ಕೆ.ಎಚ್. ಪಾಟೀಲ ದಿಗ್ಗಜ ರಾಜಕಾರಣಿ: ಬಸವರಾಜ ರಾಯರಡ್ಡಿ

| Published : Sep 12 2024, 01:55 AM IST / Updated: Sep 12 2024, 01:56 AM IST

ಸಾರಾಂಶ

ಕೆ.ಎಚ್. ಪಾಟೀಲರಿಗೆ ನನ್ನ ಮೇಲೆ ಅಪಾರ ಪ್ರೀತಿ ಇತ್ತು. ಅವರಿಂದ ಪ್ರಜಾಪ್ರಭುತ್ವ, ವಿಧಾನಸಭಾ ಕಲಾಪ, ಸಮಾಜ ಸೇವೆ ಕಲಿತಿದ್ದೇನೆ. ಈಗಿನ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ.

ಶಿರೂರು ಗ್ರಾಮದಲ್ಲಿ ಮಾಜಿ ಸಚಿವ ಕೆ.ಎಚ್. ಪಾಟೀಲ ಕಂಚಿನ ಮೂರ್ತಿ ನಿರ್ಮಾಣಕ್ಕೆ ಶಿಲಾನ್ಯಾಸ

ಸಿಎಂ ಆರ್ಥಿಕ ಸಲಹೆಗಾರ

ಕನ್ನಡಪ್ರಭ ವಾರ್ತೆ ಕುಕನೂರು

ಮಾಜಿ ಸಚಿವ ಕೆ.ಎಚ್. ಪಾಟೀಲ್ ರಾಜ್ಯ ಕಂಡ ದಿಗ್ಗಜ ರಾಜಕಾರಣಿ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಶಿರೂರು ಗ್ರಾಮದಲ್ಲಿ ಜಲಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ ಶಿರೂರು ಪುನರ್ವಸತಿ ಗ್ರಾಮದಲ್ಲಿ ಜರುಗಿದ ಮಾಜಿ ಸಚಿವ ಕೆ.ಎಚ್. ಪಾಟೀಲರ ಕಂಚಿನ ಮೂರ್ತಿ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಮಕೃಷ್ಣ ಹೆಗಡೆ ಸಿಎಂ ಇದ್ದಾಗ ಹಿರೇಹಳ್ಳ ಡ್ಯಾಂ ನಿರ್ಮಾಣ ಕಾರ್ಯ ಆರಂಭವಾಯಿತು. ತುಂಗಭದ್ರಾ ನದಿಗೆ ಮರಳು ಹರಿದು ಹೋಗಬಾರದೆಂದು ಡ್ಯಾಂ ನಿರ್ಮಾಣ ಕೈಗೆತ್ತಿಕೊಳ್ಳಲಾಯಿತು. ನಾನು ಮೊದಲ ಸಲ ಶಾಸಕನಾಗಿದ್ದಾಗ ದೇವೇಗೌಡ್ರು ನೀರಾವರಿ ಮಂತ್ರಿ ಇದ್ದಾಗ ಪುನರ್ವಸತಿ ಗ್ರಾಮ ಅರಕೇರಿಗೆ ಅಭಿವೃದ್ಧಿ ಕಾರ್ಯ ಮಂಜೂರು ಮಾಡಿಸಿದೆ. 2003ರಲ್ಲಿ ಮುತ್ತಾಳ, ಶಿರೂರು, ವೀರಾಪೂರ ಗ್ರಾಮಗಳನ್ನು ಪುನರ್ವಸತಿ ಗ್ರಾಮಗಳನ್ನಾಗಿ ಮಾಡಲು ಎಚ್.ಕೆ. ಪಾಟೀಲ್ ಸಹಕಾರದಿಂದ ನಾನು ಇಲ್ಲಿಯ ಸಮಸ್ಯೆ ಅರ್ಥೈಸಿ ಪುನರ್ವಸತಿ ಗ್ರಾಮಗಳನ್ನು ಮಂಜೂರು ಮಾಡಿಸಿದೆ. ಮೊದಲಿಗೆ ನೂತನ ಪುನರ್ವಸತಿ ಗ್ರಾಮಗಳ ಮಂಜೂರಾತಿ ಆಗದು ಎಂದು ಹೇಳಿದ್ದರು. ನಂತರ ನಾನು ಶೀತ ಪೀಡಿತ ಪ್ರದೇಶ ಎಂದು ಮಹಾರಾಷ್ಟ್ರದಲ್ಲಿ ಗ್ರಾಮ ಸ್ಥಳಾಂತರ ಮಾಡಿದ ವರದಿ ಆರಾಧಿಸಿ, ಈ ವಾದವನ್ನು ಎಚ್.ಕೆ. ಪಾಟೀಲರ ಮುಂದೆ ಮಂಡಿಸಿ ಪುನರ್ವಸತಿ ಗ್ರಾಮಗಳನ್ನು ಮಂಜೂರು ಮಾಡಿಸಿದೆ ಎಂದರು.

ಶಿರೂರು 72 ಎಕರೆ, ವೀರಾಪೂರ 108 ಎಕರೆ, ಅರಕೇರಿ 40 ಎಕರೆ ಪ್ರದೇಶ ಮುಳುಗಡೆ ಆಗಿದೆ. ಆಗಿನ ಸಿಎಂ ಧರ್ಮಸಿಂಗ್ ಅವರಿಂದ ₹ 6 ಕೋಟಿ ಮಂಜೂರು ಮಾಡಿಸಿದೆ. ಜನರಿಗೆ ನೇರ ಹಣ ಬಂತು. 2012ರಲ್ಲಿ ಪುನರ್ವಸತಿ ಗ್ರಾಮಗಳ ಸಂಪೂರ್ಣ ಮೂಲಭೂತ ಸೌಕರ್ಯಕ್ಕೆ ಅನುದಾನ ನೀಡಲಾಗಿದೆ. ಇಲ್ಲಿಯ ಜನರು ಹಳೆ ಗ್ರಾಮಗಳನ್ನು ಬಿಟ್ಟು ಪುನರ್ವಸತಿ ಗ್ರಾಮಕ್ಕೆ ಬಂದು ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎಂದರು.

ಕೆ.ಎಚ್. ಪಾಟೀಲರಿಗೆ ನನ್ನ ಮೇಲೆ ಅಪಾರ ಪ್ರೀತಿ ಇತ್ತು. ಅವರಿಂದ ಪ್ರಜಾಪ್ರಭುತ್ವ, ವಿಧಾನಸಭಾ ಕಲಾಪ, ಸಮಾಜ ಸೇವೆ ಕಲಿತಿದ್ದೇನೆ. ಈಗಿನ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ. ಕಲಾಪದಲ್ಲಿ ಸಹ ಕಿತ್ತಾಟ ನಡೆಯುತ್ತದೆ. ಆದರೆ ಹಿಂದಿನ ದಿಗ್ಗಜ್ಜರು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಬಡವರು ಎಂಪಿ, ಎಂಎಲ್ಎ ಆಗಲು ಆಗುತ್ತಿಲ್ಲ ಎಂದರು.

ಕರ್ನಾಟಕದಲ್ಲಿ ಕೆ.ಎಚ್. ಪಾಟೀಲ ಅವರದು ದೊಡ್ಡ ವ್ಯಕ್ತಿತ್ವ. ಅವರ ಆದರ್ಶ ಸಮಾಜಕ್ಕೆ ಬೇಕು. ಇನ್ನೂ ಮೂರು ತಿಂಗಳಲ್ಲಿ ಕಂಚಿನ ಮೂರ್ತಿ ನಿರ್ಮಾಣ ಆಗುತ್ತದೆ ಎಂದರು.

ಕರ್ನಾಟಕ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಹನುಮಂತಪ್ಪ ದಾಸರ ಮಾತನಾಡಿ, ₹64 ಕೋಟಿಯಲ್ಲಿ ನಾಲ್ಕು ಪುನರ್ವಸತಿ ಗ್ರಾಮಗಳ ಅಭಿವೃದ್ಧಿ ಮಾಡಲಾಗಿದೆ. ಹಿರೇಹಳ್ಳದಲ್ಲಿ 1.64 ಟಿಎಂಸಿ ಹಿನ್ನೀರು ನಿಲ್ಲುತ್ತದೆ. ಈ ನೀರು 1200 ಹೆಕ್ಟೇರ್‌ ನೀರಾವರಿಗೆ ಅನುಕೂಲ ಆಗಿದೆ. ಹಿನ್ನೀರಿನಿಂದ ನಾಲ್ಕು ಗ್ರಾಮಗಳು ಮುಳುಗಡೆ ಆಗಿದ್ದು ಅವುಗಳ ಅಭಿವೃದ್ಧಿಗೆ ರಾಯರಡ್ಡಿ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದರು.

ಇಲಾಖೆ ಅಧಿಕಾರಿ ರಾಘವೇಂದ್ರ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಹಸೀಲ್ದಾರ್ ಎಚ್. ಪ್ರಾಣೇಶ, ಎಚ್.ಕೆ. ಪಾಟೀಲ ಸಹೋದರರಾದ ಎಂ.ಆರ್. ಪಾಟೀಲ್, ಆರ್.ಆರ್. ಓದಗೌಡ್ರು, ಡಾ. ನಾಗನೂರು, ಪ್ರಮುಖರಾದ ಹನುಮಂತಗೌಡ ಚಂಡೂರು, ಬಸವರಾಜ ಉಳ್ಳಾಗಡ್ಡಿ, ಗ್ರಾಪಂ ಅಧ್ಯಕ್ಷ ವಿರುಪಾಕ್ಷಪ್ಪ ತಳಕಲ್ಲ, ಈರಪ್ಪ ಕುಡಗುಂಟಿ, ಈಶಪ್ಪ ಶಿರೂರು, ಅಶೋಕ ತೋಟದ, ಸತ್ಯನಾರಾಯಣಪ್ಪ ಹರಪನ್ಹಳ್ಳಿ ಇತರರಿದ್ದರು.