ಸಾರಾಂಶ
ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಶುಕ್ರವಾರ ಬೃಹತ್ ಬಿಜೆಪಿ ಕಾರ್ಯಕರ್ತರ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ಸಾವಿರಾರು ಕಾರ್ಯಕರ್ತರ ಮುಗಿಲು ಮುಟ್ಟಿದ ಸಂಭ್ರಮದ ನಡುವೆ ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆಗೆ ಕಮಲ ಪಡೆ ರಣಕಹಳೆ ಮೊಳಗಿಸಿದ್ದು, ಬೃಹತ್ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ ನಡೆಸಿತು.ಗುರುವಾರವಷ್ಟೇ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಶುಕ್ರವಾರ ಅಧಿಕೃತವಾಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಆಯೋಜಿಸಿದ್ದ ಬೃಹತ್ ರೋಡ್ ಶೋಗೆ ಜನಸಾಗರವೇ ಹರಿದು ಬಂದಿತ್ತು. ಕೇಸರಿ ಬಾವುಟ ರಾರಾಜಿಸಿತು. ಮೋದಿ, ಭಾರತ್ ಮಾತಾ ಕೀ ಜೈ ಜಯಘೋಷ ಮುಗಿಲು ಮುಟ್ಟಿತ್ತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಮಾಜಿ ಸಚಿವರಾದ ಸಿ.ಸಿ.ಪಾಟೀಲ, ಬೈರತಿ ಬಸವರಾಜ, ಮುರುಗೇಶ ನಿರಾಣಿ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ವಿಧಾನಪರಿಷತ್ ಪ್ರತಿಪ್ರಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಮಾಜಿ ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಕಮಲ ಪಡೆಯ ನಾಯಕರ ಸಂಗಮವೇ ಆಗಿದ್ದರಿಂದ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿತ್ತು.ಪಟ್ಟಣದಲ್ಲಿ ರೋಡ್ ಶೋಗೂ ಮುನ್ನ ತಾಲೂಕು ಕ್ರೀಡಾಂಗಣದ ಬಳಿ ದ್ಯಾಮವ್ವನ ಪಾದಗಟ್ಟಿಯಿಂದ ಹಳೇಪೇಟಿ ಮಾರ್ಗವಾಗಿ ಗಂಗೀಭಾವಿ ಕ್ರಾಸ್ ವರೆಗೆ ಪಾದಯಾತ್ರೆ ನಡೆಸಲಾಯಿತು. ನಂತರ ಅಲ್ಲಿಂದ ತೆರೆದ ವಾಹನದಲ್ಲಿ ಎಲ್ಲ ನಾಯಕರು ಹಳೇ ಬಸ್ ನಿಲ್ದಾಣದ ಮಾರ್ಗವಾಗಿ ಕಿತ್ತೂರು ಚೆನ್ನಮ್ಮ ವೃತ್ತದವರೆಗೆ ಬೃಹತ್ ರೋಡ್ ಶೋ ನಡೆಸಿದರು.
ಸುಡು ಬಿಸಿಲನ್ನು ಲೆಕ್ಕಿಸದೆ ಸಹಸ್ರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ರೋಡ್ ಶೋದಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಬಾವುಟ ಹಿಡಿದ ಕಾರ್ಯಕರ್ತರು ಭರತ್ ಹಾಗೂ ಬಸವರಾಜ ಬೊಮ್ಮಾಯಿ ಪರ ಜಯಘೋಷ ಕೂಗಿದರು. ಪಟ್ಟಣ ತುಂಬೆಲ್ಲ ಬಿಜೆಪಿ ಬಾವುಟಗಳು, ಕೇಸರಿ ಶಾಲುಗಳು ರಾರಾಜಿಸುತ್ತಿದ್ದವು.