ತುಳುಕೂಟ ಒಡಿಪು ಇದರ 24ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸಂಸ್ಮರಣಾ ತುಳುನಾಟಕ ಪರ್ಬ ಜ. 5ರಿಂದ 11ರತನಕ ನಗರದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ
ಉಡುಪಿ: ತುಳುಕೂಟ ಒಡಿಪು ಇದರ 24ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸಂಸ್ಮರಣಾ ತುಳುನಾಟಕ ಪರ್ಬ ಜ. 5ರಿಂದ 11ರತನಕ ನಗರದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ ಎಂದು ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು. ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಸ್ಪರ್ಧೆ ಬಗ್ಗೆ ವಿವರ ನೀಡಿದರು. ಈ ಬಾರಿ ನಾಡಿನಾದ್ಯಂತದ 7 ಪ್ರಸಿದ್ದ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಜ. 5ರಂದು ಸಂಜೆ 5 ಗಂಟೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆಯಲ್ಲಿ, ವಿ.ಕೆ. ಗ್ರೂಪ್ ಆಫ್ ಕಂಪನೀಸ್ ಮುಖ್ಯಸ್ಥ ಕೆ.ಎಂ. ಶೆಟ್ಟಿ ಅವರು ಸ್ಪರ್ಧೆಯನ್ನು ಉದ್ಘಾಟಿಸುವರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮಯ್ಯ ಅತಿಥಿಗಳಾಗಿ ಭಾಗವಹಿಸುವರು.ಮೊದಲು 3 ಬಹುಮಾನ ವಿಜೇತ ತಂಡಗಳಿಗೆ ಕ್ರಮವಾಗಿ 20, 15 ಮತ್ತು 10 ಸಾವಿರ ರು. ನಗದು ಮತ್ತು ವಿವಿಧ ವಿಭಾಗಗಳಲ್ಲಿ ವೈಯುಕ್ತಿಕ ಬಹುಮಾನ ವಿಜೇತರಿಗೆ ಬಹುಮಾನಗಳನ್ನು ನೀಡಲಾಗುತ್ತದೆ. ಸ್ಥಳೀಯ ತಂಡಗಳಿಗೆ 5 ಸಾವಿರ ಮತ್ತು ಹೊರ ರಾಜ್ಯದ ತಂಡಗಳಿಗೆ 10 ರು. ಭತ್ಯೆ, ಊಟೋಪಚಾರ ಮತ್ತು ಉತ್ತಮ ಸೌಕರ್ಯ ನೀಡಲಾಗುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತುಳುಕೂಟದ ಉಪಾಧ್ಯಕ್ಷರಾದ ಭುವನ ಪ್ರಸಾದ್ ಹೆಗ್ಡೆ, ವಿ.ಕೆ. ಯಾದವ್, ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ನಾಟಕ ಪರ್ಬದ ಸಂಚಾಲಕ ಪ್ರಭಾಕರ ಭಂಡಾರಿ ಉಪಸ್ಥಿತರಿದ್ದರು.ಯಾವೆಲ್ಲಾ ನಾಟಕಗಳು?: ಜ. 5ರಂದು ಉಡುಪಿ ಕಲಾ ಮಂದಿರ ತಂಡದಿಂದ ‘ಪಿಲಿ’, ಜ. 6ರಂದು ಮುಂಬೈ ರಂಗಮಿಲನ ಕಲಾವಿದರಿಂದ ‘ನಾಗಸಂಪಿಗೆ’, ಜ.7 ರಂದು ಮದ್ದಡ್ಕದ ಶ್ರೀ ವಿಷ್ಣು ಕಲಾವಿದೆರ್ ಅವರಿಂದ ‘ಕಾಶಿತೀರ್ಥ’, ಜ. 8ರಂದು ಮಲ್ಪೆ ಕರಾವಳಿ ಕಲಾವಿದರಿಂದ ‘ಮುಗಿಯಂದಿ ಕಥೆ’, ಜ. 9ರಂದು ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆಯಿಂದ ‘ನೆಲ ನೀರ್ದ ದುನಿಪು’, ಜ. 10ರಂದು ಕೊಡವೂರು ಸುಮನಸಾ ತಂಡದಿಂದ ‘ಯೇಸ’, ಜ. 11ರಂದು ಮಣಿಪಾಲ ಸಂಗಮ ಕಲಾವಿದೆರ್‌ರಿಂದ ‘ಮಾಯೊಕದ ಮಣ್ಣಕರ’ ನಾಟಕಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ.