ತಾಲೂಕಾಡಳಿತದಿಂದ ಕೆಂಪೇಗೌಡ ಜಯಂತಿ

| Published : Jun 28 2024, 12:53 AM IST

ಸಾರಾಂಶ

ನಾಡಪ್ರಭು ಕೆಂಪೇಗೌಡರ ಜೀವನ ಹಾಗೂ ಆದರ್ಶಗಳು ನಮಗೆ ಪ್ರೇರಣೆಯಾಗಿವೆ ಎಂದು ತಹಸೀಲ್ದಾರ್ ಎಸ್.ಎಸ್.ನಾಯಕಲ್ ಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ನಾಡಪ್ರಭು ಕೆಂಪೇಗೌಡರ ಜೀವನ ಹಾಗೂ ಆದರ್ಶಗಳು ನಮಗೆ ಪ್ರೇರಣೆಯಾಗಿವೆ ಎಂದು ತಹಸೀಲ್ದಾರ್‌ ಎಸ್.ಎಸ್.ನಾಯಕಲ್ ಮಠ ಹೇಳಿದರು.

ಇಲ್ಲಿನ ಸಮುದಾಯ ಭವನದಲ್ಲಿ ಗುರುವಾರ ಕರ್ನಾಟಕ ಸರ್ಕಾರ, ತಾಲೂಕಾಡಳಿತ ಕೊಲ್ಹಾರ ವತಿಯಿಂದ ಹಮ್ಮಿಕೊಂಡ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ವೇಳೆ ಉಪನ್ಯಾಸ ನೀಡಿದ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಾಜಶೇಖರ ಉಮರಾಣಿ, ಜಗತ್ತಿನಲ್ಲಿ ಬೆಂಗಳೂರು ವಾಣಿಜ್ಯ ನಗರಿ ಹಾಗೂ ಸಿಲಿಕಾನ್ ಸಿಟಿಯಾಗಿ ಗುರ್ತಿಸಿಕೊಳ್ಳಲು ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ನಾಡಪ್ರಭು ಕೆಂಪೇಗೌಡರು ಉತ್ತಮ ಆಡಳಿತಗಾರರಾಗಿದ್ದರು. ಬೆಂಗಳೂರಿನ ನಿರ್ಮಾತೃ ಆಗಿರುವ ಕೆಂಪೇಗೌಡರು ಹಂಪಿ ವೈಭವವನ್ನು ಕಂಡು ಬೆರಗಾಗಿದ್ದ ಇವರು ತಮ್ಮ ದೂರದೃಷ್ಟಿಯಿಂದ ಬೆಂಗಳೂರಿನಲ್ಲಿ ಕೆರೆ-ಕಟ್ಟೆಗಳನ್ನು ಕಟ್ಟಿಸಿದರು, ಗುಡಿ-ಗೋಪುರ ನಿರ್ಮಿಸಿದರು, ಗುಡಿ ಕೈಗಾರಿಕೆಗಳ ಮೂಲಕ ಉದ್ಯೋಗವಕಾಶ ಸೃಷ್ಟಿಸಿದರು. ಇದನ್ನು ಕಂಡು ಶ್ರೀ ಕೃಷ್ಣದೇವರಾಯರು ಹಂಪಿಗೆ ಕೆಂಪೇಗೌಡರನ್ನು ಆವ್ಹಾನಿಸಿ ರಾಯ ಎನ್ನುವ ಬಿರುದು ನೀಡಿದರು ಎಂದರು.

ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಪುಷ್ಪಾರ್ಚನೆ ಗೈದು ಕಾರ್ಯಕ್ರಮ ಪ್ರಾರಂಭಿಸಲಾಯಿತು. ನಂತರ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ತಾಲೂಕಿನ ಪ್ರೌಢ ಶಾಲೆಯ ಮಕ್ಕಳಿಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 20ಕ್ಕೂ ಹೆಚ್ಚು ಶಾಲೆಗಳಿಂದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ್, ಪಪಂ ಮುಖ್ಯಾಧಿಕಾರಿ ಉಮೇಶ ಚಲವಾದಿ, ಇ.ಸಿ.ಓ ಜಿ.ಎಸ್.ಗಣಿಯವರ, ಸಂಗಮೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಾಜಶೇಖರ ಉಮರಾಣಿ ಭಾಗವಹಿಸಿದ್ದರು.

ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ಸ್ವಾಗತಿಸಿದರು. ಮುಳವಾಡ ಸಿ.ಆರ್.ಪಿ ಎ.ಎಚ್.ನದಾಫ್ ವಂದಿಸಿದರು. ಕೊಲ್ಹಾರ ಸಿ.ಆರ್.ಪಿ ಜಿ.ಆಯ್.ಗೊಡ್ಯಾಳ ನಿರೂಪಿಸಿದರು. ಕೆಜಿಎಸ್ಶಾ ಲೆಯ ಮಕ್ಕಳು ಪ್ರಾರ್ಥನೆ ಹಾಗೂ ಸ್ವಾಗತ ಗೀತೆ ಹಾಡಿದರು.