ಕನ್ನಡಪ್ರಭ ವಾರ್ತೆ ಮಳವಳ್ಳಿ

ಬೆಂದಕಾಳೂರು ಎಂಬ ಪಟ್ಟಣಕ್ಕೆ ಅಂದು ನಾಡಪ್ರಭು ಕೆಂಪೇಗೌಡರು ಕೊಟ್ಟ ಕೊಡುಗೆಗಳಿಂದಲೇ ಇಂದು ದೇಶದಲ್ಲಿಯೇ ಅತಿ ಹೆಚ್ಚು ಆದಾಯ ತಂದು ಕೊಡುವ ಬೆಂಗಳೂರು ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕಂದಾಯ ಇಲಾಖೆಯಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದೂರದೃಷ್ಟಿಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿಖ್ಯಾತ ನಗರವಾಗಿ, ಜ್ಞಾನದ ಕೇಂದ್ರವಾಗಿ, ಐಟಿಬಿಟಿಯ ಸೆಂಟರ್‌ಆಗಿ ಪ್ರಪಂಚವನ್ನು ತನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದರು.

ಕೆಂಪೇಗೌಡರು ದೂರದೃಷ್ಟಿಯಿಂದ ಕೆರೆಗಳನ್ನು ನಿರ್ಮಿಸಿ ಕೃಷಿ ಮತ್ತು ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಿದರು. ತಮ್ಮ ಆಳ್ವಿಕೆಯಲ್ಲಿ ಸಾಮಾಜಿಕ ನ್ಯಾಯ, ಧಾರ್ಮಿಕ ಮತ್ತು ವ್ಯಾಪಾರ ವಾಣಿಜ್ಯಕ್ಕೆ ಹೆಚ್ಚಿನ ಉತ್ತೇಜನ ನೀಡಿದ್ದರು. ಇದರ ಜೊತೆಗೆ ಕೋಟೆ ನಿರ್ಮಾಣಕ್ಕಾಗಿ ತಮ್ಮ ದೇಹ ತ್ಯಾಗ ಮಾಡಿದ ಕೆಂಪೇಗೌಡರ ಕುಟುಂಬದ ಸೊಸೆಯನ್ನು ಸ್ಮರಿಸಿಕೊಳ್ಳಬೇಕಿದೆ ಎಂದರು.

ಸರ್ವ ಜನಂಗಕ್ಕೂ ವ್ಯಾಪಾರಕ್ಕೆ ಅನುಕೂಲವಾಗುವಂತೆ ಪೇಟೆಗಳನ್ನು ನಿರ್ಮಿಸಿಕೊಟ್ಟು, ಜನಸಾಮಾನ್ಯರ ಬದುಕು, ಭವಿಷ್ಯವನ್ನು ಕಟ್ಟಿಕೊಡುವುದರ ಮೂಲಕ ಬೆಂಗಳೂರು ದೇಶದ ಬೆನ್ನೆಲಬು ಎಂದಾಗಲು ಕೆಂಪೇಗೌಡರ ದೂರದೃಷ್ಟಿಯ ಸಾಧನೆಯನ್ನು ಎಷ್ಟು ಹೇಳಿದರೂ ಸಾಲಾದಾಗಿದೆ ಎಂದು ವಿವರಿಸಿದರು.

ಉಪನ್ಯಾಸಕ ಶಿವಕುಮಾರ್ ಮಾತನಾಡಿ, ಕೆಂಪೇಗೌಡರ ಕೊಡುಗೆಗಳ ಸ್ಮರಣಾರ್ಥವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಂಗಳೂರಿನ ಅಂತಾರಾಷ್ಟ್ರೀಯಯ ವಿಮಾನ ನಿಲ್ದಾಣ ಹಾಗೂ ಬಸ್ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿರುವುದು ಕೆಂಪೇಗೌಡರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.


ಇದಕ್ಕೂ ಮುನ್ನ ತಾಪಂ ಆವರಣದಿಂದ ಬೆಳ್ಳಿ ರಥದಲ್ಲಿ ಕೆಂಪೇಗೌಡರ ಭಾವಚಿತ್ರದೊಂದಿಗೆ ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಯು ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ನಡೆಯಿತು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಪ್ರತಿಭಾಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯವನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್.ವಿ.ಲೋಕೇಶ್, ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ, ಮನ್ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಪಿ.ನಾಗೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ, ತಾಲೂಕು ಅಧ್ಯಕ್ಷ ಪಿ.ಮಾದೇಶ್, ಕೆಪಿಸಿಸಿ ಸದಸ್ಯ ಸಿದ್ದೇಗೌಡ, ಪುರಸಭೆ ಮಾಜಿ ಅಧ್ಯಕ್ಷ ಎಂ.ಎಚ್.ಕೆಂಪಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಲಿಂಗರಾಜು, ನಿರ್ದೇಶಕರಾದ ಕೆ.ಜೆ.ದೇವರಾಜು, ಮನು, ದಿಲೀಪ್ ಕುಮಾರ್, ತಾಪಂ ಮಾಜಿ ಉಪಾಧ್ಯಕ್ಷ ಸಿ.ಮಾಧು, ಕೆಡಿಸಿ ಸದಸ್ಯ ಶಶಿರಾಜ್ ಪಾಲ್ಗೊಂಡಿದ್ದರು.