ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕೇಂದ್ರ ಸಾಹಿತ್ಯ ಅಕಾಡಮಿಯಲ್ಲಿ ಚರ್ಚಿಸಿ ತೀರ್ಮಾನಿಸುವ ವಿಚಾರಗಳು ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತವೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಡೋಜ ಡಾ.ಚಂದ್ರಶೇಖರ ಕಂಬಾರ ಹೇಳಿದರು.ಪಟ್ಟಣದ ಕಸಾಪ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಕುಮಾರ್ ಹಳೇಬೀಡು ಅವರ ‘ಬಾ ಮರಳಿ’ ಕೃತಿ ಲೋಕಾರ್ಪಣೆ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯ ಹೊ.ನ.ನೀಲಕಂಠೇಗೌಡರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯನಾಗಿ 20 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಹೊ.ನ.ನೀಲಕಂಠೇಗೌಡರು ಈಗ ಅಕಾಡೆಮಿ ಸದಸ್ಯನಾಗಿ ನೇಮಕಗೊಂಡಿರುವುದು ಬಹಳ ಸಂತೋಷ. ಈ ಹುದ್ದೆಯಿಂದ ನಿಮಗೆ ದೊಡ್ಡ ಜವಾಬ್ದಾರಿ ಬಂದಿದ್ದು ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದರು.ಕೇಂದ್ರ ಸಾಹಿತ್ಯ ಅಕಾಡಮಿಯಲ್ಲಿ ಚರ್ಚೆಯಾಗಿ ತೀರ್ಮಾನಗೊಳ್ಳುವಂತಹ ವಿಷಯ, ವಿಚಾರಗಳನ್ನು ಪ್ರಪಂಚದ ಎಲ್ಲಾ ಅಕಾಡಮಿಗಳು ಗಮನಿಸುತ್ತವೆ. ಜತೆಗೆ ಚರ್ಚಿಸುತ್ತವೆ. ಹಾಗಾಗಿ ಇಲ್ಲಿ ಸದಸ್ಯರಾದವರಿಗೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಜತೆಗೆ ತಾವು ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಬೇಕಾಗಿರುತ್ತೆ ಎಂದು ಎಚ್ಚರಿಸಿದರು.
ಅಭಿನಂದನೆ ಸ್ವೀಕರಿಸಿದ ಹೊ.ನ.ನೀಲಕಂಠೇಗೌಡ ಮಾತನಾಡಿ, ನಾನು ಕನ್ನಡದ ಕೆಲಸ ಮಾಡಲು ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಅವರು ನನಗೆ ಶಕ್ತಿಯಾಗಿ ನಿಂತಿದ್ದಾರೆ. ಕಂಬಾರರು ನಮ್ಮೆಲ್ಲರ ಹೆಮ್ಮೆಯ ಕವಿಯಾಗಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಲ್ಲಿ ಕುವೆಂಪು ಅವರನ್ನು ಹೊರತು ಪಡಿಸಿದರೆ ಚಂದ್ರಶೇಖರ ಕಂಬಾರ ಅವರಿಗೆ ಹೆಚ್ಚಾಗಿ ಪುರಸ್ಕಾರ ಲಭಿಸಿವೆ. ಪ್ರಪಂಚದ ನಾನಾ ಭಾಗದಲ್ಲಿ ಭಾರತದ ಎಲ್ಲಾ ರಾಜ್ಯಗಳಿಂದಲೂ ಪುರಸ್ಕಾರ ಸ್ವೀಕರಿಸಿದ್ದಾರೆ ಎಂದು ಬಣ್ಣಿಸಿದರು.ಕನ್ನಡದ ವಿಚಾರ ಬಂದಾಗ ನಾನು ಯಾವುದೇ ಹೋರಾಟಕ್ಕೂ ಸಿದ್ಧನಾಗಿದ್ದೇನೆ. ಪರೀಕ್ಷೆಯಲ್ಲಿ ಕನ್ನಡ ವಿಷಯವನ್ನು ಕೊನೆಯಲ್ಲಿ ನೀಡುತ್ತಿದ್ದರು. ಆ ವಿಚಾರವಾಗಿ ಮೂರು ವರ್ಷಗಳ ಕಾಲ ಹೋರಾಟ ಮಾಡಿದ ಫಲವಾಗಿ ಇಂದು ಕನ್ನಡ ಮೊದಲ ವಿಷಯವಾಗಿದೆ. ಕನ್ನಡ ವಿಷಯದಲ್ಲಿ ಕಡಿಮೆ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳಿಸುತ್ತಿದ್ದರು. ಇದೀಗ ದ್ವಿತೀಯ ಪಿಯುಸಿಯಲ್ಲಿ ರಾಜ್ಯದಲ್ಲಿ 5350 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳಿಸಿದ್ದಾರೆ ಎಂದರು.
ಬಡತನದಲ್ಲಿ ಬೆಳೆದು ಹಸಿವು, ಅವಮಾನವನ್ನು ಅನುಭವಿಸಿದ ವ್ಯಕ್ತಿಗಳು ಮಾತ್ರ ಜೀವನದಲ್ಲಿ ದೊಡ್ಡಮಟ್ಟದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಾನು ಸಹ ಇವುಗಳನ್ನು ಅನುಭವಿಸಿ ಬೆಳೆದಿದ್ದೇನೆ. ಹಸಿವು-ಅವಮಾನವನ್ನು ಹೋಗಲಾಡಿಸಲು ವಿದ್ಯೆಯಿಂದ ಮಾತ್ರ ಸಾಧ್ಯ. ಆದರೆ, ವಿದ್ಯೆಯನ್ನು ಬಿಟ್ಟು ಹಣದ ಹಿಂದೆ ಓಡುತ್ತಿದ್ದೇವೆ ಎಂದು ವಿಷಾದಿಸಿದರು.ಪ್ರೊ.ಎಚ್.ಆರ್.ತಿಮ್ಮೇಗೌಡ ಮಾತನಾಡಿ, ಸಾಹಿತಿ ಕುಮಾರ್ ತಮ್ಮ ಕವನಗಳ ಮೂಲಕ ಹೆಣ್ಣುಮಕ್ಕಳನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಪ್ರಾಮಾಣಿಕತೆ, ವಿಶಿಷ್ಟತೆ, ಕೌಟುಂಬಿಕ ವಿಚಾರವಾಗಿ ಪರಸ್ಪರ ಪ್ರೀತಿ ಬೆಳೆಯುವ ವಿಚಾರಗಳನ್ನು ತಿಳಿಸಿಕೊಡುವ ಕೆಲಸ ಮಾಡಿದ್ದಾರೆ ಎಂದು ಬಣ್ಣಿಸಿದರು.
ಇದೇ ವೇಳೆ ಕುಮಾರ್ ಹಳೇಬೀಡು ಅವರ ‘ಬಾ ಮರಳಿ’ ಕೃತಿ ಲೋಕಾರ್ಪಣೆ ಮಾಡಲಾಯಿತು. ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯ ಹೊ.ನ.ನೀಲಕಂಠೇಗೌಡರನ್ನು ಅಭಿನಂದಿಸಲಾಯಿತು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನ್ಯಾಸಕ ಎಚ್.ಕೆ.ರಾಮೇಗೌಡ ಅಭಿನಂದಿತರನ್ನು ಕುರಿತು ಮಾತನಾಡಿದರು.ಸಮಾರಂಭದಲ್ಲಿ ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, 9ನೇ ಸಾಹಿತ್ಯ ಸಮ್ಮೇಳನದ ಸಾರ್ವಾಧ್ಯಕ್ಷ ಚಂದ್ರಶೇಖರಯ್ಯ, ಕವಿಯತ್ರಿ ನಾಗುಕುಮಾರ್, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಎಚ್.ಆರ್.ಮೋಹನ್‌ಕುಮಾರ್, ಸ.ನೌ.ಸ.ಅಧ್ಯಕ್ಷ ಕೆಂಪೇಗೌಡ, ಹಳೇಬೀಡು ತಿಮ್ಮೇಗೌಡ, ಕುಮಾರ್, ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ವೆಂಕಟೇಶ್, ಶ್ರೀನಿವಾಸ್, ಹೊಸಕೋಟೆ ಸುರೇಶ್ ಸೇರಿದಂತೆ ಹಲವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))