ಸಾರಾಂಶ
ಕೊಪ್ಪಳ:
ನಗರದಲ್ಲಿ 10 ದಿನ ನಡೆದ ರಾಜ್ಯಮಟ್ಟದ ಖಾದಿ ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಮಂಗಳವಾರ ತೆರೆ ಬಿದ್ದಿದ್ದು ಬರೋಬ್ಬರಿ ₹ 1.50 ಕೋಟಿ ವಹಿವಾಟು ನಡೆದಿದೆ.ರಾಜ್ಯ ಖಾದಿ ಮತ್ತು ಗ್ರಾಮೊದ್ಯೋಗ ಮಂಡಳಿ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ “ಖಾದಿ ಉತ್ಸವ-2025” ಆ. 24ರಿಂದ ಸೆ. 2ರ ವರೆಗೆ ನಗರದ ಹೊಸಪೇಟೆ ರಸ್ತೆಯ ನಗರಸಭೆ ಎದುರಿನ ಶಾದಿ ಮಹಲ್‌ನಲ್ಲಿ ನಡೆಯಿತು. ಈ ವಸ್ತು ಪ್ರದರ್ಶನದಲ್ಲಿ 52 ಮಳಿಗೆ ನಿರ್ಮಿಸಲಾಗಿತ್ತು. 10 ದಿನಗಳಿಗೆ ₹ 66.88 ಲಕ್ಷ ಮೌಲ್ಯದ ಖಾದಿ ಮತ್ತು ಸಿಲ್ಕ್ ಮಾರಾಟವಾದರೆ, ಗ್ರಾಮೋದ್ಯೋಗದ ಉತ್ಪನ್ನಗಳಾದ ರೆಡಿಮೆಡ್ ಗಾರ್ಮೆಂಟ್ಸ್, ಆಯುವೇರ್ದಿಕ್ ವಸ್ತು, ಚನ್ನಪಟ್ಟಣದ ಗೊಂಬೆ, ನೈಸರ್ಗಿಕವಾದ ಚಾಪೆ ಮತ್ತು ಚಪ್ಪಲಿ ಸೇರಿದಂತೆ ₹ 83.74 ಲಕ್ಷ ಮೊತ್ತದ ಮಾರಾಟವಾಗಿದೆ. ಮೇಳಕ್ಕೆ 30000ಕ್ಕೂ ಹೆಚ್ಚು ಜನರು ಭೇಟಿ ನೀಡಿ ಖರೀದಿಸುವ ಮೂಲಕ ಖಾದಿ ಉತ್ಪನ್ನಗಳನ್ನು ಪ್ರೋತ್ಸಾಹಿಸಿದರು. 13 ವರ್ಷಗಳ ನಂತರ ಆಯೋಜಿಸಿದ ಈ ವಸ್ತು ಪ್ರದರ್ಶನ ಯಶಸ್ವಿಯಾಗಿ ಮುಕ್ತಾಯವಾಯಿತು.
ಪ್ರಮಾಣ ಪತ್ರ ವಿತರಣೆ:ಮೇಳದಲ್ಲಿ ಭಾಗವಹಿಸಿದವರಿಗೆ ಪ್ರದರ್ಶಕರಿಗೆ ಕೊಪ್ಪಳ ನಗರಸಭೆ ಪೌರಾಯುಕ್ತ ವೆಂಕಟೇಶ ನಾಗನೂರು, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಕಾರ್ಪಣಿ ಮಾರುತಿ, ಕೊಪ್ಪಳ ಎಸ್‌ಬಿಐ ಆರ್‌ಸೆಟಿ ನಿರ್ದೇಶಕ ರಾಯೇಶ್ವರ ಪೈ ಪ್ರಮಾಣ ಪತ್ರ ವಿತರಿಸಿದರು. ಈ ವೇಳೆ ರಾಜ್ಯ ಖಾದಿ ಮತ್ತು ಗ್ರಾಮೊದ್ಯೋಗ ಮಂಡಳಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೆ. ವೀರೇಶ್, ನಿವೃತ್ತ ಜಿಲ್ಲಾ ಖಾದಿ ಗ್ರಾಮೊದ್ಯೋಗ ಅಧಿಕಾರಿ ಎನ್.ಜಿ. ಹುನಗುಂದ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.