ಕೆಂಪೇಗೌಡ ಸಾವಿರಾರು ಕೆರೆ ಕಟ್ಟಿಸಿದ ಸಾಹಸಿ: ಅಶೋಕ ಭಟ್ಟ

| Published : Jun 28 2024, 12:47 AM IST

ಸಾರಾಂಶ

ಕೆಂಪೇಗೌಡ ಅವರು ಮಳೆ ನೀರನ್ನು ಇಂಗಲು ಸಾವಿರಾರು ಕೆರೆಗಳನ್ನು ಕಟ್ಟಿದರು. ರಾಜಧಾನಿಯಾಗಿದ್ದ ಮೈಸೂರನ್ನು ಬಿಟ್ಟು ಜನರು ಬೆಂಗಳೂರಿನ ಕಡೆ ದೃಷ್ಟಿ ಹಾಯಿಸುವಂತೆ ಮಾಡಿದರು.

ಯಲ್ಲಾಪುರ: ನಾಡಪ್ರಭು ಕೆಂಪೇಗೌಡ ಬೆಂಗಳೂರಿನ ಸೃಷ್ಟಿಕರ್ತ, ಅವರ ದೂರದೃಷ್ಟಿಯಿಂದ ನಿರ್ಮಾಣವಾದ ಬೆಂಗಳೂರು ಇಂದು ಎಷ್ಟೇ ಬೆಳೆದರೂ ಬೆಳೆಯಲು ಅವಕಾಶವಿದೆ. ಅಂತಹ ಅವರ ಯೋಚನೆ ಇತ್ತು. ಅವರ ವಾಸ್ತುಶಿಲ್ಪ, ನೀರಿನ ನಿರ್ವಹಣೆ ಅದ್ಭುತವಾಗಿತ್ತು ಎಂದು ತಹಸೀಲ್ದಾರ್‌ ಅಶೋಕ ಭಟ್ಟ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಜೂ. ೨೭ರಂದು ಗುರುವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಳೆ ನೀರನ್ನು ಇಂಗಲು ಸಾವಿರಾರು ಕೆರೆಗಳನ್ನು ಕಟ್ಟಿದರು. ರಾಜಧಾನಿಯಾಗಿದ್ದ ಮೈಸೂರನ್ನು ಬಿಟ್ಟು ಜನರು ಬೆಂಗಳೂರಿನ ಕಡೆ ದೃಷ್ಟಿ ಹಾಯಿಸುವಂತೆ ಮಾಡಿದರು. ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಸರ್ಕಾರಿ ಕಾರ್ಯಕ್ರಮವನ್ನು ಉತ್ತಮವಾಗಿ ನಡೆಸಿಕೊಡುವಂತಾಗಬೇಕು ಎಂದರು.

ವಿಶ್ವದರ್ಶನ ಪಿಯು ಕಾಲೇಜು ಪ್ರಾಂಶುಪಾಲ ಡಾ. ಡಿ.ಕೆ. ಗಾಂವ್ಕರ್ ಉಪನ್ಯಾಸ ನೀಡಿ, ದೃಷ್ಟಿ ಬದಲಾಯಿಸಿದರೆ ಆಗ ದೃಶ್ಯ ಬದಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಇತ್ತೀಚೆಗೆ ಭಾರತವನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ಅಂತೆಯೇ ಬೆಂಗಳೂರಿನ ಸ್ಥಾಪನೆಯ ಸಮಯದಲ್ಲಿ ದೂರದೃಷ್ಟಿಯ ಹಿನ್ನೆಲೆಯಲ್ಲಿ ಇಂದಿನ ಬೆಂಗಳೂರು ಬೃಹದಾಕಾರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು.

ಜಯಂತಿ ಅಂಗವಾಗಿ ನಡೆದ ವಿವಿದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀರಕ್ಷಾ ವೆರ್ಣೇಕರ್ ಕೆಂಪೇಗೌಡರ ಕುರಿತು ಮಾತನಾಡಿದರು.

ಗ್ರೇಡ್‌- ೨ ತಹಸೀಲ್ದಾರ್‌ ಸಿ.ಜಿ. ನಾಯ್ಕ, ಭೂಮಾಪನಾ ಇಲಾಖೆಯ ಸಹಾಯಕ ನಿರ್ದೇಶಕಿ ವನೀತಾ ಪಾಟೀಲ, ಸಮಾಜ ಕಲ್ಯಾಣ ಅಧಿಕಾರಿ ಜ್ಯೋತಿ ನರೋಟಿ, ಬಿಸಿಎಂ ಅಧಿಕಾರಿ ದಾಕ್ಷಾಯಣಿ ನಾಯ್ಕ ಉಪಸ್ಥಿತರಿದ್ದರು.

ಸಂಗೀತಾ ಸಂಗಡಿಗರ ಪ್ರಾರ್ಥನೆ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಸ್ವಾಗತಿಸಿದರು. ಶಿಕ್ಷಕರಾದ ಜ್ಯೋತಿ ನಾಯ್ಕ ನಿರ್ವಹಿಸಿದರು. ನಾರಾಯಣ ನಾಯಕ ವಂದಿಸಿದರು.ನಾಡಪ್ರಭು ಕೆಂಪೇಗೌಡರ ಸಾಧನೆ ಮಾದರಿ

ಅಂಕೋಲಾ: ನಾಡಪ್ರಭು ಕೆಂಪೇಗೌಡರ ಸಾಧನೆಗಳು ಇಂದಿನವರೆಗೆ ಮಾದರಿಯಾಗಿದ್ದು, ಅವರ ಧೈರ್ಯ, ಸಾಹಸದ ಜತೆಗೆ ಮಹತ್ವಾಕಾಂಕ್ಷೆಯ ಸಾಧನೀಯ ಗುಣಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಸಭಾಭವನದಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಣ ಇಲಾಖೆ ಬದ್ಧತೆಯ ಇಲಾಖೆಯಾಗಿದ್ದು, ಇಲ್ಲಿನ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಏಳಿಗೆ ಮತ್ತು ಮುಂದಿನ ಸಮಾಜದ ಬುನಾದಿಯಾಗಿರುತ್ತದೆ. ಈ ಕಾರಣಗಳಿಂದ ಇಂತಹ ಆಚರಣೆ ಮತ್ತು ಸ್ಪರ್ಧೆಗಳು ವಿದ್ಯಾರ್ಥಿಗಳ ಮಾನಸಿಕ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುವುದರ ಜತೆಗೆ ಸಾಮಾಜಿಕ ಬೆಳವಣಿಗೆಗಳಿಗೂ ಕಾರಣವಾಗುತ್ತದೆ ಎಂದರು.ಶಿಕ್ಷಣ ಸಂಯೋಜಕ ಬಿ.ಎಲ್. ನಾಯ್ಕ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಜಯಂತಿ ನಿಮಿತ್ತ ಅವರ ಸಾಧನೆ ಮತ್ತು ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಬಿತ್ತರಿಸಲು ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸೀಮಿತ ಅವಧಿಯಲ್ಲಿ ಭಾಷಣ ಸ್ಪರ್ಧೆಗೆ ಅಣಿಯಾದ ವಿದ್ಯಾರ್ಥಿಗಳ ಚೈತನ್ಯ ಪ್ರಸಂಶನೀಯ ಎಂದರು.ತಾಲೂಕಿನ ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಭಾವಿಕೇರಿಯ ಸೆಕೆಂಡರಿ ಪ್ರೌಢಶಾಲೆಯ ವಿದ್ಯಾರ್ಥಿ ನಾಗರಾಜ ಗೌಡ ಪ್ರಥಮ, ಕೇಣಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಕ್ಷರಾ ಮಹಾಲೆ ದ್ವಿತೀಯ, ಪಟ್ಟಣದ ನಿರ್ಮಲಾ ಹೃದಯ ಪ್ರೌಢಶಾಲೆಯ ಅಮನ ನಾಯ್ಕ ತೃತೀಯ ಸ್ಥಾನ ಪಡೆದುಕೊಂಡರು.

ಬಿಆರ್‌ಸಿ ಹರ್ಷಿತಾ ಗಾಂವಕರ, ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಹಮ್ಮಣ್ಣ ನಾಯಕ ವೇದಿಕೆಯಲ್ಲಿದ್ದರು. ಬೆಳಸೆ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢಶಾಲೆಯ ಶಿಕ್ಷಕಿ ಜಯಶ್ರೀ ನಾಯಕ ನೇತೃತ್ವದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಹಿರಿಯ ಉಪನ್ಯಾಸಕ ಮಂಜುನಾಥ ಇಟಗಿ, ಉಪನ್ಯಾಸಕಿ ರೇಷ್ಮಾ ನಾಯಕ, ಉಪನ್ಯಾಸಕ ಮಾರುತಿ ಹರಿಕಂತ್ರ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.