ಸಾರಾಂಶ
ಕೆಂಪೇಗೌಡರ ಬದುಕು, ಆಡಳಿತ ಮತ್ತು ಜೀವನ ಸಾಧನೆ ಯುವಕರಿಗೆ, ವಿದ್ಯಾರ್ಥಿಗಳಿಗೆ ಪರಿಚಯಿಸುವ ಅಗತ್ಯವಿದೆ
ಧಾರವಾಡ: ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ವಿಶ್ವ ಪ್ರಸಿದ್ಧಿಯಾಗಿದೆ. ಅವರ ದೂರದೃಷ್ಟಿಯಿಂದ ಬೆಂಗಳೂರು ಬೆಳೆದಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಶುಕ್ರವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ನಾಡಪ್ರಭು ಕೆಂಪೇಗೌಡರ ಜಯಂತಿಯಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದ ಅವರು, ನಾಡುಪ್ರಭು ಕೆಂಪೇಗೌಡರ ಮುಂದಾಲೋಚನೆಯಿಂದ ಸಮಗ್ರ ಅಭಿವೃದ್ಧಿಯ ಬೆಂಗಳೂರು ನಿರ್ಮಾಣವಾಗಿದೆ. ಇಂದು ಬೃಹತ್ ಬೆಂಗಳೂರು ಆಗಿ ಬದಲಾಗಿದೆ. ಕೆಂಪೇಗೌಡರ ನಿಸ್ವಾರ್ಥ ಮತ್ತು ನಾಡಿನ ಕಳಕಳಿಯ ದ್ಯೋತಕವಾಗಿ ಬೆಂಗಳೂರು ಬೆಳೆದು ಬಂದಿದೆ ಎಂದರು.ಕೆಂಪೇಗೌಡರ ಬದುಕು, ಆಡಳಿತ ಮತ್ತು ಜೀವನ ಸಾಧನೆ ಯುವಕರಿಗೆ, ವಿದ್ಯಾರ್ಥಿಗಳಿಗೆ ಪರಿಚಯಿಸುವ ಅಗತ್ಯವಿದೆ. ಮಕ್ಕಳಲ್ಲಿ ನಾಡಪ್ರಭು ಕೆಂಪೇಗೌಡರ ಗುಣ ಬೆಳೆಸಬೇಕು.ಈ ನಿಟ್ಟಿನಲ್ಲಿ ಅವರ ಜೀವನಗಾಥೆ ಶಾಲಾ ಪಠ್ಯದಲ್ಲಿ ಸೇರಿಸಿ,ಪರಿಣಾಮಕಾರಿ ಬೋಧನೆ ಮಾಡಬೇಕು ಎಂದು ಸಭಾಪತಿಗಳು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಗೀತಾ.ಸಿ.ಡಿ.,ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆಳ್ವಿಕೆ ನಡೆಸಿದ್ದು, ತಮ್ಮ ಪ್ರತಿಭೆ ಮತ್ತು ಜಾಣ್ಮೆಯಿಂದ ಇತಿಹಾಸದಲ್ಲಿ ಅಮರರಾಗಿದ್ದಾರೆ ಎಂದರು.ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಬಸವರಾಜ ಅಕ್ಕಿ ಕೆಂಪೇಗೌಡರವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಡಿಡಿಪಿಐ ಎಸ್.ಎಸ್. ಕೆಳದಿಮಠ, ಎಸಿಪಿ ಪ್ರಶಾಂಶ ಸಿದ್ದನಗೌಡರ, ಸಿಪಿಐ ಶಿವಾನಂದ ಕಟಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ ಸದಲಗಿ, ಅಶೋಕ ಸಿಂದಗಿ ಇದ್ದರು.ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೆಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು.
ಕೆಂಪೇಗೌಡರ ಕುರಿತು ಹಲವು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ಹಾಗೂ ಬಹುಮಾನ ವಿತರಿಸಲಾಯಿತು.