ಜನಸಾಮಾನ್ಯರ ಒಳಿತಿಗೆ ಶ್ರಮಿಸಿದ ಕೆಂಪೇಗೌಡರು: ಮೇಯರ್‌ ಮುಲ್ಲಂಗಿ ನಂದೀಶ್

| Published : Jun 28 2024, 02:18 AM IST / Updated: Jun 28 2024, 11:57 AM IST

ಜನಸಾಮಾನ್ಯರ ಒಳಿತಿಗೆ ಶ್ರಮಿಸಿದ ಕೆಂಪೇಗೌಡರು: ಮೇಯರ್‌ ಮುಲ್ಲಂಗಿ ನಂದೀಶ್
Share this Article
  • FB
  • TW
  • Linkdin
  • Email

ಸಾರಾಂಶ

ನಾಡದೊರೆ ಕೆಂಪೇಗೌಡ 52 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿ, ಜನತೆಯ ಮನೆ-ಮನಗಳಲ್ಲಿ ಅಚ್ಚಳಿಯಾಗಿ ಉಳಿದಿದ್ದಾರೆ

ಬಳ್ಳಾರಿ: ನವ ಬೆಂಗಳೂರಿನ ನಿರ್ಮಾತೃ, ಅಪ್ರತಿಮ ಆಡಳಿತಗಾರ ನಾಡಪ್ರಭು ಕೆಂಪೇಗೌಡರು ಜನ ಸಾಮಾನ್ಯರ ಒಳಿತಿಗಾಗಿ ಶ್ರಮಿಸಿದವರು ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮಹಾ ಪೌರ ಮುಲ್ಲಂಗಿ ನಂದೀಶ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಛಯ ಆವರಣದ ಹೊಂಗಿರಣ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಡದೊರೆ ಕೆಂಪೇಗೌಡ 52 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿ, ಜನತೆಯ ಮನೆ-ಮನಗಳಲ್ಲಿ ಅಚ್ಚಳಿಯಾಗಿ ಉಳಿದಿದ್ದಾರೆ ಎಂದರು.

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಮೊದಲೇ ನಾಂದಿ ಹಾಡಿದವರು ಕೆಂಪೇಗೌಡರು. ಅವರ ದೂರದೃಷ್ಟಿ ಅವಿಸ್ಮರಣೀಯವಾಗಿದೆ ಎಂದು ತಿಳಿಸಿದರು.

ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ನಾಡಪ್ರಭು ಕೆಂಪೇಗೌಡರು ಸಾವಿರಾರು ಕೆರೆಗಳ ನಿರ್ಮಾತೃ. ನವ ಬೆಂಗಳೂರಿನ ನಿರ್ಮಾಣದಲ್ಲಿ ಅವರ ಪಾತ್ರ ಬಹುಮುಖ್ಯವಾಗಿದೆ ಎಂದರು.

ವಿದ್ಯಾರ್ಥಿಗಳು ಪುಸ್ತಕದೊಡನೆ ಸ್ನೇಹ ಬೆಳಸಿಕೊಂಡು, ಮೊಬೈಲ್ ಗೀಳಿಗೆ ಒಳಗಾಗದೆ ಮಹಾನ್ ಸಾಧಕರ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಬಳ್ಳಾರಿ ತಾಲೂಕಿನ ಹೊಸ ಯರ್ರಗುಡಿಯ ಸಹ ಶಿಕ್ಷಕರಾದ ನಂದೀಶ್ ಪುಂಡಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ನಾಡದೊರೆ ಕೆಂಪೇಗೌಡರು ಆತ್ಮವಿಶ್ವಾಸದಿಂದ ನೂತನ ಬೆಂಗಳೂರು ಮಹಾನಗರ ಸೃಷ್ಟಿಮಾಡಿದವರು, ಅವರು ನಡೆದಂತಹ ದಾರಿ ಮತ್ತು ಅವರ ಆಡಳಿತ ಆಳ್ವಿಕೆಯನ್ನು ಈ ದಿನ ಸ್ಮರಿಸುವಂತದ್ದಾಗಿದೆ ಎಂದು ಹೇಳಿದರು.

ನಾಡಪ್ರಭು ಕೆಂಪೇಗೌಡರು ಐದು ಅಂಶಗಳಾದ ಕೋಟೆ, ಪೇಟೆ, ಉದ್ಯಾನವನ, ಮಾರುಕಟ್ಟೆ ಹಾಗೂ ಕೆರೆಗಳಂತಹ ಯೋಜನೆಗಳ ಅಭಿವೃದ್ದಿ ಯೋಜನೆಗಳನ್ನು ಆಗಿನ ಕಾಲದಲ್ಲಿಯೇ ರೂಪಿಸಿದ್ದು, ಅವರ ಯೋಚನೆ ಮತ್ತು ಯೋಜನೆ ದೂರದೃಷ್ಟಿಗೆ ಸಾಕ್ಷ್ಯವಾಗಿದೆ ಎಂದು ತಿಳಿಸಿದರು.

ಕೆಂಪೇಗೌಡರಿಗು ಮತ್ತು ವಿಜಯನಗರ ಸಾಮ್ರಾಜ್ಯಕ್ಕೂ ಅವಿನಾಭಾವ ಸಂಬಂಧವಿದ್ದು, ವಿಶ್ವ ವಿಖ್ಯಾತ ಹಂಪಿಯ ವಿಜಯನಗರ ಸಾಮ್ರಾಜ್ಯದ ಉಳಿವಿಗಾಗಿ ಹೋರಾಡಿದ ಮಹಾನ್ ವೀರಯೋಧ ಅವರಗಾಗಿದ್ದಾರೆ ಎಂದರು.

ಇದಕ್ಕೂ ಮುನ್ನ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಬಳ್ಳಾರಿಯ ಕವಿತಾ ಗುಂಗೂರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಉಪ ಮೇಯರ್ ಡಿ.ಸುಖುಂ, ಪಾಲಿಕೆಯ ಅಧಿಕಾರಿ ಅಬ್ದುಲ್ ರೆಹಮಾನ್, ಬಳ್ಳಾರಿ ತಾಲೂಕು ತಹಶೀಲ್ದಾರ ಗುರುರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಿಬ್ಬಂದಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.