ಸಾರಾಂಶ
ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೆ ಸುಪ್ರೀಂಕೋರ್ಟ್ ಆಯಾ ರಾಜ್ಯ ಸರ್ಕಾರಕ್ಕೆ ಅಧಿಕಾರ ಕೊಟ್ಟಿದೆ. ಹೀಗಿದ್ದರೂ ಆದೇಶ ನೀಡಿ ಆರೇಳು ತಿಂಗಳು ಕಳೆದರೂ ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ಮೀನಾಮೇಷ ಮಾಡುತ್ತಿದೆ.
ಕೊಪ್ಪಳ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿ ತಕ್ಷಣ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಅಖಿಲ ಭಾರತ ಮಾದಿಗ ದಂಡೋರ ಸಮಿತಿ ಪ್ರತಿಭಟನೆ ನಡೆಸಿತು. ನಗರದ ಡಾ. ಬಾಬು ಜಗಜೀವನರಾವ್ ವೃತ್ತದಿಂದ ಆರಂಭವಾದ ಪ್ರತಿಭಟನೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು. ಇದೇ ವೇಳೆ ಸಮಿತಿ ಅಧ್ಯಕ್ಷ ಹುಸೆನಪ್ಪಸ್ವಾಮಿ ಮಾದಿಗ ಕೇಶ ಮುಂಡನೆ ಮಾಡಿಕೊಂಡರು.ಈ ವೇಳೆ ಮಾತನಾಡಿದ ಸಮಿತಿ ರಾಜ್ಯಾಧ್ಯಕ್ಷ ಬಿ. ಹುಸೇನಪ್ಪಸ್ವಾಮಿ ಮಾದಿಗ, ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೆ ಸುಪ್ರೀಂಕೋರ್ಟ್ ಆಯಾ ರಾಜ್ಯ ಸರ್ಕಾರಕ್ಕೆ ಅಧಿಕಾರ ಕೊಟ್ಟಿದೆ. ಹೀಗಿದ್ದರೂ ಆದೇಶ ನೀಡಿ ಆರೇಳು ತಿಂಗಳು ಕಳೆದರೂ ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ಮೀನಾಮೇಷ ಮಾಡುತ್ತಿದೆ. ನ್ಯಾಯಾಲಯದ ಆದೇಶದಂತೆ ನ್ಯಾಯಮೂರ್ತಿ ಸದಾಶಿವ ಆಯೋಗದ ದತ್ತಾಂಶ ಪ್ರಕಾರ ಮಾದಿಗರಿಗೆ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.ಒಳ ಮೀಸಲಾತಿ ಜಾರಿಗೊಳಿಸದೆ ಕಾಲಹರಣ ಮಾಡುವ ಮೂಲಕ ಮಾದಿಗರ ಹಕ್ಕನ್ನು ಕಸಿದು ಮೋಸಮಾಡಲಾಗುತ್ತಿದೆ. ಈ ಕುರಿತು ಸದನದಲ್ಲಿ ಸಚಿವರು, ಶಾಸಕರು ಧ್ವನಿ ಎತ್ತುತ್ತಿಲ್ಲ ಎಂದು ಕಿಡಿಕಾರಿದ ಅವರು, ಜಿಲ್ಲಾಧಿಕಾರಿಗಳು ಮಾದಿಗರ ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಪರಿಗಣಿಸದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಸಮಿತಿ ಜಿಲ್ಲಾಧ್ಯಕ್ಷ ಡಿ. ಹುಲ್ಲೇಶ ಬೂದಗುಂಪಾ, ಕಾರ್ಯಾಧ್ಯಕ್ಷ ಹನುಮಂತಪ್ಪ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ ಗುಡದಪ್ಪ ಭಂಗಿ, ಹುಲಗಪ್ಪ ಹಿರೇಮನಿ, ಬಸವರಾಜ ನಡುವಲಮನಿ, ಶರಣಪ್ಪ ಹಿರೇಮನಿ, ದೇವಪ್ಪ ಹರಿಜನ, ಪ್ರಭುರಾಜ ಕಡೇಮನಿ, ಯಮನೂರಪ್ಪ, ಮಹೇಶ ಹಿರೇಮನಿ, ನಾಗರಾಜ ತಳಕಲ್ ಸೇರಿದಂತೆ ಅನೇಕರು ಇದ್ದರು.