ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುತಾಲೂಕಿನ ಗೋಣಿ ತುಮಕೂರಿನಲ್ಲಿ ಗ್ರಾಮದೇವತೆಗಳಾದ ಶ್ರೀ ಗದ್ದೆ ಕೆಂಪಮ್ಮದೇವಿ ಮತ್ತು ಶ್ರೀ ಆದಿಶಕ್ತಿ ಅರಸಮ್ಮದೇವಿ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಗೋಣಿ ತುಮಕೂರಿನಲ್ಲಿ ಕಳೆದ 9 ವರ್ಷದ ಹಿಂದೆ ಗ್ರಾಮ ದೇವತೆಗಳಾದ ಗದ್ದೆ ಕೆಂಪಮ್ಮದೇವಿ ಮತ್ತು ಆದಿಶಕ್ತಿ ಅರಸಮ್ಮದೇವಿ ಜಾತ್ರೆಯನ್ನು ನಡೆಸಲಾಗಿತ್ತು. ಈಗ 10 ವರ್ಷದ ನಂತರ ಜಾತ್ರೆ ಆಚರಿಸುತ್ತಿರುವುದು ಗ್ರಾಮಸ್ಥರಲ್ಲಿ ಸಂತೋಷ, ಸಂಭ್ರಮ, ಸಡಗರ ಮನೆ ಮಾಡಿತ್ತು. ದೇವರಿಗೆ ತಂಬಿಟ್ಟಿನ ಆರತಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.
ಊರಿನ ಮಧ್ಯೆಭಾಗದಲ್ಲಿರುವ ದೇವರ ಗರ್ಭ ಗುಡಿಯಿಂದ ಕಳಸ ಮತ್ತು ಗೂಡೆಗಳೊಂದಿಗೆ ದೇವರನ್ನು ಅದ್ಧೂರಿಯಾಗಿ ಊರಿನ ಹೆಬ್ಬಾಗಲಿನ ಮುಖೇನ ಅರಸಮ್ಮ ದೇವಾಲಯಕ್ಕೆ ವಿವಿಧ ವಾದ್ಯಗೋಷ್ಠಿಯೊಂದಿಗೆ ಕರೆದೊಯ್ಯಲಾಯಿತು. ಅರಸಮ್ಮ ದೇವಾಲಯಕ್ಕೆ ತೆರಳಿ ಮೂರು ಸುತ್ತು ದೇವಾಲಯ ಪ್ರದಕ್ಷಿಣೆ ಹಾಕಿದ ನಂತರ ನೆರೆದಿದ್ದ ಊರಿನ ಗ್ರಾಮಸ್ಥರು, ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.ಕುರುಕ್ಷೇತ್ರ ನಾಟಕ ಪ್ರದರ್ಶನ: ಜಾತ್ರೆಯ ಅಂಗವಾಗಿ ಶ್ರೀ ಬ್ರಹ್ಮಲಿಂಗೇಶ್ವರಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಶ್ರೀ ಚನ್ನಬಸವೇಶ್ವರ ಡ್ರಾಮಾ ಸೀನ್ಸ್ ಭವ್ಯ ರಂಗ ಸಜ್ಜಿಕೆಯಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನವಾಯಿತು.
ಶಾಸಕ ಎಂ.ಟಿ. ಕೃಷ್ಣಪ್ಪ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪೌರಾಣಿಕ ನಾಟಕಗಳು ನಶಿಸುತ್ತಿವೆ. ಪೌರಾಣಿಕ ನಾಟಕ ಕಲಾವಿದರಿಗೆ ಪ್ರೋತ್ಸಾಹದ ಅಗತ್ಯವಿದೆ. ನಾಟಕ ಕಲೆ ಗ್ರಾಮೀಣ ಭಾಗದಲ್ಲಿ ಮಾತ್ರ ಜೀವಂತವಾಗಿರುವುದನ್ನು ನೋಡಬಹುದಾಗಿದೆ ಎಂದರು.ಇಂದಿನ ಯುವಸಮೂಹ ಟಿವಿ, ಮೊಬೈಲ್ ದಾಸರಾಗುತ್ತಿದ್ದಾರೆ.ಆದ್ದರಿಂದ ಪುರಾತನ ಸಾಹಿತ್ಯ, ಕಲೆಗಳ ಬಗ್ಗೆ ಆಸಕ್ತಿಯೇ ಇಲ್ಲದಂತಾಗಿದೆ. ಪೌರಾಣಿಕ ನಾಟಕಗಳ ಬಗ್ಗೆ ಇಂದಿನ ಯುವ ಸಮೂಹಕ್ಕೆ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.ಹಾ.ಮಾ. ಸಿ.ಎನ್. ನಿತೀಶ್‌ಕುಮಾರ್ ಸಂಗೀತ ನಿರ್ದೇಶನದಲ್ಲಿ ಕುರುಕ್ಷೇತ್ರ ಪೌರಾಣಿಕ ನಾಟಕ ಅರ್ಥಗರ್ಭಿತವಾಗಿ ಮೂಡಿ ಬಂದಿತು. ನಾಟಕದಲ್ಲಿ ಕಲಾವಿದರುಗಳು ಅಚ್ಚುಕಟ್ಟಾಗಿ ಅಭಿನಯಿಸಿದ ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
;Resize=(128,128))
;Resize=(128,128))
;Resize=(128,128))