ಸಾರಾಂಶ
ಚಳ್ಳಕೆರೆ ನಗರದ ನಗರದ ಉಣ್ಣೆ ಕಂಬಳಿ ಮಾರುಕಟ್ಟೆ ಆವರಣದಲ್ಲಿ ಏರ್ಪಡಿಸಿದ್ದ ಖಾದಿ ಮಹೋತ್ಸವ ಕಾರ್ಯಕ್ರಮವನ್ನು ಅಧ್ಯಕ್ಷ ಬಿ.ಮಲ್ಲಿಕಾರ್ಜುನ್ ಉದ್ಘಾಟಿಸಿದರು. 
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ರಾಜ್ಯದಲ್ಲಿ ಉಣ್ಣೆ ಕೈಮಗ್ಗ ಕಂಬಳಿ ನೇಕಾರರ ಸಹಕಾರ ಸಂಘಗಳಿಗೆ ಆರ್ಥಿಕ ನೆರವು ನೀಡಿ ಅವುಗಳ ಪುನಶ್ಚೇತನಕ್ಕೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಅ.2 ರಿಂದ 31ರವರೆಗೆ ಖಾದಿ ಮಹೋತ್ಸವವನ್ನು ಆಚರಣೆ ಮಾಡಲಾಗುತ್ತಿದ್ದು, ಉಣ್ಣೆ ಕೈಮಗ್ಗ ನೇಕಾರರು ಇದರ ಸದುಪಯೋಗ ಪಡೆದುಕೊಂಡು ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕೆಂದು ಕರ್ನಾಟಕ ಉಣ್ಣೆ ಕೈಮಗ್ಗ ಖಾದಿಯೇತರ ನೇಕಾರರ ಮಹಾಮಂಡಳಿ ಅಧ್ಯಕ್ಷ ಬಿ.ಮಲ್ಲಿಕಾರ್ಜುನ್ ತಿಳಿಸಿದರು.ಭಾನುವಾರ ನಗರದ ಉಣ್ಣೆ ಕಂಬಳಿ ಮಾರುಕಟ್ಟೆ ಆವರಣದಲ್ಲಿ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕು ವ್ಯಾಪ್ತಿಯ ಉಣ್ಣೆ ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘ ಮತ್ತು ಖಾದಿ ಟ್ರಸ್ಟ್ ಸಹಯೋಗದೊಂದಿಗೆ ಏರ್ಪಡಿಸಿದ್ದ ಖಾದಿ ಮಹೋತ್ಸವ-2025 ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಹಳ ವರ್ಷಗಳ ನಂತರ ಉಣ್ಣೆ ಕೈಮಗ್ಗ ನೇಕಾರಿಕೆಯನ್ನು ಪ್ರೋತ್ಸಾಹಿಸಲು ಹೊರಟಿರುವುದು ಸಂತಸ ವಿಷಯವೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾಮಂಡಳಿ ಕಾರ್ಯದರ್ಶಿ ಟಿ.ಗಂಗಾಧರ, ರಾಜ್ಯದೆಲ್ಲೆಡೆ ಖಾದಿ ಉತ್ಸವವನ್ನು ನೇಕಾರಿಕೆ ಸಮೂಹ ಆಚರಿಸುತ್ತಾ ಬಂದಿದೆ. ಕೆ.ವಿ.ಐ.ಸಿ (ಕರ್ನಾಟಕ ವಿಲೇಜ್ ಇಂಡ್ರಸಿಸ್ ಕಂಪನಿ) ಯೋಜನೆಯಡಿ ಈ ಕಾರ್ಯಕ್ರಮವನ್ನು ರೂಪಿಸಿದೆ. ಒಟ್ಟು 20ಕ್ಕೂ ಹೆಚ್ಚು ಸಹಕಾರ ಸಂಘಗಳ ಪ್ರತಿನಿಧಿಗಳು ಉತ್ತಮ, ಗುಣಮಟ್ಟದ ಕಂಬಳಿಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ. ಸಾರ್ವಜನಿಕರು ನೇಕಾರರಿಂದ ನೇಯಲ್ಪಟ್ಟ ಕಂಬಳಿಗಳನ್ನು ಖರೀದಿಸುವ ಮೂಲಕ ನೇಕಾರರ ಕುಟುಂಬಗಳ ಪುನಶ್ಚೇನಕ್ಕೆ ನೆರವಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿ ಧುರೀಣ ಆರ್.ಮಲ್ಲೇಶಪ್ಪ, ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಉಪಾಧ್ಯಕ್ಷ ಕಂದಿಕೆರೆಸುರೇಶ್‌ಬಾಬು, ನಗರಸಭಾ ಸದಸ್ಯ ಎಂ.ಜೆ.ರಾಘವೇಂದ್ರ, ತಿಪ್ಪೇಸ್ವಾಮಿ, ಅಜ್ಜಣ್ಣ, ಚೌಳೂರು ಬಸವರಾಜು, ಮಹಂತೇಶ್, ಚನ್ನವೀರಪ್ಪ, ಹೊನ್ನೂರಪ್ಪ, ಶಿವಶಂಕರ್, ಮಂಜುನಾಥ, ವೀರೇಶ್ ಮುಂತಾದವರು ಭಾಗವಹಿಸಿದ್ದರು.
)
)
;Resize=(128,128))