ವಿಜಯನಗರ ಸಾಮ್ರಾಜ್ಯದಡಿಯಲ್ಲಿ ಬೆಂಗಳೂರು ಮಹಾನಗರವನ್ನು ದೂರದೃಷ್ಟಿಯೊಂದಿಗೆ ನಿರ್ಮಿಸಿದ ಮಹಾಪುರುಷರು ನಾಡಪ್ರಭು ಕೆಂಪೇಗೌಡರು ಎಂದು ಬೆಳಗಾವಿ ಮ.ನ.ರ. ಸಂಘ ಸಂಸ್ಥೆಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ದೇಯಣ್ಣವರ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ವಿಜಯನಗರ ಸಾಮ್ರಾಜ್ಯದಡಿಯಲ್ಲಿ ಬೆಂಗಳೂರು ಮಹಾನಗರವನ್ನು ದೂರದೃಷ್ಟಿಯೊಂದಿಗೆ ನಿರ್ಮಿಸಿದ ಮಹಾಪುರುಷರು ನಾಡಪ್ರಭು ಕೆಂಪೇಗೌಡರು ಎಂದು ಬೆಳಗಾವಿ ಮ.ನ.ರ. ಸಂಘ ಸಂಸ್ಥೆಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ದೇಯಣ್ಣವರ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಬಸವರಾಜ ಕಟ್ಟೀಮನಿ ಸಭಾಭವನ (ಸಾಂಸ್ಕೃತಿಕ ಸಮುಚ್ಛಯ)ದಲ್ಲಿ ಶನಿವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತಿಹಾಸದ ಹಾದಿ ಮತ್ತು ದೂರದೃಷ್ಟಿಯ ಯೋಜನೆಗಳು ಕೆಂಪೇಗೌಡರ ಐತಿಹಾಸಿಕ ಕೊಡುಗೆಗಳನ್ನು ಸ್ಮರಿಸಿದ ಡಾ.ಗೀತಾ ದೇಯಣ್ಣವರ, ಕ್ರಿ.ಶ.1510 ರಲ್ಲಿ ಜನಿಸಿದ ಕೆಂಪೇಗೌಡರು ವಿದ್ಯಾಭ್ಯಾಸದ ಜೊತೆಗೆ ಸಮರ ಕಲೆಗಳನ್ನು ಕರಗತ ಮಾಡಿಕೊಂಡಿದ್ದರು ಎಂದು ತಿಳಿಸಿದರು.ಬ್ರಿಟಿಷರ ಆಗಮನಕ್ಕೂ ಮುನ್ನವೇ ಆಧುನಿಕ ಮಾದರಿಯಲ್ಲಿ ಬೆಂಗಳೂರನ್ನು ಕಟ್ಟಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕ್ರಿ.ಶ.1530ರ ಅವಧಿಯಲ್ಲಿ ನೂತನ ರಾಜಧಾನಿ ನಿರ್ಮಾಣಕ್ಕಾಗಿ ಕೆಂಪೇಗೌಡರಿಗೆ ವಿಜಯನಗರದ ಅರಸರು ಆರ್ಥಿಕ ಹಾಗೂ ರಾಜತಾಂತ್ರಿಕ ನೆರವು ನೀಡಿದ್ದರು. ಅಂದಿನ ಕಾಲದಲ್ಲೇ ದೂರದೃಷ್ಟಿಯಿಂದ 64 ಪೇಟೆಗಳನ್ನು ನಿರ್ಮಿಸಲಾಗಿತ್ತು. ಅಕ್ಕಿ ಮಾರುವವರಿಗಾಗಿ ಅಕ್ಕಿಪೇಟೆ ಸೇರಿದಂತೆ, ವಿವಿಧ ಕಾಯಕದ ಜನರಿಗೆ ಅನುಗುಣವಾಗಿ ಪ್ರತ್ಯೇಕ ಪೇಟೆಗಳನ್ನು ವ್ಯವಸ್ಥಿತವಾಗಿ ರಚಿಸಿದ್ದರು. ಜಲಸಂರಕ್ಷಣೆ ಮತ್ತು ಸುರಕ್ಷತೆ ಮುಂದಿನ 500 ವರ್ಷಗಳ ಕಾಲ ಜನರಿಗೆ ನೀರಿನ ಅಭಾವ ಎದುರಾಗಬಾರದು ಎಂಬ ದೃಷ್ಟಿಯಿಂದ 9 ಪ್ರಮುಖ ಕೆರೆಗಳನ್ನು ಹಾಗೂ ಸೈನಿಕರ ಮೂಲಸೌಕರ್ಯಕ್ಕಾಗಿ 7 ಕೋಟೆಗಳನ್ನು ಕೆಂಪೇಗೌಡರು ನಿರ್ಮಿಸಿದ್ದರು. ರೈತರ ವಿಶ್ರಾಂತಿಗಾಗಿ ಉದ್ಯಾನವನಗಳನ್ನು, ಸಾಂಸ್ಕೃತಿಕ ಬೆಳವಣಿಗೆಗಾಗಿ ದೇವಾಲಯಗಳನ್ನು ನಿರ್ಮಿಸಿದ್ದರಲ್ಲದೆ, ಸಮಾಜದಲ್ಲಿ ಎಲ್ಲರನ್ನೂ ಸಮಾನವಾಗಿ ಕಂಡು ಸಮಾನತೆಗೆ ಒತ್ತು ನೀಡಿದ್ದರು. ಪ್ರಸ್ತುತ ಅಂದು ನಿರ್ಮಾಣವಾಗಿದ್ದ ಕೆರೆ ಹಾಗೂ ಉದ್ಯಾನವನಗಳ ಜಾಗದಲ್ಲಿ ಇಂದು ಮೆಜೆಸ್ಟಿಕ್, ಶಾಲೆಗಳು ಹಾಗೂ ಪ್ರಮುಖ ಕಟ್ಟಡಗಳು ತಲೆಎತ್ತಿ ನಿಂತಿರುವುದು ಕಾಲದ ಬದಲಾವಣೆಯಾಗಿದೆ ಎಂದು ತಿಳಿಸಿದರು.ರಾಜ್ಯ ವಾಲ್ಮೀಕಿ ಮಹಾಸಭಾ ಉಪಾಧ್ಯಕ್ಷ ರಾಜಶೇಖರ ತಳವಾರ ಮಾತನಾಡಿ, ವಿದ್ಯಾರ್ಥಿಗಳು ದೇಶದ ಭವಿಷ್ಯವಾಗಿದ್ದು, ಜೀವನದಲ್ಲಿ ತಾಳ್ಮೆಯನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ. ನಮ್ಮ ನೆಲ, ಜಲ, ಭಾಷೆ ಹಾಗೂ ಇತಿಹಾಸ ಪುರುಷರು ಕಂಡ ಭವ್ಯ ಭಾರತದ ಕನಸುಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇಂದಿನ ಪೀಳಿಗೆಯ ಮೇಲಿದೆ ಎಂದರು.ಇದೇ ಸಂದರ್ಭದಲ್ಲಿ ಲೇಖಕ ಮೋಹನ್ ಗುಂಡ್ಲೂರು ಅವರು ನಾಡಪ್ರಭು ಕೆಂಪೇಗೌಡರ ಕುರಿತು ರಚಿಸಿದ ನೂತನ ಪುಸ್ತಕವನ್ನು ಬಿಡುಗಡೆ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡರಾದ ಬಸವರಾಜ ರೊಟ್ಟಿ, ಡಾ. ಶ್ರೀರಂಗ ಜೋಷಿ, ಅಶೋಕ ಮಳಗಲಿ, ಎಸ್. ಎ. ಭೋಜ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.