ಅನಿಶ್ಚಿತತೆಯಲ್ಲಿ ಕೇಣಿ ಬಂದರು ಯೋಜನೆ

| Published : Aug 20 2025, 02:00 AM IST

ಸಾರಾಂಶ

ಅಂಕೋಲಾ ತಾಲೂಕಿನ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿದ ಗ್ರೀನ್‌ ಫೀಲ್ಡ್ ಬಂದರು ಯೋಜನೆ ಪರ-ವಿರೋಧದ ವಿದ್ಯಮಾನಗಳ ನಡುವೆ ಸಾಗುತ್ತಿದೆ. ಇದೇ ಆ. 22ರಂದು ಸಾರ್ವಜನಿಕ ಅಹವಾಲು ಸಭೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಅಂಕೋಲಾ: ತಾಲೂಕಿನ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿದ ಗ್ರೀನ್‌ ಫೀಲ್ಡ್ ಬಂದರು ಯೋಜನೆ ಪರ-ವಿರೋಧದ ವಿದ್ಯಮಾನಗಳ ನಡುವೆ ಸಾಗುತ್ತಿದೆ. ಇದೇ ಆ. 22ರಂದು ಸಾರ್ವಜನಿಕ ಅಹವಾಲು ಸಭೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ರಾಜ್ಯ ಸರ್ಕಾರವು 2022-23ನೇ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಜಲ ಸಾರಿಗೆ ಮಂಡಳಿ ಮೂಲಕ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಅಂದಾಜು ₹4118 ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಆದರೆ ಕಳೆದ 4-5 ತಿಂಗಳಿಂದ ಬಂದರು ಕಾಮಗಾರಿಯ ಸಮುದ್ರ ಪ್ರದೇಶದಲ್ಲಿ ಸಮೀಕ್ಷೆ ನಡೆಸಲು ಮುಂದಾಗುತ್ತಿದ್ದಂತೆ ಸುತ್ತಮುತ್ತಲಿನ ನಾಗರಿಕರು ಹಾಗೂ ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾಯಿತು.

ಬಂದರು ಬೇಡ ಎನ್ನುವ ಸಂತ್ರಸ್ತರು: ಉದ್ದೇಶಿತ ಬಂದರು ಯೋಜನೆ ಈ ಪ್ರದೇಶದಲ್ಲಿ ಸ್ಥಾಪಿತವಾದರೆ ನಮ್ಮ ಮೀನುಗಾರಿಕೆ ವೃತ್ತಿ ಮೇಲೆ ತೀವ್ರ ಪರಿಣಾಮ ಬೀರಲಿದೆ. ಜತೆಗೆ ಮನೆ ಕಳೆದುಕೊಂಡು ನಿರ್ಗತಿಕರಾಗುತ್ತೇವೆ ಎಂಬ ಆತಂಕ ಇಲ್ಲಿನ ಸ್ಥಳೀಯರದ್ದು.

ಮೀನುಗಾರರಿಗೆ ಮೀನು ಹಿಡಿಯುವುದೇ ಪ್ರಧಾನ ಉದ್ಯೋಗ. ಯೋಜನೆ ಸ್ಥಾಪಿತವಾದರೆ ತಮ್ಮ ಹೊಟ್ಟೆಗೆ ಎಲ್ಲಿ ಕಲ್ಲು ಬೀಳುತ್ತದೆಯೋ ಎಂಬ ದುಗುಡ ಮೀನುಗಾರರದ್ದು. ಆದರೆ ಗುತ್ತಿಗೆ ಪಡೆದ ಜೆಎಸ್‌ಡಬ್ಲ್ಯೂ ಕಂಪನಿ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಮ್ಮ ಜತೆ ಸದಾ ಇರುತ್ತೇವೆ. ಯಾವುದೇ ಆತಂಕ ಬೇಡ ಎಂದು ಸಮಜಾಯಿಷಿ ನೀಡುತ್ತಲೇ ಬರುತ್ತಿದೆ.

ಜನಪ್ರತಿನಿಧಿಗಳು ಹೇಳೋದೇನು?: ಇನ್ನು ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ಕಾರವಾರಕ್ಕೆ ಆಗಮಿಸಿದ್ದ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಈ ಯೋಜನೆಯಿಂದ ಮೀನುಗಾರರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ಯೋಜನೆ ಸಮುದ್ರದಲ್ಲಿ ಅನುಷ್ಠಾನಗೊಳ್ಳಲಿದೆ. ಇನ್ನು ಕೇವಲ ರಸ್ತೆಗಾಗಿ 16 ಮನೆಗಳಷ್ಟೇ ಯೋಜನೆಗೆ ಸ್ವಾಧೀನಗೊಳ್ಳಲಿದೆ. ಮೀನುಗಾರಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ಹೇಳಿದ್ದರು.

ಹಾಗೆ ಸ್ವಾತಂತ್ರ್ಯೋತ್ಸವದಂದೇ ಕೇಣಿಯ ಬಂದರು ಪ್ರದೇಶಕ್ಕೆ ಆಗಮಿಸಿದ ಶಾಸಕ ಆರ್.ವಿ. ದೇಶಪಾಂಡೆ, ಮೀನುಗಾರರರಿಗೆ ಈ ಯೋಜನೆಯಿಂದ ತೊಂದರೆಯಾದಲ್ಲಿ ನಾನು ಕೂಡ ವಿರೋಧಿಸುತ್ತೇನೆ ಎಂದರು.

ತರಾತುರಿಯಲ್ಲಿ ಈ ಅಹವಾಲು ಸಭೆ ಏಕೆ ಎಂದು ಜಿಲ್ಲಾಧಿಕಾರಿಗೆ ಫೋನ್ ಮಾಡಿ ವಿವರಣೆ ಕೇಳಿದ್ದರು. ಸಾಧ್ಯವಾದಷ್ಟು ಈ ಸಭೆ ಮುಂದೂಡಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ್ದರು.

ಹಾಗೆ ಶಾಸಕ ಸತೀಶ ಸೈಲ್‌ ಕೂಡ ಯೋಜನೆ ನಿಲ್ಲುವ ಯಾವುದೇ ಲಕ್ಷಣಗಳಿಲ್ಲ. ನಿಮ್ಮ ಯಾವುದೇ ಅಹವಾಲು ಇದ್ದರೆ ಹೇಳಿ ನಾನು ನಿಮಗೆ ಪರಿಹಾರ ಮಾಡಿಕೊಡುತ್ತೇನೆ ಎಂದು ಹೇಳುತ್ತಲೇ ಬಂದಿದ್ದರು.

ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ:

ಸಾರ್ವಜನಿಕರು, ಮೀನುಗಾರ ಬದುಕು ಹಾಗೂ ವಾಸಿಸಲು ಸಮಸ್ಯೆಯಾಗದಂತೆ ಯೋಜನೆ ಮಾಡಿದರೆ ನಮ್ಮ ವಿರೋಧ ಇಲ್ಲ. ಆದರೆ ಅವರನ್ನು ನಿರ್ಗತಿಕರನ್ನಾಗಿ ಮಾಡಿ ನೀವು ಯೋಜನೆ ತರುತ್ತೀರಿ ಎಂದಾದರೆ ಯಾವುದೇ ಕಾರಣಕ್ಕೂ ಒಪ್ಪಲ್ಲ ಎಂದು ಸ್ಪಂದನಾ ಫೌಂಡೇಶನ್ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಹೇಳಿದರು. ಯಾವುದೇ ಕಾರಣಕ್ಕೂ ಈ ಯೋಜನೆ ನಮ್ಮಲ್ಲಿ ಬೇಡ. ಮೀನುಗಾರರರನ್ನು ಬೀದಿಪಾಲು ಮಾಡಿ ಯೋಜನೆ ಸ್ಥಾಪಿಸುವ ಸರ್ಕಾರದ ಒಳ ಉದ್ದೇಶ ಎಲ್ಲರಿಗೂ ಅರ್ಥವಾಗಿದೆ. ನಮಗೆ ಬದುಕಲು ಅವಕಾಶ ಕೊಡಿ. ಗಂಜಿ ಊಟ ಮಾಡಿಕೊಂಡಾದರೂ ನೆಮ್ಮದಿಯಿಂದ ಜೀವನ ಸಾಗಿಸುತ್ತೇವೆ ಎಂದು ಬಂದರು ವಿರೋಧಿ ಹೋರಾಟ ಸಮಿತಿ ಸಹ ಕಾರ್ಯದರ್ಶಿ ವೆಂಕಟೇಶ ದುರ್ಗೇಕರ ಹೇಳಿದರು.