ಕೆಂಪೇಗೌಡರ ತತ್ವಾದರ್ಶ ಯುವಕರಿಗೆ ಮಾದರಿ: ಮಮತಾ ಗಟ್ಟಿ

| Published : Jun 29 2024, 12:41 AM IST

ಕೆಂಪೇಗೌಡರ ತತ್ವಾದರ್ಶ ಯುವಕರಿಗೆ ಮಾದರಿ: ಮಮತಾ ಗಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಜೈನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭಾತ್ ಬಲ್ನಾಡ್ ಕೆಂಪೇಗೌಡರ ಬಗ್ಗೆ ಉಪನ್ಯಾಸ ನೀಡಿದರು. ಬಳಿಕ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.

ಕನ್ನಡಪ್ರಭ ವಾರ್ತೆ ಮಂಗಳೂರು

ಬೆಂಗಳೂರು ಅಭಿವೃದ್ಧಿಯ ರೂವಾರಿ ಕೆಂಪೇಗೌಡರ ವ್ಯಕ್ತಿತ್ವ, ಆದರ್ಶ, ಜಾತ್ಯತೀತ ಮನೋಭಾವ ಇಂದಿನ ಸಮಾಜದಲ್ಲಿ ಯುವ ಸಮುದಾಯಕ್ಕೆ ಮಾದರಿ ಎಂದು ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದ್ದಾರೆ.

ನಗರದ ಉರ್ವಸ್ಟೋರ್‌ನಲ್ಲಿರುವ ತುಳುಭವನದಲ್ಲಿ ಗುರುವಾರ ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೆಂಪೇಗೌಡ ಹಾಗೂ ಇನ್ನಿತರ ಮಹಾನ್ ವ್ಯಕ್ತಿಗಳ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿದರೆ ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು. ಅವರು ಮಾಡಿರುವಂತಹ ಕೆಲಸ ಕಾರ್ಯಗಳು ನಮಗೆ ಸ್ಫೂರ್ತಿಯಾಗಬೇಕು. ನಾವು ಕೂಡ ಮುಂದಿನ ದಿನಗಳಲ್ಲಿ ಇಂತಹ ಉತ್ತಮ ಕೆಲಸ ಕಾರ್ಯಗಳನ್ನು ಮಾಡಬೇಕು ಎನ್ನುವ ಆಲೋಚನೆ ಮೂಡಬೇಕು. ಈ ಉದ್ದೇಶದಿಂದಲೇ ಇಂತಹ ಮಹಾತ್ಮರ ಜಯಂತಿ ಆಚರಿಸಲಾಗುತ್ತಿದೆ ಎಂದರು.

ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಮಾತನಾಡಿ, ಕೆಂಪೇಗೌಡ ಅವರು ಅಂದಿನ ಕಾಲದಲ್ಲಿಯೇ ಯಾವುದೇ ರೀತಿಯ ವೈಜ್ಞಾನಿಕ ತಂತ್ರಜ್ಞಾನಗಳು ಇಲ್ಲದ ಸಂದರ್ಭದಲ್ಲಿ ಬೆಂಗಳೂರನ್ನು ಎಲ್ಲ ರೀತಿಯಲ್ಲೂ ಮಹತ್ತರವಾಗಿ ಅಭಿವೃದ್ಧಿಪಡಿಸಿದವರು. ಇಂದು ನಮ್ಮಲ್ಲಿ ಅನೇಕ ತಂತ್ರಜ್ಞಾನಗಳಿವೆ, ಆದರೆ ಕೆಂಪೇಗೌಡರು ಕೈಗೊಂಡ ಅಭಿವೃದ್ಧಿ ಕಾರ್ಯವೈಖರಿಗಳು ಇಂದಿನ ಯುವ ಸಮುದಾಯಕ್ಕೆ ಪ್ರೇರಣೆಯಾಗಬೇಕು ಎಂದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಉತ್ತಮ ಅಂಕ ಗಳಿಸಿದ ಒಕ್ಕಲಿಗ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕೆಂಪೇಗೌಡ ಅವರ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.

ಜೈನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭಾತ್ ಬಲ್ನಾಡ್ ಕೆಂಪೇಗೌಡರ ಬಗ್ಗೆ ಉಪನ್ಯಾಸ ನೀಡಿದರು. ಬಳಿಕ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.

ಮಂಗಳೂರು ತಹಸೀಲ್ದಾರ್ ಪ್ರಶಾಂತ್ ಪಾಟೀಲ್, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್‌ ಆಯುಕ್ತ ದಿನೇಶ್ ಕುಮಾರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಇದ್ದರು.