ಸಾರಾಂಶ
ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಪಂನ 2025 -26ನೇ ಸಾಲಿನ ಅಂದಾಜು 3.24 ಲಕ್ಷ ಉಳಿತಾಯ ಬಜೆಟ್‌ನ್ನು ಅಧ್ಯಕ್ಷೆ ನಿರ್ಮಲಾ ಮದಿ ಮಂಡಿಸಿದರು.
ಕನ್ನಡಪ್ರಭ ವಾರ್ತೆ ಕೆರೂರ
ಸೋಮವಾರ ಪಟ್ಟಣ ಪಂಚಾಯತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಪಂನ 2025 -26ನೇ ಸಾಲಿನ ಅಂದಾಜು ₹3.24 ಲಕ್ಷ ಉಳಿತಾಯ ಬಜೆಟ್‌ನ್ನು ಅಧ್ಯಕ್ಷೆ ನಿರ್ಮಲಾ ಮದಿ ಮಂಡಿಸಿದರು.ಪಟ್ಟಣದ ನಾಗರಿಕರಿಗೆ ವಿವಿಧ ಯೋಜನೆ ಅಡಿ ಮೂಲಸೌಕರ್ಯಗಳಿಗೆ ಆದ್ಯತೆ ನೀಡಿ ಅಭಿವೃದ್ಧಿಗೆ ಪೂರಕವಾದ ಉತ್ತಮ ಬಜೆಟ್ ಮಂಡಿಸಲಾಗಿದೆಯೆಂದು ನಿರ್ಮಲಾ ಮದಿ ಹೇಳಿದರು.
ಪ್ರಸಕ್ತ ವರ್ಷದಲ್ಲಿ ಪಟ್ಟಣ ಪಂಚಾಯತಿ ವಿವಿಧ ಆದಾಯ ಮೂಲಗಳಿಂದ ಅಂದಾಜು ₹18.14 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ₹18 .9 ಕೋಟಿ ಖರ್ಚು ನಿರೀಕ್ಷಿಸಲಾಗಿದೆ ಎಂದು ಮುಖ್ಯಾಧಿಕಾರಿ ರಮೇಶ ಬಾಡಬಾಳ ಬಜೆಟ್ ಪ್ರತಿಯನ್ನು ಓದಿ ಹೇಳುತ್ತಾ, ರಸ್ತೆ ಚರಂಡಿ ಬೀದಿದೀಪ ಕುಡಿಯುವ ನೀರು, ಶೌಚಾಲಯ, ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಿ ಬಜೆಟ್ ಸಿದ್ಧಪಡಿಸಲಾಗಿದೆ ಎಂದರು.ಸಭೆಯನ್ನುದ್ದೇಶಿಸಿ ಮಾತನಾಡಿದ ಸದಸ್ಯ ಪ್ರಮೋದ ಪೂಜಾರ, ಪಟ್ಟಣದಲ್ಲಿ ಸಾರ್ವಜನಿಕ ಶಾಚಾಲಯವಿಲ್ಲ, ಮೂತ್ರ ವಿರ್ಸಜನೆಗೆ ನಾಗರಿಕರಿಗೆ ತೊಂದರೆಯಾಗುತ್ತದೆಂದು ಸಭಾಧ್ಯಕ್ಷರ ಗಮನಕ್ಕೆ ತಂದರು. ಇನ್ನೋರ್ವ ಸದಸ್ಯ ವಿಜಯಕುಮಾರ ಐಹೊಳ್ಳಿ ಪ.ಪಂ. ಪರವಾನಗಿ ನವೀಕರಣ ಶುಲ್ಕವನ್ನು ಉದ್ಯಮಿಗಳಿಗೆ ತೊಂದರೆಯಾಗದಂತೆ ಹೆಚ್ಚಳ ಮಾಡಿ ,ಕುಡಿಯುವ ನೀರಿನ ಪೈಪಲೈನ್ ಅಲ್ಲಲ್ಲಿ ಒಡೆದಿದ್ದು ದುರಸ್ತಿ ಮಾಡಿಸಿ ಅನುದಾನವನ್ನು ಕಾಲಮಿತಿಯೊಳಗೆ ಸದ್ಬಳಕೆ ಮಾಡಿಕೊಂಡು ಪಟ್ಟಣದ ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚಿಸಿದರು. ಪಪಂ ಉಪಾದ್ಯಕ್ಷ ಮೋದೀನಸಾಬ ಚಿಕ್ಕೂರ ಹಾಗೂ ಸದಸ್ಯರು, ಪಪಂ ಅಭಿಯಂತರ ಎಂ.ಐ ಹೊಸಮನಿ, ಬಸವರಾಜ ಕಟ್ಟಿಮನಿ, ಗೈಬುಸಾಬ ನದಾಫ್, ಸಿಬ್ಬಂದಿ ಉಪಸ್ಥಿತರಿದ್ದರು.