ಕೇಣಿ ಬಂದರು ಯೋಜನೆ ಕೈಬಿಡದಿದ್ದಲ್ಲಿ ಹೋರಾಟ ತೀವ್ರ: ಎಚ್ಚರಿಕೆ

| Published : Aug 19 2025, 01:00 AM IST

ಸಾರಾಂಶ

ಮೀನುಗಾರಿಕೆ ತಾಣಗಳು ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವುದು ಜಿಲ್ಲಾಧಿಕಾರಿ ಅವರ ಕರ್ತವ್ಯವಾಗಿದೆ.

ಕಾರವಾರ: ಅಂಕೋಲಾದ ಕೇಣಿ ಬಂದರು ನಿರ್ಮಾಣ ಮಾಡುವುದನ್ನು ಸರಕಾರ ಕೈಬಿಡದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು. ಅವಶ್ಯಕತೆ ಇದ್ದರೆ ನ್ಯಾಯಾಲಯದ ಮೆಟ್ಟಿಲನ್ನೂ ಏರುತ್ತೇವೆ ಎಂದು ಕೇಣಿ ಬಂದರು ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಜೀವ ಬಲೆಗಾರ್ ಹೇಳಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮೀನುಗಾರರ ಗ್ರಾಮಗಳು, ಮೀನುಗಾರಿಕೆ ತಾಣಗಳು ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವುದು ಜಿಲ್ಲಾಧಿಕಾರಿ ಅವರ ಕರ್ತವ್ಯವಾಗಿದೆ. ಆದರೆ ಕೇಣಿ ಗ್ರಾಮದ ಕರಾವಳಿ ವಲಯ ನಿರ್ವಹಣಾ ನಕ್ಷೆ ಸಂಪೂರ್ಣವಾಗಿ ಖಾಲಿಯಾಗಿದೆ. ಇದು ಜೆಎಸ್ಡಬ್ಲ್ಯೂ ಬಂದರಿಗೆ ಅನುಕೂಲವಾಗುವಂತೆ ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಆರೋಪಿಸಿದರು.

ಬಂದರು ನಿರ್ಮಾಣದಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂಬ ಮೀನುಗಾರಿಕಾ ಇಲಾಖೆ ಸಚಿವರ ಹೇಳಿಕೆಯನ್ನು ಸಮಿತಿ ಖಂಡಿಸುತ್ತದೆ. 2017ರ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಲ್ಲಿದ್ದಲು ಮತ್ತು ಕಬ್ಬಿಣ ಅದಿರು ನಿರ್ವಹಣಾ ಬಂದರುಗಳನ್ನು ಕೆಂಪು ವರ್ಗದ ಯೋಜನೆಎಂದು ಘೋಷಿಸಿದೆ ಮತ್ತು ಅಂತಹ ಯೋಜನೆಗಳು ಮಾನವ ವಾಸಸ್ಥಳ ಹಾಗೂ ಪರಿಸರ ಸೂಕ್ಷ್ಮ ಪ್ರದೇಶಗಳ ಬಳಿ ಬರಬಾರದು ಎಂದು ಶಿಫಾರಸು ಮಾಡಿದೆ. ಈ ಮೂಲಭೂತ ಜ್ಞಾನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇರಬೇಕಿತ್ತು ಎಂದು ಸಮಿತಿ ತಿಳಿಸಿದೆ.

ಸಮಿತಿಯು ಆ. 16 ರಂದು ಶಿರಸಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ, ಸಾರ್ವಜನಿಕ ಅಹವಾಲು ಸಭೆಯನ್ನು ಮುಂದೂಡುವಂತೆ ಮತ್ತು ಕೇಣಿ ಬಂದರು ಹೋರಾಟಕ್ಕೆ ಬೆಂಬಲ ನೀಡುವಂತೆ ಕೋರಿತು. ಸಂಸದರು ಸಮಿತಿಗೆ ಬೆಂಬಲ ನೀಡಿ, ಡಿಸಿಯೊಂದಿಗೆ ಮಾತನಾಡುವುದಾಗಿ ಹಾಗೂ ಕೇಣಿ ಗ್ರಾಮಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದು ಹೋರಾಟಕ್ಕೆ ಹೊಸ ಬಲ ತಂದಿದೆ. ಆ. 22 ರಂದು ನಡೆಯಲಿರುವ ಸಾರ್ವಜನಿಕ ಅಹವಾಲು ಸಭೆಗೆ ಅಂಕೋಲಾ ಮತ್ತು ಸುತ್ತಮುತ್ತಲಿನ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಬಂದರು ವಿರೋಧಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಬೇಕೆಂದು ಸಮಿತಿ ಮನವಿ ಮಾಡಿದೆ ಎಂದು ತಿಳಿಸಿದರು.

ಸಮಿತಿಯ ಗೌರವಾಧ್ಯಕ್ಷ ಪ್ರಮೋದ್ ಬಾನಾವಳಿಕರ್, ಪ್ರಧಾನ ಕಾರ್ಯದರ್ಶಿ ಸಂಜೀವ್ ಬಲೆಗಾರ್, ಹಾಗೂ ಮಂಜು ಟಾಕೇಕರ್, ಉಮೇಶ್ ಕಾಂಚನ್, ರಾಘವೇಂದ್ರ ತಾಂಡೇಲ್, ವಿಜಯ್ ತಾಂಡೇಲ್, ಹುವಾ ಖಂಡೇಕರ್ ಸೇರಿದಂತೆ ಮತ್ತಿತರರು ಇದ್ದರು.