ಖಾದಿ ಉತ್ಪನ್ನ ನಮ್ಮ ಸ್ವಾಭಿಮಾನದ ಪ್ರತೀಕ

| Published : Aug 25 2025, 01:00 AM IST

ಖಾದಿ ಉತ್ಪನ್ನ ನಮ್ಮ ಸ್ವಾಭಿಮಾನದ ಪ್ರತೀಕ
Share this Article
  • FB
  • TW
  • Linkdin
  • Email

ಸಾರಾಂಶ

ಖಾದಿ ಕೇವಲ ಬಟ್ಟೆ ಮಾತ್ರವಲ್ಲ ಅದು ನಮ್ಮ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಪರಿಸರ ಜೀವನ ಶೈಲಿಯ ಪ್ರತೀಕವು ಹೌದು

ಕೊಪ್ಪಳ: ಖಾದಿ ಉತ್ಪನ್ನ ಗ್ರಾಹಕರಿಗೆ ತಲುಪಿಸುವುದು, ಉತ್ತೇಜಿಸುವದಕ್ಕಾಗಿ ರಾಜ್ಯ ಸರ್ಕಾರವು ಖಾದಿ ಬಟ್ಟೆಗಳಿಗೆ ಶೇ.35ರಷ್ಟು, ರೇಷ್ಮೆ ಖಾದಿ ಬಟ್ಟೆಗಳಿಗೆ ಶೇ. 25 ರಷ್ಟು ರಿಯಾಯಿತಿ ನೀಡುವ ಮೂಲಕ ಖಾದಿ ಉತ್ಪನ್ನ ಗ್ರಾಹಕರಿಗೆ ತಲಪಿಸಲು ಅನುಕೂಲ ಮಾಡಿಕೊಡುತ್ತಿದೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಬಸವನಗೌಡ ತುರುವಿಹಾಳ ಹೇಳಿದರು.ನಗರದ ಮುಸ್ಲಿಂ ಶಾದಿಮಹಲ್‌ನಲ್ಲಿ ಜಿಲ್ಲಾಡಳಿತ, ಜಿಪಂ, ಕೊಪ್ಪಳ ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರ ಸಂಯುಕ್ತಾಶ್ರಯದಲ್ಲಿ ನಡೆದ ಖಾದಿ ಉತ್ಸವ 2025ರ ರಾಜ್ಯ ಮಟ್ಟದ ಖಾದಿ, ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ಖಾದಿ ಕೇವಲ ಬಟ್ಟೆ ಮಾತ್ರವಲ್ಲ ಅದು ನಮ್ಮ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಪರಿಸರ ಜೀವನ ಶೈಲಿಯ ಪ್ರತೀಕವು ಹೌದು, ರಾಜ್ಯದಲ್ಲಿ ಖಾದಿ ಉತ್ಪಾದನೆಗೆ ಒಂದು ಪ್ರಮುಖ ಇತಿಹಾಸವಿದ್ದು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸ್ವದೇಶಿ ಚಳವಳಿಯ ಪ್ರತೀಕವಾಗಿ ಖಾದಿ ಪ್ರತಿನಿಧಿಸುತ್ತದೆ. ಖಾದಿ ಉತ್ಪಾದನೆ ಉತ್ತೇಜಿಸಲು ಮತ್ತು ಪುನರುಜ್ಜೀವನಗೊಳಿಸುವ ರಾಜ್ಯ ಸರ್ಕಾರವು 1957 ರಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸ್ಥಾಪಿಸಿದ್ದು. ಖಾದಿ ಮಂಡಳಿ ಕಳೆದ 65 ವರ್ಷಗಳಿಗೂ ಮೇಲ್ಪಟ್ಟು ಖಾದಿ ಕ್ಷೇತ್ರವಾದ ಹತ್ತಿ, ರೇಷ್ಮೆ ಹಾಗೂ ಉಣ್ಣೆ ನೂಲಿನಿಂದ ಕೈ ಚರಕದ ಮೂಲಕ ನೂಲು ತೆಗೆದು ಸ್ಥಳೀಯ ಕಸುಬುದಾರರಿಂದಲೇ ಹತ್ತಿ ಬಟ್ಟೆ ಉಣ್ಣೆ ವಸ್ತ್ರ ತಯಾರಿಸಲು ಉತ್ತೇಜಿಸುತ್ತಾ ಬಂದಿರುವುದರಿಂದ ಪ್ರಸ್ತುತ ಕರ್ನಾಟಕದಲ್ಲಿ 175 ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಖಾದಿ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿವೆ ಎಂದರು.

ಖಾದಿ ಮತ್ತು ಗ್ರಾಮೋದ್ಯೋಗ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ₹1.70 ಲಕ್ಷ ಕೋಟಿಗೂ ಹೆಚ್ಚು ವಹಿವಾಟು ನಡೆದಿರುವುದರ ಜತೆಗೆ ಸುಮಾರು 1.94 ಕೋಟಿ ಉದ್ಯೋಗಾವಕಾಶ ಸೃಷ್ಟಿರುವುದು ಹೆಮ್ಮೆಯ ವಿಷಯ. ಅದೇ ರೀತಿ ಕರ್ನಾಟಕದಲ್ಲಿ ₹650 ಕೋಟಿಗೂ ಮಿಗಿಲಾದ ವಹಿವಾಟಿನೊಂದಿಗೆ 21,000 ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿರುವುದು ಹೆಮ್ಮೆಯ ವಿಷಯವಾಗಿದೆ, ಮುಂದಿನ 3 ರಿಂದ 4 ತಿಂಗಳೊಳಗೆ ರಾಜ್ಯದ ಇನ್ನೂ ವಿವಿಧ 6 ಜಿಲ್ಲೆಗಳಲ್ಲಿ ಖಾದಿ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗುವುದು ಎಂದರು.

ರಾ.ಬ.ಕೊ.ವಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಕೊಪ್ಪಳದಲ್ಲಿ ಆಯೋಜನೆ ಮಾಡಿರುವುದು ಸಂತೋಷ ತಂದಿದೆ. ಈ ವಸ್ತು ಪ್ರದರ್ಶನದಲ್ಲಿ ಜಮ್ಮು ಕಾಶ್ಮೀರದ ಶ್ರೀನಗರದಿಂದ ಬಂದು ಭಾಗವಹಿಸಿದ್ದಾರೆ. ಅವರಿಗೆ ಇಂತಹ ಮಾರಾಟ ಮೇಳಗಳು ಸಹಾಯಕವಾಗಿವೆ. ಕೈ ಮಗ್ಗದ ಕೆಲಸದಲ್ಲಿ ತೊಡಗಿದವರಿಗೆ ಸಹಕಾರ ನೀಡಿ ಅವರು ತಯಾರಿಸುವ ಬಟ್ಟೆಗಳಿಗೆ ಹೆಚ್ಚು ಬೆಲೆ ದೊರೆಯು ಹಾಗೆ ಮಾಡಿ, ಅವರನ್ನು ಜೀವನದ ಮುಖ್ಯ ವಾಹಿನಿಗೆ ಬರುವಂತೆ ಮಾಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಖಾದಿ ಎಂಬುದು ನಮ್ಮ ದೇಶಿಯ ಉಡುಪು. 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ವೋಕಲ್ ಫಾರ್ ಲೋಕಲ್ ಎಂಬ ಧ್ಯೇಯ ವಾಕ್ಯದೊಂದಿಗೆ ದೇಶೀಯ ವಸ್ತುಗಳಿಗೆ ನಾವು ಪ್ರಾಧಾನ್ಯತೆ ಕೊಡಬೇಕು ಹಾಗೂ ವಿಶೇಷವಾಗಿ ಹತ್ತಿಯಿಂದ ಉತ್ಪಾದನೆ ಮಾಡುವ ಎಲ್ಲ ವಸ್ತುಗಳಿಗೆ ಉತ್ತೇಜನ ನೀಡಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಖಾದಿ ಗ್ರಾಮೋದ್ಯೋಗ ಮಂಡಳಿಯ ಸಿಇಒ ಡಿ.ಬಿ.ನಟೇಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ರಾಮಣ್ಣ ನಾಯಕ, ನಗರಸಭೆ ಸದಸ್ಯ ಅಕ್ಬರ್ ಪಾಶಾ ಪಲ್ಟನ್, ಮಾಜಿ ಜಿಪಂ ಸದಸ್ಯ ಪ್ರಸನ್ನ ಗಡಾದ, ಮಂಡಳಿಯ ಕೊಪ್ಪಳ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೆ. ವೀರೇಶ ಸೇರಿದಂತೆ ಅನೇಕರು ಇದ್ದರು.

ಮಂಡಳಿಯ ಧಾರವಾಡ ಜಿಲ್ಲಾ ಅಭಿವೃದ್ಧಿ ಅಧಿಕಾರಿ ನಾಗನಗೌಡ ನೆಗಳೂರು ನಿರೂಪಿಸಿದರು.