ಬೆಂಗಳೂರು ವಿಶ್ವಮಾನ್ಯತೆ ಪಡೆಯಲು ಕೆಂಪೇಗೌಡರು ಮುಖ್ಯ ಕಾರಣ: ಅಭಿಮನ್ಯು ಕುಮಾರ್

| Published : Jun 28 2024, 12:52 AM IST

ಬೆಂಗಳೂರು ವಿಶ್ವಮಾನ್ಯತೆ ಪಡೆಯಲು ಕೆಂಪೇಗೌಡರು ಮುಖ್ಯ ಕಾರಣ: ಅಭಿಮನ್ಯು ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ವಿಶ್ವ ಮಾನ್ಯತೆ ಪಡೆಯಲು ನಾಡಪ್ರಭು ಕೆಂಪೇಗೌಡರು ಮುಖ್ಯ ಕಾರಣ. ಕೆಂಪೇಗೌಡರ ಕೊಡುಗೆ ಅಪಾರವಾದುದು ಎಂದು ವಕೀಲ ಅಭಿಮನ್ಯು ಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಬೆಂಗಳೂರಿನಲ್ಲಿ ನೂರಾರು ಕೆರೆಗಳನ್ನು ಕಟ್ಟಿ, ಕೃಷಿಕರಿಗೆ ಪ್ರೋತ್ಸಾಹ ನೀಡಿದ ನಾಡಪ್ರಭು ಕೆಂಪೇಗೌಡ ಅವರು ಐದುನೂರು ವರ್ಷಗಳ ಹಿಂದೆಯೇ ಮಾದರಿಯಾಗಿದ್ದ ಮಹಾನ್‌ ಚೇತನ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ತಿಲೊತ್ತಮೆ ಬಣ್ಣಿಸಿದರು.

ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ತಾಲೂಕು ಒಕ್ಕಲಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಅಂಗವಾಗಿ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

1537ರಲ್ಲಿ ಬೆಂಗಳೂರು ನಗರವನ್ನು ಕಟ್ಟುವ ಮೂಲಕ ಇಂದು ಜಗತ್ಪ್ರಸಿದ್ದ ನಗರವಾಗಿ ಬೆಳೆಯಲು ಕಾರಣಕರ್ತರಾದವರು ಕೆಂಪೇಗೌಡರು. ಶತ್ರುಗಳಿಂದ ರಕ್ಷಣೆ ಪಡೆಯಲು ಕೋಟೆಗಳನ್ನು ನಿರ್ಮಿಸಿದರು. ವೃತ್ತಿಗನುಸಾರವಾಗಿ ಪೇಟೆಗಳನ್ನು ನಿರ್ಮಿಸಿ, ವ್ಯಾಪಾರಕ್ಕೆ ಅನುವು ಮಾಡಿಕೊಟ್ಟರು. ಎಲ್ಲ ಜಾತಿ, ಧರ್ಮ, ಪಂಗಡದವರನ್ನು ಸಮವಾಗಿ ಕಂಡು ಸಾಮಾಜಿಕ ನ್ಯಾಯ ಒದಗಿಸಿದರು ಎಂದು ಹೇಳಿದರು.

ಕಾರ್ಯಕ್ರಮದ ಮತ್ತೋರ್ವ ಅತಿಥಿ ವಕೀಲರಾದ ಅಭಿಮನ್ಯು ಕುಮಾರ್ ಮಾತನಾಡಿ, ಬೆಂಗಳೂರು ವಿಶ್ವಮಾನ್ಯತೆ ಪಡೆಯಲು ನಾಡಪ್ರಭು ಕೆಂಪೇಗೌಡರು ಮುಖ್ಯ ಕಾರಣರಾಗಿದ್ದಾರೆ. ನಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಬೆಂಗಳೂರನ್ನು ಆಶ್ರಯಿಸಿದ್ದೇವೆ. ಉನ್ನತ ಹುದ್ದೆಯನ್ನು ಬೆಂಗಳೂರಿನಲ್ಲೇ ಪಡೆದುಕೊಂಡು ನೆಮ್ಮದಿಯಾಗಿದ್ದೇವೆ. ಕೆಂಪೇಗೌಡರ ಕೊಡುಗೆ ಅಪಾರವಾದುದು ಎಂದು ಹೇಳಿದರು.

ಬೆಂಗಳೂರಿನಲ್ಲಿ ಕೆಂಪೇಗೌಡರು 376 ದೊಡ್ಡ ಕೆರೆಗಳು ಹಾಗು 1226 ಸಣ್ಣ ಕೆರೆಗಳನ್ನು ನಿರ್ಮಿಸಿದರು. ಅದರ ಉದ್ದೇಶ ಕೃಷಿ ಬೆಳೆಗಳ ಉತ್ಪಾದನೆ ಜಾಸ್ತಿಯಾಗಬೇಕು. ರೈತರು ನೆಮ್ಮದಿಯಿಂದ ಬದುಕಬೇಕು. ಹಾಗು ಅಂತರ್ಜಲ ಹೆಚ್ಚಿಸಬೇಕೆಂಬ ದೂರದೃಷ್ಟಿ ಇತ್ತು. ಆದರೆ ಪ್ರಭುಗಳ ಕಲ್ಪನೆಯನ್ನು ನಾಶಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಕೆರೆಗಳು ಮಾಯವಾಗಿವೆ. ಆದರೆ ಈಗ ಮಳೆಗಾಲದಲ್ಲಿ ಜನವಾಸಸ್ಥಳ ಕೆರೆ ಹೊಂಡಗಳಾಗುತ್ತಿವೆ. ಇದಕ್ಕೆಲ್ಲಾ ಕಾರಣ ನಮ್ಮ ವ್ಯವಸ್ಥೆ ಎಂದು ಜರಿದರು. ಕೆಂಪೇಗೌಡರು ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ಅನೇಕ ದೇವಾಲಯಗಳನ್ನು ಕಟ್ಟಿದ್ದಾರೆ. ಅನಿಷ್ಟ ಪದ್ಧತಿ ಹಾಗೂ ಮೂಡನಂಬಿಕೆಗಳನ್ನು ನೇರವಾಗಿ ವಿರೋಧಿಸಿ, ಕೆಲವನ್ನು ನಿಷೇಧ ಮಾಡಿದ್ದರು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗಬೇಕು. ಜನಪ್ರತಿನಿಧಿಗಳು, ಮುಖಂಡರು ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯ ಮಾಡಿದರು. ಕೆಂಪೇಗೌಡ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಸೀಲ್ದಾರ್ ನವೀನ್ ಕುಮಾರ್ ವಹಿಸಿದ್ದರು. ಪಟ್ಟಣ ಪಂಚಾಯ್ತಿ ಸದಸ್ಯರಾದ ಪಿ.ಕೆ.ಚಂದ್ರು, ಶೀಲಾ ಡಿಸೋಜಾ, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕೆ.ಪಿ.ವೀರಣ್ಣ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾಚಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ನಂದಕುಮಾರ್ ಇದ್ದರು.

ಈ ಸಂದರ್ಭ ನ್ಯಾನೊ ತಂತ್ರಜ್ಞಾನ ಪಿಎಚ್‍ಡಿ ಪದವಿ ಗಳಿಸಿರುವ ನಗರೂರು ಗ್ರಾಮದ ಗ್ಲೆನಿಟಾ ಡಿಸೋಜ ಅವರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. ಜಯಂತಿ ಪ್ರಯುಕ್ತ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.