ ಮತ್ತು ವಸಾಹತುಗಳನ್ನು ತನ್ನ ಸುಪರ್ದಿಗೆ ಪಡೆಯಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.