ನೀರುಮಾರ್ಗ ವಾಣಿಜ್ಯ ಸಂಕೀರ್ಣಕ್ಕೆ ಅನುದಾನ: ಖಾದರ್‌ ಭರವಸೆ

| Published : Jul 13 2025, 01:18 AM IST

ಸಾರಾಂಶ

ದ.ಕ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನೀರುಮಾರ್ಗ ಗ್ರಾಮ ಪಂಚಾಯಿತಿ ಮತ್ತು ಸರ್ಕಾರೇತರ ಸಂಸ್ಥೆ- ಹಸಿರು ದಳ ಜಂಟಿಯಾಗಿ ನೀರುಮಾರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನ ತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಸಮಾರಂಭ ನಡೆಯಿತು.

ನೀರುಮಾರ್ಗದಲ್ಲಿ ನೂತನ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ ಸೇರಿ ವಿವಿಧ ಕಾಮಗಾರಿ ಉದ್ಘಾಟನೆ, ಶಿಲಾನ್ಯಾಸಕನ್ನಡಪ್ರಭ ವಾರ್ತೆ ಮಂಗಳೂರು

ಗ್ರಾಮಗಳ ಅಭಿವೃದ್ಧಿಗೆ ದೊಡ್ಡ ಮಟ್ಟದ ಯೋಜನೆ ರೂಪಿಸಿದಾಗ ತನ್ನಿಂತಾನೆ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಕಾರ್ಯ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ನೀರುಮಾರ್ಗದ ನೂತನ ವಾಣಿಜ್ಯ ಸಂಕೀರ್ಣಕ್ಕೆ ಸರ್ಕಾರದಿಂದ 1 ಕೋಟಿ ರು. ಅನುದಾನ ದೊರಕಿಸಿಕೊಡಲು ಪ್ರಯತ್ನ ಮಾಡುವುದಾಗಿ ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದ್ದಾರೆ.

ದ.ಕ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನೀರುಮಾರ್ಗ ಗ್ರಾಮ ಪಂಚಾಯಿತಿ ಮತ್ತು ಸರ್ಕಾರೇತರ ಸಂಸ್ಥೆ- ಹಸಿರು ದಳ ಜಂಟಿಯಾಗಿ ನೀರುಮಾರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನ ತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಂಚಾಯಿತಿಗಳು ಗ್ರಾಮದ ಹೃದಯವಾಗಿದ್ದು, ಗ್ರಾಮರಾಜ್ಯದ ಕನಸುಗಳು ಇಲ್ಲಿಂದಲೇ ಸಾಕಾರಗೊಳ್ಳುತ್ತಿವೆ. ಜನಪ್ರತಿನಿಗಳು ಜನಸ್ನೇಹಿಯಾಗಿ ಕೆಲಸ ಮಾಡಿದಾಗ ಗ್ರಾಮದ ಅಭ್ಯುದಯ ಸಾಧ್ಯ ಎಂದು ಹೇಳಿದರು.

ನೀರುಮಾರ್ಗ ಪಂಚಾಯಿತಿ ಅಧ್ಯಕ್ಷ ಶ್ರೀಧರ ಚಿಕ್ಕಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮೋಲಿ ಶಾಂತಿ ಸಲ್ಡಾನ, ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಕಾರಿ ಮಹೇಶ್ ಕುಮಾರ್ ಹೊಳ್ಳ, ಪಿಡಿಒ ಅಬೂಬಕ್ಕರ್, ದ.ಕ ಜಿಲ್ಲಾ ಕೆಡಿಪಿ ಸದಸ್ಯ ಮೆಲ್ವಿನ್ ಡಿಸೋಜ, ನೀರುಮಾರ್ಗ ಸೇವಾ ಸಹಕಾರಿ ಸಂಘದ ಅಧ್ಯಕ್ಷೆ ಸೆಲಿನ್ ಸಿಲ್ವಿಯಾ ಡಿಮೆಲ್ಲೋ, ನಿಕಟಪೂರ್ವ ಕಾರ್ಪೊರೇಟರ್ ಭಾಸ್ಕರ್ ಕೆ., ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು ಇದ್ದರು.ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರದಲ್ಲಿ ಸಾಧನೆನೆಗೈದ ಮಹೇಶ್ ಕುಮಾರ್ ಹೊಳ್ಳ, ಮಹಮ್ಮದ್ ಬಾಷ, ಅಬೂಬಕ್ಕರ್, ಪದ್ಮನಾಭ ಕೋಟ್ಯಾನ್ ಪೆಲತ್ತಡಿ, ವಿಜಯ್ ಕೋಟ್ಯಾನ್ ಪಡು, ಮೋಲಿ, ರೋಹಿಣಿ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಣ, ಕ್ರೀಡಾ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿಶಿಷ್ಟ ಚೇತನರಿಗೆ ಚೆಕ್ ವಿತರಿಸಲಾಯಿತು. ವಿಜಯ್ ಕೋಟ್ಯಾನ್ ನಿರೂಪಿಸಿದರು. ಪಿಡಿಒ ಅಬೂಬಕ್ಕರ್ ವಂದಿಸಿದರು.

-------------------ಕಾಮಗಾರಿ ಉದ್ಘಾಟನೆ, ಶಿಲಾನ್ಯಾಸ

ನೂತನ ತ್ಯಾಜ್ಯ ವಿಲೇವಾರಿ ಘಟಕ (ಸ್ವಚ್ಛ ಸಂಕೀರ್ಣ) ಉದ್ಘಾಟನೆ, ೫ ಕೋಟಿ ರು. ವೆಚ್ಚದ ಗ್ರಾಮ ಪಂಚಾಯತಿ ವಾಣಿಜ್ಯ ಸಂಕೀರ್ಣಕ್ಕೆ ಶಿಲಾನ್ಯಾಸ, ಬೊಂಡಂತಿಲ ಗ್ರಾಮದ ತಾರಿಗುಡ್ಡೆಯಲ್ಲಿ ೧೨ ಲಕ್ಷ ರು. ವೆಚ್ಚದ ಜಿಮ್ ಕಟ್ಟಡ ಶಿಲಾನ್ಯಾಸ, ಬೊಂಡಂತಿಲ ಗ್ರಾಮದ ಕೊಂಬೆಲ್‌ಲಚ್ಚಿಲ್‌ನಲ್ಲಿ ೧೨ ಲಕ್ಷ ರು. ವೆಚ್ಚದ ಎಸ್‌ಟಿ/ಎಸ್‌ಸಿ ಸಮುದಾಯ ಭವನ ಉದ್ಘಾಟನೆ, ೫೭ನಿವೇಶನಗಳ ನೀಲ ನಕಾಶೆ ಬಿಡುಗಡೆ ನಡೆಯಿತು.