ಕೆಂಪೇಗೌಡರ ಜೀವನ ಎಲ್ಲರಿಗೂ ಆದರ್ಶ: ಮುಖ್ಯಮಂತ್ರಿ

| Published : Jun 28 2024, 12:49 AM IST

ಸಾರಾಂಶ

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಡಪ್ರಭು ಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತವಾದವರಲ್ಲ. ಅವರ ಜಾತ್ಯಾತೀತ, ಸಮಾಜಮುಖಿ ಜೀವನ, ದೂರದೃಷ್ಟಿಯುಳ್ಳ ಆಡಳಿತ ಪ್ರತಿಯೊಬ್ಬರಿಗೂ ಆದರ್ಶವಾಗಬೇಕು. ಅವರ ರೀತಿಯಲ್ಲಿ ಸಮಾಜದ ಎಲ್ಲರೂ ಬದುಕಿ ವಿಶ್ವಮಾನವರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬಿಬಿಎಂಪಿ ಸಹಯೋಗದಲ್ಲಿ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕೆಂಪೇಗೌಡರು ನಾಡಿನ ದೊರೆಯಾಗಿ ಮಾದರಿ ಆಡಳಿತವನ್ನು ನೀಡಿದ್ದರು. ಅವರ ಆಡಳಿತದ ಅವಧಿಯಲ್ಲಿ ಜಾತಿ, ಧರ್ಮ ಎಂದು ವಿಂಗಡನೆ ಮಾಡದೇ, ಎಲ್ಲ ಜನಾಂಗ, ಜಾತಿಯವರ ಅಭಿವೃದ್ಧಿಗೆ ಪ್ರಯತ್ನಿಸಿದರು ಎಂದು ತಿಳಿಸಿದರು.

ಬೆಂಗಳೂರು ಈ ಮಟ್ಟಕ್ಕೆ ಬೆಳೆಯಲು ಕೆಂಪೇಗೌಡರು ಕಾರಣ. ದೂರದೃಷ್ಟಿಯಿಂದ, ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ತುಂಬುವ ಪ್ರಯತ್ನವನ್ನು ಮಾಡಿದರು. ಬೆಂಗಳೂರಿನಲ್ಲಿ ಪ್ರಮುಖ ನದಿಗಳಿಲ್ಲವಾದರೂ ಅನೇಕ ಕೆರೆಗಳನ್ನು ನಿರ್ಮಿಸಿದರು. ಆರ್ಥಿಕವಾಗಿ ಬೆಂಗಳೂರು ಬೆಳೆಯಲು ಪೇಟೆಗಳನ್ನು ನಿರ್ಮಾಣ ಮಾಡಿದರೆಂದು ಸ್ಮರಿಸಿದರು.ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಚಂದ್ರಶೇಖರ್ ಸ್ವಾಮೀಜಿ, ಸ್ಪಠಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ, ಸಚಿವರಾದ ಕೆ.ಹೆಚ್ .ಮುನಿಯಪ್ಪ, ಕೃಷ್ಣಬೈರೇಗೌಡ, ಶಿವರಾಜ್ ತಂಗಡಗಿ, ಶಾಸಕ ರಿಜ್ವಾನ್ ಅರ್ಷದ್, ಮೇಲ್ಮನೆ ಸದಸ್ಯ ಸಲೀಂ ಅಹ್ಮದ್, ರಾಮೋಜಿ ಗೌಡ, ಪುಟ್ಟಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕ ವಿಶ್ವನಾಥ್, ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ ಮೊದಲಾದವರು ಉಪಸ್ಥಿತರಿದ್ದರು.

ಎಲ್ಲ ಸಮುದಾಯದ ಸೇರಿಸಿ ಕೆಂಪೇಗೌಡ ಜಯಂತಿ: ಡಿಕೆಶಿ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಕೆಂಪೇಗೌಡರು ಒಕ್ಕಲಿಗರಾದರೂ ಸರ್ವ ಜನಾಂಗದ ಅಭಿವೃದ್ಧಿಗೆ ಪೂರಕವಾದ ಆಡಳಿತ ನೀಡಿ ಜಾತಿ-ಧರ್ಮಗಳನ್ನು ಮೀರಿದ ನಾಯಕ. ಹಾಗಾಗಿ ಮುಂದಿನ ದಿನಗಳಲ್ಲಿ ಅವರ ಜಯಂತಿಗೆ ಎಲ್ಲ ಸಮುದಾಯಗಳ ಗುರುಗಳು, ನಾಯಕರನ್ನೂ ಆಹ್ವಾನಿಸಬೇಕು. ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಶಿಕ್ಷಣ ಇಲಾಖೆಯಿಂದ ಎಲ್ಲ ಶಾಲೆಗಳಲ್ಲಿ ಕೆಂಪೇಗೌಡರ ಬಗ್ಗೆ ಚರ್ಚಾ ಸ್ಪರ್ಧೆ ನಡೆಸಲು ಪ್ರತಿ ತಾಲೂಕಿಗೆ ಬಿಬಿಎಂಪಿಯಿಂದ ತಲಾ ₹1 ಲಕ್ಷ ಬಿಡುಗಡೆ ಮಾಡಲಾಗಿದೆ. ಕೆಂಪೇಗೌಡರ ಜಯಂತಿಗೆ ಈ ಬಾರಿ ಪ್ರತಿ ತಾಲೂಕು ಮಟ್ಟಕ್ಕೂ ಬಿಬಿಎಂಪಿಯಿಂದ ₹1 ಲಕ್ಷ ನೀಡಲಾಗುತ್ತಿದೆ ಎಂದರು.

3 ಸಂಸ್ಥೆಗಳಿಗೆ ಕೆಂಪೇಗೌಡ ಪ್ರಶಸ್ತಿ

ಕಾರ್ಯಕ್ರಮದಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ನ್ಯಾಷನಲ್ ಎಜುಕೇಷನ್ ಸೊಸೈಟಿಯ ಅಂಗ ಸಂಸ್ಥೆ ಬೆಂಗಳೂರು ಸೈನ್ಸ್‌ ಫೋರಂ, ಗಾಂಧೀ ಭವನ ಮತ್ತು ಸುಮಂಗಲಿ ಸೇವಾಶ್ರಮ ಸಂಸ್ಥೆಗಳಿಗೆ ‘ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ನ್ಯಾಷನಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತು ಕಾರ್ಯದರ್ಶಿ ವೆಂಕಟಶಿವಾರೆಡ್ಡಿ, ಗಾಂಧಿ ಭವನ ಅಧ್ಯಕ್ಷ ವೂಡೇ ಪಿ.ಕೃಷ್ಣ, ಸುಮಂಗಲಿ ಸೇವಾಶ್ರಮದ ಸುಶೀಲಮ್ಮ ಹಾಗೂ ಶಾಂತಮ್ಮ ಪ್ರಶಸ್ತಿ ಸ್ವೀಕರಿಸಿದರು. ₹5 ಲಕ್ಷ ನಗದು, ಸ್ಮರಣಿಕೆ ಒಳಗೊಂಡ ಪ್ರಶಸ್ತಿ ನೀಡಿ ಸನ್ಮಾನಿಸಿ ಮುಖ್ಯಮಂತ್ರಿಗಳು ಗೌರವಿಸಿದರು.

ಅನೇಕ ಸಂಘ ಸಂಸ್ಥೆಗಳೂ ಕೂಡ ಬೆಂಗಳೂರಿನ ಆಧಾರ ಸ್ಥಂಭಗಳಾಗಿವೆ. ಹಾಗಾಗಿ ಈ ಬಾರಿ ವ್ಯಕ್ತಿ ಬದಲು ಸಂಘ, ಸಂಸ್ಥೆಗಳಿಗೆ ಪ್ರಶಸ್ತಿ ನೀಡಲು ಬಿ.ಎಲ್‌.ಶಂಕರ್‌ ಅವರ ನೇತೃತ್ವದ ಪ್ರಶಸ್ತಿ ಆಯ್ಕೆ ಸಮಿತಿ ತೀರ್ಮಾನದಂತೆ ಮೂರು ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.