ಕೆಂಚಗಾರ ದೌರ್ಜನ್ಯ ಪ್ರಕರಣ: ಕಾನೂನು ಕ್ರಮಕ್ಕೆ ರವೀಂದ್ರ ನಾಯ್ಕ ಆಗ್ರಹ

| Published : Dec 10 2024, 12:31 AM IST

ಕೆಂಚಗಾರ ದೌರ್ಜನ್ಯ ಪ್ರಕರಣ: ಕಾನೂನು ಕ್ರಮಕ್ಕೆ ರವೀಂದ್ರ ನಾಯ್ಕ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಹಕ್ಕು ಕಾಯಿದೆ ಅರ್ಜಿ ಸಲ್ಲಿಸಿ ಅರ್ಜಿ ವಿಚಾರಣೆ ಇರುವಂತಹ ಸಂದರ್ಭದಲ್ಲಿ ಅರಣ್ಯವಾಸಿಗೆ ಕಾನೂನಿನಲ್ಲಿ ಅವಕಾಶ ನೀಡದೆ ದೈಹಿಕ, ಮಾನಸಿಕ, ನಷ್ಟ ಮಾಡಿ ಕಾನೂನಿಗೆ ಚ್ಯುತಿ ತಂದಿರುವ ಅರಣ್ಯ ಸಿಬ್ಬಂದಿ ಮೇಲೆ ಶೀಘ್ರ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಶಿರಸಿ: ಅರಣ್ಯವಾಸಿಗಳ ಕಾನೂನಾತ್ಮಕ ಮೂಲಭೂತ ಹಕ್ಕಿಗೆ ಚ್ಯುತಿ ತರುವ ದೃಷ್ಟಿಯಲ್ಲಿ ಕಾರ್ಯನಿರ್ವಹಿಸಿದ ಅರಣ್ಯ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅರಣ್ಯವಾಸಿಗಳ ವಿರುದ್ಧ ಮನಬಂದಂತೆ ವರ್ತಿಸಲು ಅರಣ್ಯವಾಸಿಗಳು ಎರಡನೇ ದರ್ಜೆ ನಾಗರಿಕರಲ್ಲ ಎಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

ಹೊನ್ನಾವರ ತಾಲೂಕಿನ ಚಿಕ್ಕನಗೋಡ ಗ್ರಾಪಂ ವ್ಯಾಪ್ತಿಯ ಕೆಂಚಗಾರ ಗ್ರಾಮದ ಅರಣ್ಯವಾಸಿ ರಾಜು ತಿಪ್ಪಯ್ಯ ನಾಯ್ಕ ಅವರ ಸಾಗುವಳಿ ಕ್ಷೇತ್ರದಲ್ಲಿ ದೌರ್ಜನ್ಯವೆಸಗಿದ ಅರಣ್ಯ ಸಿಬ್ಬಂದಿ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ದೂರು ನೀಡಿ, ಬಳಿಕ ಮಾತನಾಡಿದರು.

ಅರಣ್ಯ ಹಕ್ಕು ಕಾಯಿದೆ ಅರ್ಜಿ ಸಲ್ಲಿಸಿ ಅರ್ಜಿ ವಿಚಾರಣೆ ಇರುವಂತಹ ಸಂದರ್ಭದಲ್ಲಿ ಅರಣ್ಯವಾಸಿಗೆ ಕಾನೂನಿನಲ್ಲಿ ಅವಕಾಶ ನೀಡದೆ ದೈಹಿಕ, ಮಾನಸಿಕ, ನಷ್ಟ ಮಾಡಿ ಕಾನೂನಿಗೆ ಚ್ಯುತಿ ತಂದಿರುವ ಅರಣ್ಯ ಸಿಬ್ಬಂದಿ ಮೇಲೆ ಶೀಘ್ರ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ಗಣೇಶ ನಾಯ್ಕ, ಶ್ರೀಕಾಂತ ದೇಶಭಂಡಾರಿ ಹೊನ್ನಾವರ, ಭಾಸ್ಕರ ದೇಶಭಂಡಾರಿ ಹೊದ್ಕೆ, ವಾಸುದೇವ ದೇಶಭಂಡಾರಿ, ರಿತೇಶ ನಾಯ್ಕ, ಸುಧಾಕರ ದೇಶಭಂಡಾರಿ, ಗಣಪತಿ ನಾಯ್ಕ, ನಾರಾಯಣ ನಾಯ್ಕ, ಪರಶುರಾಮ ನಾಯ್ಕ ಉಪಸ್ಥಿತರಿದ್ದರು.

ವರ್ತನೆ ಸಮಂಜಸವಲ್ಲ

ಏಕಾಏಕಿಯಾಗಿ ಸಾಗುವಳಿ ಕ್ಷೇತ್ರಕ್ಕೆ ೩೦ಕ್ಕಿಂತ ಹೆಚ್ಚು ಅರಣ್ಯ ಸಿಬ್ಬಂದಿ ಪೊಲೀಸ್ ರಕ್ಷಣೆಯೊಂದಿಗೆ ಪ್ರವೇಶಿಸಿದ್ದಾರೆ. ಮಹಿಳಾ ಅಧಿಕಾರಿ ದರ್ಪದಿಂದ ವರ್ತಿಸಿದ್ದಾರೆ ಎಂದು ರವೀಂದ್ರ ನಾಯ್ಕ ಆರೋಪಿಸಿದರು. ಚಿತ್ರೀಕರಿಸುತ್ತಿರುವ ಮೊಬೈಲ್‌ ಕೂಡ ಕಸಿದುಕೊಂಡಿದ್ದಾರೆ. ಗೇರುಮರವನ್ನು ಬುಡಸಹಿತ ಕಿತ್ತು ನಾಶ ಮಾಡಿದ್ದಾರೆ. ಮಾಲೀಕರಿಗೆ ಸುಮಾರು ₹೫೦,೦೦೦ ನಷ್ಟವಾಗಿದೆ. ಅಲ್ಲದೆ ಅರಣ್ಯವಾಸಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಉದ್ದೇಶಪೂರ್ವಕವಾಗಿ ನ್ಯಾಯಾಧೀಶರ ಮನೆಗೆ ರಾತ್ರಿ ಹಾಜರುಪಡಿಸಿದ್ದಾರೆ ಮತ್ತು ಅರಣ್ಯ ಕಚೇರಿಯಲ್ಲಿ ಅನಾಗರಿಕವಾಗಿ ವರ್ತಿಸಿದ್ದಾರೆ. ಅದನ್ನು ಖಂಡಿಸುವುದಾಗಿ ತಿಳಿಸಿದರು.

ಕಾನೂನು ಪ್ರಕಾರ ಅತಿಕ್ರಮಣ ತೆರವು: ಆರ್‌ಎಫ್‌ಒ ಸವಿತಾ

ಹೊನ್ನಾವರ: ತಾಲೂಕಿ‌ನ ಚಿಕ್ಕನಕೋಡ ಗ್ರಾಮದ ಕೆಂಚಗಾರದಲ್ಲಿ ಅತಿಕ್ರಮಣ ತೆರವು ವಿಚಾರ ಅರಣ್ಯವಾಸಿಗಳಲ್ಲಿ ಆತಂಕ ಸೃಷ್ಟಿಸಿದ್ದು ಒಂದೆಡೆಯಾದರೆ, ಅರಣ್ಯ ಅಧಿಕಾರಿಗಳು ಕಾನೂನು ಪ್ರಕಾರ ಕರ್ತವ್ಯ ನಿಭಾಯಿಸಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.ಇತ್ತೀಚೆಗೆ ಅರಣ್ಯಾಧಿಕಾರಿಗಳು ಕೆಂಚಗಾರದ ರಾಜು ತಿಪ್ಪಯ್ಯ ನಾಯ್ಕ ಎಂಬ ಅತಿಕ್ರಮಣದಾರನ ೫ ಎಕರೆ ಭೂಮಿಗೆ ಹಾಕಿದ ಐಬೆಕ್ಸ್ ಬೇಲಿಯನ್ನು ಕಿತ್ತು ಒಳಗೆ ಪ್ರವೇಶಿಸಿ ಫಲ ಬಿಡಲಿದ್ದ ದೊಡ್ಡ ೪೦ ತೆಂಗಿನಮರಗಳನ್ನು ಕಿತ್ತು ಗೂಡ್ಸ್‌ ಟೆಂಪೊಕ್ಕೆ ತುಂಬಿಕೊಂಡು ಹೋಗಿದ್ದರು. ೫ ಎಕರೆ ಭೂಮಿಯನ್ನು ಅತಿಕ್ರಮಣ ಸಾಗುವಳಿ ಮಾಡಿ ೪೦ ವರ್ಷಗಳಾದವು. ಮನೆ ತೆರಿಗೆ, ವಿದ್ಯುತ್ ತೆರಿಗೆ ಕಟ್ಟಿದ ರಶೀದಿ ಇದೆ. ಈ ಹಿಂದೆಯೇ ಜಾಗದ ಜಿಪಿಎಸ್ ಆಗಿದೆ ಎಂದು ಅರಣ್ಯವಾಸಿ ರಾಜು ನಾಯ್ಕ ಹೇಳಿಕೊಂಡಿದ್ದರು. ದುರುದ್ದೇಶದಿಂದ ಆಗಮಿಸಿ ಅಧಿಕಾರಿಗಳು ಗಿಡಗಳನ್ನು ಕಿತ್ತು ವಾಹನದಲ್ಲಿ ತುಂಬಿಕೊಂಡು ಹೋಗಿದ್ದಾರೆ. ಈ ಕುರಿತ ಕೆಲ ವಿಡಿಯೋ ದೃಶ್ಯವನ್ನು ಇಟ್ಟುಕೊಂಡಿರುವುದಾಗಿ ತಿಳಿಸಿದ್ದರು.ಈ ಬಗ್ಗೆ ಅರಣ್ಯ ಇಲಾಖೆಯ ಆರ್‌ಎಫ್‌ಒ ಸವಿತಾ ದೇವಾಡಿಗ ಮಾತನಾಡಿ, ಕೆಂಚಗಾರದಲ್ಲಿ ಅತಿಕ್ರಮಣ ಪ್ರಕರಣ ಜಿಪಿಎಸ್ ಆದ ಸ್ಥಳವೇ ಬೇರೆ. ಈಗ ಅತಿಕ್ರಮಣ ಮಾಡಿರುವ ಸ್ಥಳ ಬೇರೆಯದ್ದಾಗಿದೆ. ಈ ಹಿಂದೆಯೇ ತೆರವಿಗೆ ಹೋದಾಗ ಅಧಿಕಾರಿಗಳಿಗೆ ತಡೆ ನೀಡುತ್ತಿದ್ದರು. ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಮೂಲಕ ಹೋಗಿ ನೋಡಿದಾಗ ದಾಖಲೆ ಸಮರ್ಪಕವಾಗಿಲ್ಲ. ಕಾಡಿಗೆ ಬೇಲಿ ಹಾಕಿ ಕಾಂಪೌಂಡ್ ಮಾಡಿದ್ದಾರೆ. ಇದರಿಂದ ಸರ್ಕಾರದ ಆದೇಶದಂತೆ ತೆರವು ಕಾರ್ಯ ಮಾಡಲಾಗಿದೆ ಎಂದಿದ್ದಾರೆ.