ಸಾರಾಂಶ
ಯಾವುದೇ ಸರ್ಕಾರ ಧಾರ್ಮಿಕ ಮೀಸಲಾತಿ ತರಲು ಅವಕಾಶ ಇಲ್ಲ, ಆದ್ದರಿಂದ ಮುಸ್ಲಿಂ ಬಿಲ್ ವಿರುದ್ಧ ನಾವು ಹೋರಾಟ ಮಾಡಿದ್ದೆವು. ಅದಕ್ಕೆ ವಿಧಾನಸಭೆ ಸ್ವೀಕರ್ 18 ಮಂದಿ ಬಿಜೆಪಿ ಶಾಸಕರ ಅಮಾನತು ಮಾಡಿದ್ದಾರೆ. ಅವರು ಮತ್ತೊಮ್ಮೆ ತಮ್ಮ ನಿರ್ಧಾರದ ಬಗ್ಗೆ ಆಲೋಚನೆ ಮಾಡುವುದು ಸೂಕ್ತ ಎಂದು ಅಮಾನತುಗೊಂಡವರಲ್ಲಿ ಒಬ್ಬರಾದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಯಾವುದೇ ಸರ್ಕಾರ ಧಾರ್ಮಿಕ ಮೀಸಲಾತಿ ತರಲು ಅವಕಾಶ ಇಲ್ಲ, ಆದ್ದರಿಂದ ಮುಸ್ಲಿಂ ಬಿಲ್ ವಿರುದ್ಧ ನಾವು ಹೋರಾಟ ಮಾಡಿದ್ದೆವು. ಅದಕ್ಕೆ ವಿಧಾನಸಭೆ ಸ್ವೀಕರ್ 18 ಮಂದಿ ಬಿಜೆಪಿ ಶಾಸಕರ ಅಮಾನತು ಮಾಡಿದ್ದಾರೆ. ಅವರು ಮತ್ತೊಮ್ಮೆ ತಮ್ಮ ನಿರ್ಧಾರದ ಬಗ್ಗೆ ಆಲೋಚನೆ ಮಾಡುವುದು ಸೂಕ್ತ ಎಂದು ಅಮಾನತುಗೊಂಡವರಲ್ಲಿ ಒಬ್ಬರಾದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷದ ಕಟ್ಟಾಳು. ನಾವು ಒಂದು ಸಿದ್ಧಾಂತದ ವಿಚಾರ ಹಿಡಿದ ಶಾಸಕರು. ಅಭಿವೃದ್ಧಿ, ಹಿಂದುತ್ವ, ಪಕ್ಷದ ಸಿದ್ಧಾಂತ ವಿಚಾರದಲ್ಲಿ ಮುಂದೆಯೂ ರಾಜಿ ಇಲ್ಲ ಎಂದರು.ಗ್ಯಾರೆಂಟಿ ಯೋಜನೆಗಳಿಂದ ಖಜಾನೆ ಖಾಲಿಯಾಗಿದೆ. ಜನರನ್ನು ದಾರಿ ತಪ್ಪಿಸಲು ಈ ರೀತಿಯ ಷಡ್ಯಂತ್ರಗಳನ್ನು ಮಾಡುತ್ತಿದ್ದಾರೆ, ಶಾಸಕತ್ವದ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಖಾದರ್ ತಮ್ಮ ಕ್ಷೇತ್ರ ಗಮನಿಸಲಿ, ಅವರ ಕ್ಷೇತ್ರದಲ್ಲಿ ಕಳ್ಳತನ, ಗೂಂಡಾಗಿರಿ, ಗೋ ಹತ್ಯೆಗಳು ಆಗುತ್ತಿವೆ. ಅವರ ಜಿಲ್ಲೆಯಲ್ಲಿ ಅಪರಾಧ ಎಸಗಿದ ಅವರದೇ ಪಕ್ಷದ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಲಿ, ಅಂಥವರನ್ನು ಗಡಿಪಾರು ಮಾಡಲಿ, ನಿಜವಾದ ನಾಯಕರು ಎನಿಸಿಕೊಳ್ಳಲಿ ಎಂದು ಸಲಹೆ ನೀಡಿದ ಶಾಸಕರು, ನಮ್ಮಂತಹ ಶಾಸಕರನ್ನು ಅಮಾನತು ಮಾಡಿ ಏನು ಸಾಧನೆ ಮಾಡಲು ಸಾಧ್ಯವಿಲ್ಲ ಎಂದರು.