ಸಾರಾಂಶ
ಸಿದ್ದಾಪುರ: ಯಕ್ಷಗಾನದ ಕುರಿತಾದ ಆಸಕ್ತಿ, ಬದ್ಧತೆ ಹಾಗೂ ಶ್ರಮದ ಫಲವಾಗಿ ಮತ್ತು ಯಕ್ಷಗಾನ ರಂಗದಲ್ಲಿ ಸಾಧನೆ ಮಾಡಿ ಕೇಶವ ಹೆಗಡೆ ಕೊಳಗಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಕೇಶವ ಹೆಗಡೆ ಕೊಳಗಿ ಅವರು ಯಕ್ಷಗಾನದ ಮಾಣಿಕ್ಯ ಎಂದು ಸ್ಥಳೀಯ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ದೊಡ್ಮನೆ ತಿಳಿಸಿದರು.ಪಟ್ಟಣದ ನೆಹರೂ ಮೈದಾನದಲ್ಲಿ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ ೫೦ನೇ ಪ್ರದರ್ಶನದ ಶುಭಲಕ್ಷಣ ಯಕ್ಷಗಾನದಲ್ಲಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿ ಅವರಿಗೆ ಸಿದ್ದಾಪುರ ತಾಲೂಕಿನ ಯಕ್ಷಗಾನ ಕಲಾಪೋಷಕರು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೇಶವ ಹೆಗಡೆ ಕೊಳಗಿ ಅವರು, ನನ್ನ ಹುಟ್ಟೂರಿನಲ್ಲಿ ನಡೆದ ಈ ಸನ್ಮಾನ ಸಂತೋಷ ತಂದಿದೆ. ನಾನು ಯಕ್ಷಗಾನ ರಂಗದಲ್ಲಿ ಭಾಗವತನಾಗುವುದಕ್ಕೆ ತಂದೆಯವರಾದ ಅನಂತ ಹೆಗಡೆ ಕೊಳಗಿ, ದಿ. ಉಪ್ಪೂರು ನಾರಾಯಣ ಭಾಗವತ್ ಹಾಗೂ ಕೆ.ಪಿ. ಹೆಗಡೆ ಗೋಳಗೋಡ ಅವರು ಕಾರಣ. ನಂತರ ಮಹಾಬಲ ಹೆಗಡೆ ಕೆರೆಮನೆ, ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಂಥ ಅನೇಕ ಹಿರಿಯ ಕಲಾವಿದರ ಮಾರ್ಗದರ್ಶನ, ಪ್ರೋತ್ಸಾಹ ಕಾರಣ. ಕಳೆದ ೪೦ ವರ್ಷಗಳಲ್ಲಿ ಅನೇಕ ಹಿರಿ- ಕಿರಿಯ ಕಲಾವಿದರಿಗೆ ಭಾಗವತಿಕೆ ಮಾಡಿದ ಸಂತಸ ಇದೆ ಎಂದರು.ಡಾ. ಕೆ.ಶ್ರೀಧರ ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ, ಪತ್ರಕರ್ತ ಗಂಗಾಧರ ಕೊಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾಲಿಗ್ರಾಮ ಮೇಳದ ಭಾಗವತರಾದ ಚಂದ್ರಕಾಂತ ಮೂಡಬೆಳ್ಳೆ, ಪ್ರಶಾಂತ ಶೆಟ್ಟಿಗಾರ, ಈಶ್ವರ ನಾಯ್ಕ ಮಂಕಿ, ಶಶಿಕಾಂತ ಶೆಟ್ಟಿ, ಮಹಾಬಲೇಶ್ವರ ಭಟ್ಟ ಕ್ಯಾದಗಿ ಅವರನ್ನು ಸಂಘಟಕರು ಸನ್ಮಾನಿಸಿದರು.
ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ವಕೀಲ ಜಿ.ಎಸ್. ಹೆಗಡೆ ಬೆಳ್ಳೆಮಡಕಿ, ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ, ಉದ್ಯಮಿ ಉಪೇಂದ್ರ ಪೈ, ವಿ. ವಿನಾಯಕ ಭಟ್ಟ ಮತ್ತೀಹಳ್ಳಿ, ಸಂಘಟಕರಾದ ಸತೀಶ ಹೆಗಡೆ ಬೈಲಳ್ಳಿ, ಕೇಶವ ಹೆಗಡೆ ಕಿಬ್ಳೆ, ರವಿ ನಾಯ್ಕ ಜಾತಿಕಟ್ಟೆ, ಎಸ್.ಕೆ. ಮೇಸ್ತಾ, ಸುಧೀರ್ ಕೊಂಡ್ಲಿ, ನಾಗರಾಜ ಗೊದ್ಲಬೀಳ, ನಟರಾಜ ಹೆಗಡೆ ಇತರರಿದ್ದರು. ಸಂಘಟಕರಾದ ನಾಗರಾಜ ನಾಯ್ಕ ಬೇಡ್ಕಣಿ ಸ್ವಾಗತಿಸಿದರು. ಹರೀಶ ಗೌಡರ್ ನಿರೂಪಿಸಿದರು. ನಂತರ ಜರುಗಿದ ಶುಭಲಕ್ಷಣ ಯಕ್ಷಗಾನ ಆಖ್ಯಾನದಲ್ಲಿ ಕೇಶವ ಹೆಗಡೆ ಕೆಲವು ಪದ್ಯಗಳನ್ನು ಹಾಡಿದರು.