ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
೫೦೦ ವರ್ಷಗಳ ಹಿಂದೆಯೇ ನಿರ್ಮಾಣವಾದ ಬೆಂಗಳೂರು ಕೆಂಪೇಗೌಡರ ದೂರದೃಷ್ಠಿಯಿಂದಾಗಿ ವಿಶ್ವಖ್ಯಾತಿ ಪಡೆದಿದೆ ಎಂದು ಹಾಸನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶ್ರೀ ಶಂಭುನಾಥ ಮಹಾಸ್ವಾಮೀಜಿ ತಿಳಿಸಿದರು.ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ತಾಲೂಕು ಆಡಳಿತ, ಶ್ರೀ ನಾಡಪ್ರಭು ಕೆಂಪೇಗೌಡ ಆಚರಣಾ ಸಮಿತಿ, ಒಕ್ಕಲಿಗ ನೌಕರರ ಹಾಗೂ ನಿವೃತ್ತ ನೌಕರರ ಸಂಘದವರ ಸಂಯುಕ್ತಾಶ್ರಯದಲ್ಲಿ ಸೋಮವಾರ ನಾಡಪ್ರಭು ಶ್ರೀ ಕೆಂಪೇಗೌಡರ ೫೧೭ ನೇ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಆನೆಯಂತೆ ಕೆಲಸ ಮಾಡಿ ಇರುವೆಯಂತೆ ಪ್ರಚಾರ ಪಡೆದ ವ್ಯಕ್ತಿಗಳನ್ನು ಕಂಡಿದ್ದೇವೆ. ಅದೇ ರೀತಿ ಇರುವೆಯಂತೆ ಕೆಲಸ ಮಾಡಿ ಆನೆಯಂತೆ ಪ್ರಚಾರ ಪಡೆದ ವ್ಯಕ್ತಿಗಳನ್ನೂ ಕಂಡಿದ್ದೇವೆ. ಆದ್ದರಿಂದ ಆದರ್ಶ ವ್ಯಕ್ತಿಗಳ ದೂರದೃಷ್ಠಿಯ ಚಿಂತನೆಗಳನ್ನು ಪಾಲನೆ ಮಾಡುತ್ತಾ ಸಾಗಬೇಕಿದೆ ಎಂದು ಹೇಳಿದರು.
ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ ಎದೆಗೆ ಬಿತ್ತಿದ ವಿದ್ಯೆ ಹಾಗೂ ಭೂಮಿಗೆ ಬಿತ್ತಿದ ಬೀಜ ಪ್ರಯೋಜನಕ್ಕೆ ಬರುತ್ತದೆ ಎಂಬುದಕ್ಕೆ ಕೆಂಪೇಗೌಡರ ಬೆಂಗಳೂರಿನ ನಿರ್ಮಾಣ ಕಾರ್ಯ ಅತ್ಯುತ್ತಮ ನಿದರ್ಶನವಾಗಿದೆ. ಬೆಂಗಳೂರು ನಗರದಲ್ಲಿ ಕೇವಲ ಕನ್ನಡಿಗರಷ್ಟೇ ಅಲ್ಲ, ಬಹುಭಾಷಾ ವ್ಯಕ್ತಿಗಳು ಜಾತ್ಯತೀತವಾಗಿ ಧರ್ಮಾತೀತವಾಗಿ, ಪ್ರದೇಶಾತೀತವಾಗಿ ವಾಸ ಮಾಡುತ್ತಾ ಇದ್ದಾರೆ. ಅಂದು ಬೆಂಗಳೂರನ್ನು ಏನಾದರೂ ಕೆಂಪೇಗೌಡರು ನಿರ್ಮಾಣ ಮಾಡಲಿಲ್ಲ ಅಂದಿದ್ದರೆ, ಇಂದು ಒಂದು ಕೋಟಿ ಇಪ್ಪತ್ತು ಲಕ್ಷ ಜನರು ಸುಖವಾಗಿ ಬದುಕಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ಪ್ರಪಂಚದ ಐದು ಅದ್ಭುತವಾದ ಸುಂದರ ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ. ಕೆಂಪೇಗೌಡರನ್ನು ಜಾತಿಯ ಕಾರಣದಿಂದ ಅಲ್ಲ, ಆದರ್ಶಗಳು ಹಾಗೂ ಮೌಲ್ಯಗಳ ಕಾರಣದಿಂದ ಸ್ಮರಿಸಬೇಕಿದೆ ಎಂದು ಕಿವಿಮಾತು ಹೇಳಿದರು.ಸಂಸದ ಶ್ರೇಯಸ್ ಎಂ.ಪಟೇಲ್ ಮಾತನಾಡಿ ಬೆಂಗಳೂರು ಕೆಂಪೇಗೌಡರ ಕೊಡುಗೆಯಾಗಿದೆ. ಅವರನ್ನು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸೀಮಿತ ಮಾಡುವುದು ಬೇಡ. ಇವತ್ತು ಇಡೀ ಪ್ರಪಂಚ, ಇಡೀ ದೇಶ ಅವರನ್ನ ನೆನಪು ಮಾಡೋದು ನಮ್ಮ ಬೆಂಗಳೂರಿನಿಂದಾಗಿ. ಇವತ್ತು ನಮ್ಮೂರಿನಲ್ಲಿ ಪಕ್ಷಾತೀತವಾಗಿ ಜಾತ್ಯತೀತವಾಗಿ ಕೆಂಪೇಗೌಡರ ಜಯಂತಿ ಆಚರಣೆ ಮಾಡಲಾಗುತ್ತಿರುವುದು ವಿಶೇಷವಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಒಕ್ಕಲಿಗ ಸಮಾಜದ ನಮ್ಮೂರಿನವರು ಹಾಗೂ ನಮ್ಮ ರಾಷ್ಟ್ರದ ಮಾಜಿ ಪ್ರಧಾನಮಂತ್ರಿಗಳಾದ ಎಚ್. ಡಿ. ದೇವೇಗೌಡರು ನೆನಪಿಸಿಕೊಳ್ಳಬೇಕಿದೆ. ಕೆಂಪೇಗೌಡರ ಒಂದು ದೂರದೃಷ್ಟಿಯಿಂದ, ಬೆಂಗಳೂರನ್ನ ಒಂದು ವಿಭಿನ್ನ ರೀತಿಯಲ್ಲಿ ಅಭಿವೃದ್ಧಿ ಮಾಡಿಸಿ, ಕೆರೆಕಟ್ಟೆಗಳನ್ನ ನಿರ್ಮಿಸಿ ಸಂರಕ್ಷಣೆ ಮಾಡುವ ಮೂಲಕ ಅತ್ಯುತ್ತಮವಾದ ನಗರ ನಿರ್ಮಿಸಿಕೊಟ್ಟ ಕಾರಣದಿಂದ ಇಂದು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಶಾಸಕ ಎ.ಮಂಜು ಮಾತನಾಡಿ, ಸರ್ಕಾರ ೬೫ ಜಯಂತಿಗಳನ್ನು ಆಚರಿಸಲು ಒಂದು ಕ್ರಮವಿದೆ ಮತ್ತು ಜಯಂತಿಯನ್ನು ಸರ್ಕಾರ ನಿಗದಿಪಡಿಸಿದ ದಿನಾಂಕದಂದೇ ನೀವು ಮಾಡಿರಿ, ನೀವೂ ಕೂಡ ಆ ಡೇಟ್‌ಗೆ ಹೊಂದಿಸಿಕೊಂಡು ಮಾಡುವುದು ಒಳ್ಳೆಯದು ಎಂದು ತಹಸೀಲ್ದಾರ್ ಅವರಿಗೆ ಸಲಹೆ ನೀಡಿ, ಇದು ನನ್ನ ಅಭಿಪ್ರಾಯ ಎಂದರು. ಇತ್ತೀಚಿನ ವರ್ಷಗಳಲ್ಲಿ ಜಯಂತಿಗಳು ಒಂದು ಸಮಾಜಕ್ಕೆ ಸೀಮಿತ ಆಗ್ತಾ ಇವೆ. ಅದು ಹಾಗೆ ಆಗಬಾರದು. ಜಯಂತಿಗಳು ಅಂದ್ರೆ ಸಮಾಜದ ಎಲ್ಲಾ ಸಮುದಾಯಗಳು ಹಾಗೂ ಸಮಾಜಕ್ಕೆ ಅನುಕೂಲ ಆಗುವಂತೆ ನಾವು ಮಾಡಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಎಚ್.ಎಲ್.ಮಲ್ಲೇಶಗೌಡರು ಪ್ರಧಾನ ಭಾಷಣ ಮಾಡಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. ೯೫ಕ್ಕೂ ಹೆಚ್ಚು ಅಂಕ ಪಡೆದ ಎಲ್ಲಾ ಸಮುದಾಯಗಳ ಒಟ್ಟು ೮೫ ಪ್ರತಿಭಾವಂತ ವಿದ್ಯಾರ್ಥಿಗಳು, ೫೫ ಪ್ರಗತಿ ಪರ ರೈತರು, ೪ ನಿವೃತ್ತ ಸೈನಿಕರು, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ೧೫ ಸಾಧಕರನ್ನು ಗಣ್ಯರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಬಿಇಒ ಸೋಮಲಿಂಗೇಗೌಡ, ತಾ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪೃಥ್ವಿರಾಜ್, ಕಸಾಪ ತಾಲೂಕು ಅಧ್ಯಕ್ಷ ಪುಟ್ಟೇಗೌಡ, ಮುಖಂಡರಾದ ಬಾಗೂರು ಮಂಜೇಗೌಡ, ಬಾಗೂರು ಕೃಷ್ಣೇಗೌಡ, ರಮೇಶ್, ಲೋಕೇಶ್, ಮಳಲಿ ನಾರಾಯಣ್, ಇತರರು ಇದ್ದರು.