ಖಾದಿ ಧ್ವಜಗಳ ಮಾರಾಟ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಈ ಕುರಿತು ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ "ಖಾದಿ ರಾಷ್ಟ್ರಧ್ವಜ ಉತ್ತೇಜನಾ ಅಭಿಯಾನ " ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ಸಂಯೋಜಕ ಸಂತೋಷ ನರಗುಂದ ಹೇಳಿದರು.

ಹುಬ್ಬಳ್ಳಿ: ಖಾದಿ ಧ್ವಜಗಳ ಮಾರಾಟ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಈ ಕುರಿತು ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ "ಖಾದಿ ರಾಷ್ಟ್ರಧ್ವಜ ಉತ್ತೇಜನಾ ಅಭಿಯಾನ " ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ಸಂಯೋಜಕ ಸಂತೋಷ ನರಗುಂದ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತಂದು ಪಾಲಿಸ್ಟರ್‌ ತ್ರಿವರ್ಣ ಧ್ವಜಗಳ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ ಖಾದಿ ಧ್ವಜಗಳ ಬೇಡಿಕೆ, ಮಾರಾಟ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ₹2 ಕೋಟಿ ಮೌಲ್ಯದ ರಾಷ್ಟ್ರಧ್ವಜಗಳು ಮಾರಾಟವಾಗದೇ ಹಾಗೆ ಉಳಿದಿವೆ. ಜತೆಗೆ ಖಾದಿ ಕುಶಲಕರ್ಮಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ ಎಂದರು.

ಈ ಹಿನ್ನೆಲೆಯಲ್ಲಿ ಜನರಲ್ಲಿ ಖಾದಿ ರಾಷ್ಟ್ರಧ್ವಜ ಕುರಿತು ಜಾಗೃತಿ ಮೂಡಿಸುವ ದೃಷ್ಠಿಯಿಂದ ಮೂರು ಆಯಾಮಗಳಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಭಾರತೀಯ ಮಾನದಂಡದ ಬ್ಯುರೋ (ಬಿಐಎಸ್‌) ಪ್ರಮಾಣೀಕೃತ ಖಾದಿ ರಾಷ್ಟ್ರಧ್ವಜದ ಕುರಿತು ಜನರಲ್ಲಿ ಅರಿವು, ಖರೀದಿಸುವಂತೆ ಜಾಗೃತಿ ಮೂಡಿಸಲಾಗುವುದು. ಇ- ಕಾಮರ್ಸ್ ಮೂಲಕ ದೇಶ ಮತ್ತು ಜಗತ್ತಿನಾದ್ಯಂತ ಅಂತರ್ಜಾಲದ ಮೂಲಕ ಖಾದಿ ರಾಷ್ಟ್ರಧ್ವಜ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಭಾರತೀಯ ಧ್ವಜ ಸಂಹಿತೆಯ ವಿಭಾಗ 1.2ರಲ್ಲಿನ ತಿದ್ದುಪಡಿಯಾದ ಯಂತ್ರ ನಿರ್ಮಿತ ಪಾಲಿಸ್ಟರ್ ಧ್ವಜಗಳ ಅನುಮತಿ ಹಿಂಪಡೆಯಬೇಕು, ಎಲ್ಲ ಸರ್ಕಾರಿ ಹಾಗೂ ಸರ್ಕಾರೇತರ ಕಚೇರಿ, ಸಂಘ- ಸಂಸ್ಥೆ, ಶಾಲಾ- ಕಾಲೇಜುಗಳಲ್ಲಿ ಖಾದಿ ರಾಷ್ಟ್ರಧ್ವಜ ಬಳಕೆಗೆ ಆದೇಶಿಸಬೇಕು, ಖಾದಿ ರಾಷ್ಟ್ರಧ್ವಜ ತಯಾರಿಕಾ ಘಟಕಗಳನ್ನು ಆಧುನೀಕರಣಗೊಳಿಸಿ ರಾಷ್ಟ್ರೀಯ ಧಾಮವಾಗಿ ನಿರ್ಮಾಣ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.‌

ರಾಷ್ಟ್ರಧ್ವಜ ತಯಾರಿಸುವ ನೇಕಾರರಿಗೆ ರಾಜ್ಯ ಸರ್ಕಾರದಿಂದ ಎಂಡಿಎ ಹಾಗೂ ಪ್ರೋತ್ಸಾಹಧನ ₹130 ಕೋಟಿ ಬಾಕಿ ಇದೆ. ಇದನ್ನು ಕೂಡಲೇ ಬಿಡುಗಡೆ ಮಾಡಬೇಕು. ಸರ್ಕಾರಿ ನೌಕರರು ಹಾಗೂ ವಿದ್ಯಾರ್ಥಿಗಳು ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ಖಾದಿ ಬಟ್ಟೆ ಧರಿಸುವುದನ್ನು ಕಡ್ಡಾಯಗೊಳಿಸಬೇಕು. ಜನಪ್ರತಿನಿಧಿಗಳು ಈ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಸಹ ಸಂಯೋಜಕ ಶಾಮ ನರಗುಂದ, ಲಿಂಗರಾಜ ಧಾರವಾಡಶೆಟ್ಟರ್, ಅನಿತಾ ಕಡಗಲ್, ಕೆ.ವಿ. ಪತ್ತಾರ, ರಮೇಶ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ ಸೇರಿದಂತೆ ಹಲವರಿದ್ದರು.